
ಅಹಮದಾಬಾದ್(ಸೆ.14): ಭಾರತೀಯರು ದಶಕಗಳಿಂದ ಎದುರು ನೋಡುತ್ತಿದ್ದ ದೇಶದ ಮೊದಲ ಬುಲೆಟ್ ರೈಲು ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಜಪಾನ್ ಪ್ರಧಾನಿ ಶಿಂಜೋ ಅಬೆ ಜತೆಗೂಡಿ ಗುಜರಾತಿನ ಅಹಮ ದಾಬಾದ್‌ನಲ್ಲಿ ಗುರುವಾರ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಮುಂಬೈ- ಅಹಮದಾಬಾದ್ ನಡುವೆ ಸಂಚರಿಸುವ ಈ ಬುಲೆಟ್ ರೈಲು ಯೋಜನೆಗೆ ಸಾಬರಮತಿ ಆಶ್ರಮ ದಿಂದ 2 ಕಿ.ಮೀ. ದೂರದಲ್ಲಿ ಶಿಲಾನ್ಯಾಸ ಮಾಡಲಾಗುತ್ತದೆ. ಜಪಾನ್'ನಿಂದ ಕೇವಲ ಶೇ.0.1ರ ಬಡ್ಡಿ ದರದಲ್ಲಿ 88 ಸಾವಿರ ಕೋಟಿ ರು. ಸಾಲ ಪಡೆದು 1.10 ಲಕ್ಷ ಕೋಟಿ ರು. ವೆಚ್ಚದಲ್ಲಿ ಗಂಟೆಗೆ ಗರಿಷ್ಠ 350 ಕಿ.ಮೀ. ವೇಗದಲ್ಲಿ ಓಡುವ ಬುಲೆಟ್ ರೈಲು ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.
ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷ ಗಳು ಪೂರ್ಣಗೊಳ್ಳಲಿರುವ 2022 ರ ಆ.15ರಂದು ಈ ರೈಲು ತನ್ನ ಸಂಚಾರವನ್ನು ಆರಂಭಿಸಬೇಕು ಎಂಬ ಗುರಿಯನ್ನು ನೀಡಲಾಗಿದೆ. ಇಷ್ಟು ದಿವಸ ಚೀನಾ, ಜಪಾನ್, ಯುರೋಪ್'ನ ಬುಲೆಟ್ ರೈಲುಗಳು, ಅವುಗಳ ವೇಗವನ್ನು ಬೆರಗುಗಣ್ಣಿನಿಂದ ನೋಡುತ್ತಿದ್ದ ಭಾರತೀಯರು ಇನ್ನು 5 ವರ್ಷಗಳಲ್ಲಿ ಸ್ವದೇಶಿ ಬುಲೆಟ್ ರೈಲಿನಲ್ಲಿ ಸಂಚರಿಸಿ ಆನಂದಪಡಬಹುದಾಗಿದೆ.
ಬುಲೆಟ್ ರೈಲು ಯೋಜನೆ ನರೇಂದ್ರ ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮಗಳಲ್ಲಿ ಒಂದು. ಈ ಯೋಜನೆಗೆ 2015ರಲ್ಲಿ ಕೇಂದ್ರ ಸರ್ಕಾರ ಅನುಮೋದನೆ ನೀಡಿತ್ತು. ಯೋಜನೆ ಪೂರ್ಣಗೊಳ್ಳಲು 2023ನೇ ಇಸ್ವಿಯವರೆಗೂ ಕಾಯಬೇಕಿತ್ತಾದರೂ, ಭಾರತೀಯ ಎಂಜಿನಿಯರ್‌ಗಳು ನಿಗದಿತ ಗುರಿಗಿಂತ ಮೊದಲೇ ಯೋಜನೆ ಪೂರ್ಣಗೊಳಿಸುತ್ತಾರೆ ಎಂಬ ವಿಶ್ವಾಸದೊಂದಿಗೆ ಗುರಿಯನ್ನು ಹಿಂದೂಡಲಾಗಿದೆ ಎಂದು ರೈಲ್ವೆ ಮಂತ್ರಿ ಪೀಯೂಷ್ ಗೋಯಲ್ ಮಾಹಿತಿ ನೀಡಿದ್ದಾರೆ.
ಟಿಕೆಟ್ ದರ ₹3 ರಿಂದ 5 ಸಾವಿರ?
ದೇಶದ ಮೊದಲ ಬುಲೆಟ್ ರೈಲಿನ ಪ್ರಯಾಣ ದರ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ 2 ಟೈರ್ ದರದಷ್ಟೇ ಇರಬಹುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸುತ್ತಿದ್ದಾರಾದರೂ, ಅದಕ್ಕಿಂತ ಹೆಚ್ಚು ಇರಲಿದೆ ಎಂದು ಹೇಳಲಾಗುತ್ತಿದೆ. ಕನಿಷ್ಠ 3 ಸಾವಿರ ಹಾಗೂ ಗರಿಷ್ಠ 5 ಸಾವಿರ ರು.ವರೆಗೂ ಪ್ರಯಾಣ ದರ ಇರಬಹುದು ಎನ್ನಲಾಗುತ್ತಿದೆ.
ಅಲ್ಲದೆ ಈ ರೈಲಿನಲ್ಲಿ ಎರಡು ರೀತಿಯ ವೇಗದ ಆಯ್ಕೆ ಪ್ರಯಾಣಿಕರಿಗೆ ಇರುತ್ತದೆ. ಮುಂಬೈ- ಅಹಮದಾಬಾದ್ ನಡುವಣ 508 ಕಿ.ಮೀ. ದೂರವನ್ನು 2.58 ಗಂಟೆಯಲ್ಲಿ ಕ್ರಮಿಸಬಹುದಾದ ಹೈಸ್ಪೀಡ್ ಹಾಗೂ ಕೇವಲ 2.07 ಗಂಟೆಯಲ್ಲಿ ತಲುಪಬಹುದಾದ ರ್ಯಾಪಿಡ್ ಹೈಸ್ಪೀಡ್ ಆಯ್ಕೆ ನೀಡಲಾಗುತ್ತದೆ. ಹೀಗಾಗಿ ಪ್ರಯಾಣ ದರ 3 ಸಾವಿರದಿಂದ 5 ಸಾವಿರದವರೆಗೂ ಇರಬಹುದು.
ಮುಂಬೈ- ಅಹಮದಾಬಾದ್ ನಡುವೆ ಹಾಲಿ ಸಂಚರಿಸುತ್ತಿರುವ ಎಸಿ ಸ್ಟ್ ಕ್ಲಾಸ್ ರೈಲಿನ ಪ್ರಯಾಣ ದರಕ್ಕಿಂತ ಒಂದೂವರೆಪಟ್ಟು ಹೆಚ್ಚು ದರವನ್ನು ಬುಲೆಟ್ ರೈಲು ಹೊಂದಿರುತ್ತದೆ ಎಂದು ರಾಷ್ಟ್ರೀಯ ಹೈಸ್ಪೀಡ್ ರೈಲು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.