[ಇಂಡಿಯಾ ಗೇಟ್] ಮೋದಿ ಗುಜರಾತ್ ಗೆಲುವಿಗೆ ಜಿಎಸ್‌ಟಿ ಅಡ್ಡಿ

Published : Oct 24, 2017, 05:57 PM ISTUpdated : Apr 11, 2018, 01:12 PM IST
[ಇಂಡಿಯಾ ಗೇಟ್] ಮೋದಿ ಗುಜರಾತ್ ಗೆಲುವಿಗೆ ಜಿಎಸ್‌ಟಿ ಅಡ್ಡಿ

ಸಾರಾಂಶ

ಉತ್ತರ ಪ್ರದೇಶದಿಂದ ಅಸ್ಸಾಂವರೆಗೂ ಸಾಮ್ರಾಜ್ಯ ವಿಸ್ತರಿಸುತ್ತಿರುವ ಗೆಲುವಿನ ಜೋಡಿಗೆ ತವರು ರಾಜ್ಯದ ಬಗ್ಗೆಯೇ ಆತಂಕ!

ಉತ್ತರ ಪ್ರದೇಶದಿಂದ ಹಿಡಿದು ಅಸ್ಸಾಂವರೆಗೆ ಒಂದೊಂದೇ ಕೋಟೆಗಳನ್ನು ಗೆಲ್ಲುತ್ತಲೇ ಹೋದ ಮೋದಿ ಸಾಹೇಬರ ರಥ ಸ್ವಂತ ರಾಜ್ಯ ಗುಜರಾತ್‌ನಲ್ಲಿ ಮಾತ್ರ ಯಾಕೋ ಬಹಳ ನಿಧಾನವಾಗಿ ಸಾಗುತ್ತಿದೆ. ಗುಜರಾತ್ ಬಿಜೆಪಿ ಮೂಲಗಳಿಂದಲೇ ಬರುತ್ತಿರುವ ಸುದ್ದಿಗಳ ಪ್ರಕಾರ ಪಟೇಲರ ಸಿಟ್ಟಿಗಿಂತಲೂ ಬಿಜೆಪಿಯನ್ನು ಸತಾಯಿಸುತ್ತಿರುವುದು ಜಿಎಸ್‌ಟಿ ಕಾರಣದಿಂದ ಉಂಟಾಗಿರುವ ಅಸಂತೋಷ.

ಪಟೇಲರ ಸಿಟ್ಟನ್ನು 2002ರ ಚುನಾವಣೆಗಳಿಂದ ಮೋದಿ ಎದುರಿಸುತ್ತಲೇ ಬಂದಿದ್ದಾರೆ. ಮೇಲಾಗಿ ಪಟೇಲರ ಸಿಟ್ಟಿನ ಕಾರಣದಿಂದ ಹಿಂದುಳಿದ ವರ್ಗಗಳು ಬಿಜೆಪಿ ಜೊತೆಗೆ ಬಂದು ನಿಲ್ಲುವುದು ಒಂದು ರೀತಿಯಲ್ಲಿ ಪ್ಲಸ್ ಪಾಯಿಂಟ್. ಆದರೆ ಈ ಬಾರಿ ಜಿಎಸ್‌ಟಿ ಕಾರಣದಿಂದ 2 ದಶಕಗಳಲ್ಲಿ ಕಂಡು ಕೇಳರಿಯದ ಒಂದು ಒಳಸಿಟ್ಟು ಮೋದಿ ಮತ್ತು ಅಮಿತ್ ಶಾರಿಗೆ ಅರಿವಿಗೆ ಬಂದಿದೆ.

ಹೀಗಾಗಿ ಇಬ್ಬರೂ ಹಗಲಿರುಳು ಗುಜರಾತ್ ಗೆಲುವಿಗೆ ಶ್ರಮ ಹಾಕುತ್ತಿದ್ದಾರೆ. ಎಷ್ಟರ ಮಟ್ಟಿಗೆ ಅಂದರೆ ಗುಜರಾತ್‌ನಲ್ಲಿ ಯಾವ ಕ್ಷೇತ್ರಕ್ಕೆ ಯಾರಿಗೆ ಟಿಕೆಟ್ ಎಂಬುದರಿಂದ ಹಿಡಿದು ಪ್ರಚಾರ ಹೇಗಿರಬೇಕು, ಯಾರು ಎಲ್ಲಿಗೆ ಹೋಗಬೇಕು, ಡ್ಯಾಮೇಜ್ ಕಂಟ್ರೋಲ್ ಹೇಗೆ ಎಂಬ ಬಗ್ಗೆ ಸ್ವಯಂ ಪ್ರಧಾನಿಯೇ ತಲೆ ಕೆಡಿಸಿಕೊಳ್ಳಲು ಆರಂಭಿಸಿದ್ದಾರಂತೆ.

ರಾಜಕಾರಣದಲ್ಲಿ ಹೀಗೆಯೇ, ತುಂಬಾ ಸುಲಭ ಎನಿಸಿಕೊಂಡ ಯುದ್ಧಗಳೇ ಕೆಲವೊಮ್ಮೆ ಹೆಚ್ಚು ನಿದ್ದೆಗೆಡಿಸುತ್ತವೆ.

ಬಿಜೆಪಿ ಲೆಕ್ಕಾಚಾರ:

ಜಿಎಸ್‌ಟಿ ಕಾರಣದಿಂದ ಅಸಂತೋಷದ ನಡುವೆಯೂ ಬಿಜೆಪಿ ಲೆಕ್ಕಾಚಾರ ಇರುವುದು ಮುಖ್ಯವಾಗಿ ಮೂರು ವಿಷಯಗಳ ಮೇಲೆ.

1.ಕಾಂಗ್ರೆಸ್ ಬಳಿ ಹೇಳಿಕೊಳ್ಳುವ ಯಾವುದೇ ನಾಯಕರಿಲ್ಲ.

2. ಕಾಂಗ್ರೆಸ್ ಪಟೇಲರ ಸಿಟ್ಟನ್ನು ತುಂಬಾ ನೆಚ್ಚಿಕೊಂಡಿರುವುದರಿಂದ ಉಳಿದ ಸಣ್ಣ ಸಣ್ಣ ಸಮುದಾಯಗಳು ಬಿಜೆಪಿಯತ್ತ ಸಹಜವಾಗಿ ವಾಲಬಹುದು ಮತ್ತು ಬಿಜೆಪಿ ಕೂಡ ಅತೀ ಹೆಚ್ಚು ಪಟೇಲ್ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿ ಡ್ಯಾಮೇಜ್ ಕಂಟ್ರೋಲ್ ಮಾಡುವುದು.

3. ಗುಜರಾತಿನ ನರೇಂದ್ರ ಮೋದಿಯವರೇ ಪ್ರಧಾನಿಯಾಗಿರುವಾಗ ಗುಜರಾತಿಗಳು ಕೊನೆಗೆ ಬಂದು ಬಿಜೆಪಿಯನ್ನೇ ಅನಿವಾರ್ಯವಾಗಿ ಅಪ್ಪಿಕೊಳ್ಳಬಹುದು ಎಂಬ ಕೊನೆಯ ಆಸೆ.

ಕಾಂಗ್ರೆಸ್ ಲೆಕ್ಕಾಚಾರ:

ಗುಜರಾತಿನಲ್ಲಿ ಪಟೇಲರ ಅಸಂತೋಷವೇ ಕಾಂಗ್ರೆಸ್‌ನ ಮುಖ್ಯ ಚುನಾವಣಾ ಬತ್ತಳಿಕೆ. ತನ್ನ ಬಳಿ ತೋರಿಸಲು ಯಾವುದೇ ಮುಖ ಇಲ್ಲದೆ ಇರುವುದರಿಂದ ಕಾಂಗ್ರೆಸ್ ಹಾರ್ದಿಕ್ ಪಟೇಲ್ ಪ್ರಚಾರದ ಮೇಲೆ ಹೆಚ್ಚು ಅವಲಂಬಿತವಾಗಿದೆ. ಜೊತೆಗೆ ಹಿಂದುಳಿದ ವರ್ಗಗಳ ಅಲ್ಪೇಶ್ ಮತ್ತು ದಲಿತ ಸಮುದಾಯದ ಜಿಗ್ನೇಶ್ ಮೇವಾನಿ ಕಾಂಗ್ರೆಸ್ ತೆಕ್ಕೆಗೆ ಬಂದಿದ್ದು, ಬಿಜೆಪಿ ವಿರೋಧಿ ಮತಗಳನ್ನು ಒಟ್ಟಾಗಿ ಹರಿದು ಹಂಚಿ ಹೋಗದಂತೆ ತಡೆಯುವುದೇ ಕಾಂಗ್ರೆಸ್ ಲೆಕ್ಕಾಚಾರ.

2 ದಶಕಗಳಿಂದ ಬೇರೂರಿರುವ ಬಿಜೆಪಿ ಮತ್ತು ಮೋದಿ ಪ್ರಭಾವವನ್ನು ಕಿತ್ತೆಸೆಯಲು ಕಾಂಗ್ರೆಸ್ ಪಕ್ಷಕ್ಕೆ 6ರಿಂದ 7 ಪ್ರತಿಶತ ಮತಗಳು ಬಿಜೆಪಿ ಬುಟ್ಟಿಯಿಂದ ಬೇಕೇ ಬೇಕು. ಆದರೆ ಒಬ್ಬ ಜನನಾಯಕ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಇರದೇ ಇರುವುದು ಕಾಂಗ್ರೆಸ್‌’ನ ದೊಡ್ಡ ಮೈನಸ್ ಪಾಯಿಂಟ್.

ಪ್ರಶಾಂತ್ ನಾತು

ಇಂಡಿಯಾ ಗೇಟ್

ದೆಹಲಿಯಿಂದ ಕಂಡ ರಾಜಕಾರಣ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Breaking: ಕನ್ನಡ ನಾಡಿನ ಭೀಷ್ಮ ಭೀಮಣ್ಣ ಖಂಡ್ರೆ ಇನ್ನಿಲ್ಲ: ಕಳಚಿಬಿದ್ದ ಸ್ವಾತಂತ್ರ್ಯ ಹೋರಾಟ ಮತ್ತು ಏಕೀಕರಣದ ಕೊಂಡಿ!
ಕೆಂಪು, ನೀಲಿ, ಹಸಿರು, ಭಾರತೀಯ ರೈಲುಗಳ ಕಲರ್ ಕೋಡ್ ಬಗ್ಗೆ ನಿಮಗೆಷ್ಟು ಗೊತ್ತು?