ಗ್ರಾಮೀಣ ಭಾರತ ಬಯಲು ಶೌಚಮುಕ್ತ : ಪ್ರಧಾನಿ ಮೋದಿ

By Kannadaprabha NewsFirst Published Oct 3, 2019, 7:25 AM IST
Highlights

ಭಾರತ ಈಗಬಯಲು ಶೌಚ ಮುಕ್ತ ದೇಶ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದು ಇದು ನಮಗೆ ಮತ್ತೊಂದು ಹೆಗ್ಗಳಿಕೆಯಾಗಿದೆ. 

ಅಹಮದಾಬಾದ್‌ [ಅ.03]: ಕೇಂದ್ರ ಸರ್ಕಾರದ ಐತಿಹಾಸಿಕ ಸ್ವಚ್ಛ ಭಾರತ ಅಭಿಯಾನಕ್ಕೆ ಮತ್ತೊಂದು ಹಿರಿಮೆ ಸೇರ್ಪಡೆಯಾಗಿದ್ದು, ಗ್ರಾಮೀಣ ಭಾರತ ಸಂಪೂರ್ಣ ಬಯಲು ಶೌಚ ಮುಕ್ತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಘೋಷಣೆ ಮಾಡಿದ್ದಾರೆ.

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150ನೇ ಜಯಂತಿಯ ಅಂಗವಾಗಿ, ಗುಜರಾತ್‌ನ ಸಬರಮತಿ ನದಿ ದಡದಲ್ಲಿ ನಡೆದ ಸ್ವಚ್ಭ ಭಾರತ ದಿನ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, ರಿಮೋಟ್‌ ಬಟನ್‌ ಒತ್ತುವ ಮೂಲಕ ಭಾರತದ ನಕಾಶೆಯನ್ನು ಅನಾವರಣಗೊಳಿಸಿ ಇಂದು ಗ್ರಾಮೀಣ ಭಾರತ ಸಂಪೂರ್ಣವಾಗಿ ಬಯಲು ಶೌಚ ಮುಕ್ತವಾಗಿದೆ ಎಂದು ಘೋಷಣೆ ಮಾಡಿದ್ದಾರೆ. ಬಳಿಕ ಮಾತನಾಡಿದ ಅವರು, ಕಳೆದ 60 ತಿಂಗಳಿನಲ್ಲಿ 60 ಕೋಟಿ ಮಂದಿಗೆ 11 ಕೋಟಿ ಶೌಚಾಲಯ ನಿರ್ಮಿಸಲಾಗಿದೆ. ಭಾರತದ ಈ ಸಾಧನೆಗೆ ವಿಶ್ವ ರಾಷ್ಟ್ರಗಳೇ ಬೆರಗಾಗಿವೆ. ಈ ಸಾಧನೆ ಇಲ್ಲಿಗೆ ನಿಲ್ಲದೇ, ಚಳುವಳಿಯಾಗಿ ಮುಂದುವರಿಯಬೇಕಿದೆ ಎಂದು ಕರೆ ಕೊಟ್ಟಿದ್ದಾರೆ.

ಇದೇ ವೇಳೆ ನೈರ್ಮಲ್ಯ, ಪರಿಸರ ಸಂರಕ್ಷಣೆ ಹಾಗೂ ಪ್ರಾಣಿಗಳು ಗಾಂಧೀಜಿಗೆ ಪ್ರಿಯವಾಗಿದ್ದವು. ಇವೆಲ್ಲದಕ್ಕೂ ಪ್ಲಾಸ್ಟಿಕ್‌ ಅತಿ ದೊಡ್ಡ ತೊಡಕಾಗಿದ್ದು, 2022ರ ವೇಳೆಗೆ ಏಕ ಬಳಕೆ ಪ್ಲಾಸ್ಟಿಕ್‌ ಬಳಕೆಯನ್ನು ಹೋಗಲಾಡಿಸಬೇಕಾಗಿದೆ. ಬಯಲು ಶೌಕ ಮುಕ್ತ ಸ್ವಚ್ಛ ಭಾರತ ಅಭಿಯಾನದ ಅತೀ ದೊಡ್ಡ ಸಾಧನೆ. ಗಾಂಧಿ ಸತ್ಯಾಗ್ರಹಕ್ಕೆ ಕರೆಕೊಟ್ಟಾಗ ಜನ ಸ್ಪಂದಿಸಿದ ರೀತಿ, ಸ್ವಚ್ಛಾಗ್ರಹಕ್ಕೆ ಕರೆಕೊಟ್ಟಾಗಲೂ ಸ್ಪಂದಿಸಿದ್ದಾರೆ ಎಂದು ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ದೇಶದ 20 ಸಾವಿರ ಗ್ರಾಮದ ಮುಖ್ಯಸ್ಥರು ಭಾಗವಹಿಸಿದ್ದರು.

ಭಾಷಣಕ್ಕೂ ಮೊದಲು ಸಬರಮತಿ ಆಶ್ರಮದ ಪ್ರವಾಸಿಗಳ ಪುಸ್ತಕದಲ್ಲಿ ಸಹಿ ಮಾಡಿದ ಮೋದಿ, ಗಾಂಧೀಜಿಯವರ 150ನೇ ವರ್ಷಾಚರಣೆ ವೇಳೆ ಅವರ ಸ್ವಚ್ಛ ಭಾರತದ ಕನಸು ನನಸಾಗಿದ್ದು ಹೆಚ್ಚು ಸಮಾಧಾನ ತಂದಿದೆ. ಇದೇ ವೇಳೆ ಭಾರತ ಬಯಲು ಶೌಕ ಮುಕ್ತವಾಗಿದ್ದು ಕೂಡ ಅದೃಷ್ಟಎಂದು ಭಾವಿಸುತ್ತೇನೆ ಎಂದು ಬರೆದಿದ್ದಾರೆ. ಇದೇ ವೇಳೆ ಬಾಪೂ ಸ್ಮರಣಾರ್ಥ 150 ರು. ನಾಣ್ಯ ಕೂಡ ಬಿಡುಗಡೆ ಮಾಡಿದರು.

ಐತಿಹಾಸಿಕ ಸ್ಮಾರಕ ಬಳಿ ಪ್ಲಾಸ್ಟಿಕ್‌ ವಸ್ತು ನಿಷೇಧ

ಈ ನಡುವೆ ಪರಿಸರ ಮಾಲಿನಕ್ಕೆ ಕಾರಣವಾಗುವ ಹಾಗೂ ಪರಿಸರದಲ್ಲಿ ಬಹುಬೇಗ ಕೊಳೆತುಹೋಗದ ಏಕ ಬಳಕೆಯ ಪ್ಲಾಸ್ಟಿಕ್‌ಗಳನ್ನು ಐತಿಹಾಸಿಕ ಸ್ಮಾರಕಗಳ ಒಳಗೆ ಬಿಟ್ಟುಕೊಳ್ಳುವುದಿಲ್ಲ ಎಂದು ಪ್ರವಾಸೋದ್ಯಮ ಸಚಿವ ಪ್ರಹ್ಲಾದ್‌ ಪಟೇಲ್‌ ಘೋಷಣೆ ಮಾಡಿದ್ದಾರೆ. ದೆಹಲಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪಟೇಲ್‌, ಐತಿಹಾಸಿಕ ಸ್ಮಾರಕಗಳು ಇರುವ 100 ಮೀಟರ್‌ಗಳ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್‌ ವಸ್ತುಗಳನ್ನು ಸಂಪೂರ್ಣವಾಗಿ ನಿಷೇಧಿಸುವುದಾಗಿ ಹೇಳಿದ್ದಾರೆ.

click me!