ಪಕ್ಷೇತರ ಮಂತ್ರಿಗಳಿಗೆ ಇಂದು ಖಾತೆ ಹಂಚಿಕೆ? ಯಾರಿಗೆ ಯಾವ ಖಾತೆ?

By Kannadaprabha NewsFirst Published Jun 24, 2019, 7:40 AM IST
Highlights

ಪಕ್ಷೇತರ ಮಂತ್ರಿಗಳಿಗೆ ಇಂದು ಖಾತೆ ಹಂಚಿಕೆ?| ಶಂಕರ್‌ಗೆ ಪೌರಾಡಳಿತ? ನಾಗೇಶ್‌ಗೆ ಶಿಕ್ಷಣ/ಅಬಕಾರಿ/ರೇಷ್ಮೆ?| ಪ್ರಮಾಣ ಸ್ವೀಕರಿಸಿ 10 ದಿನದಿಂದ ಖಾಲಿಯಿರುವ ಸಚಿವರು

ಬೆಂಗಳೂರು[ಜೂ.24]: ಮೈತ್ರಿ ಸರ್ಕಾರದಲ್ಲಿ 10 ದಿನಗಳ ಹಿಂದೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಆರ್‌. ಶಂಕರ್‌ ಹಾಗೂ ಎಚ್‌. ನಾಗೇಶ್‌ ಅವರಿಗೆ ಸೋಮವಾರ ಖಾತೆ ಹಂಚುವ ಸಾಧ್ಯತೆ ಇದೆ.

ಸದ್ಯ ಮುಖ್ಯಮಂತ್ರಿಗಳ ಬಳಿ ಪ್ರಮುಖವಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ, ಅಬಕಾರಿ, ಪೌರಾಡಳಿತ ಖಾತೆಗಳಿವೆ. ಈ ಪೈಕಿ ಕಾಂಗ್ರೆಸ್‌ ಶಾಸಕರಾಗಿದ್ದ ಸಿ.ಎಸ್‌. ಶಿವಳ್ಳಿ ಅವರ ನಿಧನದಿಂದ ಖಾಲಿ ಇರುವ ಪೌರಾಡಳಿತ ಖಾತೆ ಸಹಜವಾಗಿ ಮುಖ್ಯಮಂತ್ರಿಗಳ ಬಳಿ ಇದೆ. ಕಾಂಗ್ರೆಸ್‌ ಜೊತೆ ಗುರುತಿಸಿಕೊಂಡಿರುವ ಆರ್‌. ಶಂಕರ್‌ ಅವರಿಗೆ ಪೌರಾಡಳಿತ ಖಾತೆ ನೀಡುವುದರಲ್ಲಿ ಯಾವುದೇ ಗೊಂದಲವಿಲ್ಲ.

ಉಳಿದಂತೆ ಜೆಡಿಎಸ್‌ ಪಾಲಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮತ್ತು ಅಬಕಾರಿ ಖಾತೆಗಳಿವೆ. ಈ ಎರಡು ಖಾತೆಗಳು ಸಾಕಷ್ಟುಪ್ರಮುಖ ಖಾತೆಗಳಾಗಿರುವುದರಿಂದ ಪಕ್ಷೇತರರಾಗಿರುವ ನಾಗೇಶ್‌ ಅವರಿಗೆ ನೀಡಲು ಮೀನಮೇಷ ಎಣಿಸಲಾಗುತ್ತಿದೆ. ಈ ಮಧ್ಯೆ ನಾಗೇಶ್‌ ಅವರು ಶಿಕ್ಷಣ ಅಥವಾ ಅಬಕಾರಿ ಖಾತೆಯನ್ನು ನೀಡಿದರೆ ನಿಭಾಯಿಸುವುದಾಗಿ ಹೇಳುವ ಮೂಲಕ ಇವೆರಡರಲ್ಲಿ ಒಂದನ್ನು ನೀಡಬೇಕೆಂದು ಬಹಿರಂಗವಾಗಿ ಬೇಡಿಕೆ ಮಂಡಿಸಿದ್ದಾರೆ.

ಹೀಗಾಗಿ ಮುಖ್ಯಮಂತ್ರಿಗಳು ಯಾವ ಖಾತೆ ನೀಡುತ್ತಾರೆಂಬುದು ಕುತೂಹಲವಾಗಿದೆ. ಈ ಎರಡು ಖಾತೆ ಬಿಟ್ಟು ಬೇರೆ ಸಚಿವರ ಬಳಿ ಇರುವ ಖಾತೆ ನೀಡಬಹುದು. ಇಲ್ಲವೇ ಸಾ.ರಾ.ಮಹೇಶ್‌ ಅವರ ಬಳಿ ಇರುವ ಪ್ರವಾಸೋದ್ಯಮ ಮತ್ತು ರೇಷ್ಮೆ ಖಾತೆಯ ಪೈಕಿ ರೇಷ್ಮೆ ಇಲಾಖೆಯನ್ನು ನಾಗೇಶ್‌ ಅವರಿಗೆ ನೀಡಿದರೂ ಅಶ್ಚರ್ಯವಿಲ್ಲ.

ಆರ್‌. ಶಂಕರ್‌ ಹಾಗೂ ನಾಗೇಶ್‌ ಅವರು ಪ್ರಮಾಣ ವಚನ ಸ್ವೀಕರಿಸಿ 10 ದಿನಗಳಾದರೂ ಖಾತೆ ಹಂಚಿಕೆ ಮಾಡದ ಬಗ್ಗೆ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌. ವಿಶ್ವನಾಥ್‌, ಪ್ರತಿಪಕ್ಷ ಬಿಜೆಪಿ ಹಾಗೂ ಸಾರ್ವಜನಿಕ ವಲಯದಿಂದ ಟೀಕೆಗಳು ಕೇಳಿ ಬಂದಿದ್ದವು. ಸ್ವತಃ ಶಂಕರ್‌ ಕೂಡ ಬಹಿರಂಗವಾಗಿ ಅತೃಪ್ತಿ ವ್ಯಕ್ತಪಡಿಸಿ, ಈ ಕುರಿತು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಬಳಿ ಗೋಳು ತೋಡಿಕೊಂಡಿದ್ದರು.

click me!