IMA ಮನ್ಸೂರ್ ದತ್ತು ಪಡೆದಿದ್ದ ಸರ್ಕಾರಿ ಶಾಲೆಗೆ ಸಂಕಷ್ಟ

By Web DeskFirst Published Jun 13, 2019, 8:40 AM IST
Highlights

ಐಎಂಎ ಸಂಸ್ಥೆ ಮಾಲಿಕ ಮನ್ಸೂರ್‌ ಖಾನ್‌ ನಾಪತ್ತೆಯಾದ ಬೆನ್ನಲೆ ಆತ ದತ್ತು ಪಡೆದಿದ್ದ ಶಿವಾಜಿನಗರದ ಸರ್ಕಾರಿ ಶಾಲೆಯ ಸುಮಾರು 1500 ವಿದ್ಯಾರ್ಥಿಗಳು ತೊಂದರೆಗೆ ಸಿಲುಕಿದ್ದಾರೆ.  

ಬೆಂಗಳೂರು(ಜೂ.13) :  ವಂಚನೆ ಆರೋಪ ಹೊತ್ತು ಐಎಂಎ ಸಂಸ್ಥೆ ಮಾಲಿಕ ಮನ್ಸೂರ್‌ ಖಾನ್‌ ನಾಪತ್ತೆಯಾದ ಬೆನ್ನಲೆ ಆತ ದತ್ತು ಪಡೆದಿದ್ದ ಶಿವಾಜಿನಗರದ ಸರ್ಕಾರಿ ಶಾಲೆಯ ಸುಮಾರು 1500 ವಿದ್ಯಾರ್ಥಿಗಳು ತೊಂದರೆಗೆ ಸಿಲುಕಿದ್ದು, ಎರಡು ದಿನಗಳಿಂದ ಶಾಲೆಗೆ ರಜೆ ನೀಡಲಾಗಿದೆ.

ಮನ್ಸೂರ್‌ ಖಾನ್‌ ಎರಡು ವರ್ಷಗಳ ಹಿಂದೆ ತಾನು ಪ್ರಾಥಮಿಕ ಶಿಕ್ಷಣ ಪಡೆದಿದ್ದ ಶಿವಾಜಿನಗರದ ಸರ್ಕಾರಿ ವಿಕೆಒ ಪಬ್ಲಿಕ್‌ ಶಾಲೆಯನ್ನು ದತ್ತು ಪಡೆದು ಖಾಸಗಿ ಸಂಸ್ಥೆಗಳು ನಾಚುವಂತೆ ಅಭಿವೃದ್ಧಿಪಡಿಸಿದ್ದ. ಆ ಶಾಲೆಗೆ ತನ್ನ ಐಎಂಎ ಸಂಸ್ಥೆಯ ಮೂಲಕ 76 ಶಿಕ್ಷಕರನ್ನು ನೇಮಿಸಿ ಮಕ್ಕಳಿಗೆ ಗುಣಮಟ್ಟಶಿಕ್ಷಣಕ್ಕೆ ಮನ್ಸೂರ್‌ ವ್ಯವಸ್ಥೆ ಕಲ್ಪಿಸಿದ್ದ.

ಮನ್ಸೂರ್‌ ದತ್ತು ಪಡೆದ ಬಳಿಕ ಶಾಲೆಯ ಚಿತ್ರಣವೇ ಬದಲಾಯಿತು. ಹಳೆ ಕಟ್ಟಡದ ನವೀಕರಣ, ಕಂಪ್ಯೂಟರ್‌ಗಳು ಸೇರಿದಂತೆ ಶಾಲೆಗೆ ಮೂಲಭೂತ ಸೌಲಭ್ಯಗಳನ್ನು ಆತ ಒದಗಿಸಿದ್ದ. ಹೀಗಾಗಿ ವಿಕೆಒ ಪಬ್ಲಿಕ್‌ ಶಾಲೆಗೆ ಪ್ರವೇಶ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮುಂದಾದರು. ಪ್ರಸ್ತುತ ಆ ಶಾಲೆಯಲ್ಲಿ 1500 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.

ಪ್ರತಿ ತಿಂಗಳು 32 ಲಕ್ಷ ವ್ಯಯ :  ವಿಕೆಒ ಪಬ್ಲಿಕೆ ಶಾಲೆಯಲ್ಲಿ ಕಿರಿಯ ಪ್ರಾಥಮಿಕ ತರಗತಿಯಿಂದ ಕಾಲೇಜು ಶಿಕ್ಷಣವರೆಗೆ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಈ ಶಾಲೆಗೆ ಸರ್ಕಾರವು ಮೂವರು ಶಿಕ್ಷಕರನ್ನು ನೇಮಿಸಿದ್ದು, ಇನ್ನುಳಿದ 76 ಶಿಕ್ಷಕರು ಮನ್ಸೂರ್‌ ಖಾನ್‌ನ ಐಎಂಎ ಸಂಸ್ಥೆ ಮೂಲಕ ನೇಮಕಗೊಂಡಿದ್ದರು. ಹೀಗೆ ಶಾಲೆಯ ಶಿಕ್ಷಕರ ಮತ್ತು ಸಿಬ್ಬಂದಿ ವೇತನ ಸೇರಿದಂತೆ ಇತರೆ ವೆಚ್ಚಗಳಿಗೆ ಪ್ರತಿ ತಿಂಗಳು 32 ಲಕ್ಷವನ್ನು ಮನ್ಸೂರ್‌ ವಿನಿಯೋಗಿಸುತ್ತಿದ್ದರು ಎಂದು ಶಾಲೆಯ ಪ್ರಾಂಶುಪಾಲೆ ನಫೀವುನ್ನೀಸಾ ಸುದ್ದಿಗಾರರಿಗೆ ತಿಳಿಸಿದರು.

2017-18ನೇ ಸಾಲಿನಲ್ಲಿ ಶಾಲೆಯನ್ನು ಮನ್ಸೂರ್‌ ದತ್ತು ಪಡೆದರು. ಬಳಿಕ ಸರ್ಕಾರಿ ಶಿಕ್ಷಕರ ಬದಲಿಗೆ ತಮ್ಮ ಸಂಸ್ಥೆ ಮೂಲಕ ಶಿಕ್ಷಕರನ್ನು ಅವರು ನೇಮಿಸಿದ್ದರು. ಅಲ್ಲದೆ ಶಾಲೆಗೆ ಮೂಲಭೂತ ಸೌಕರ್ಯಗಳನ್ನು ಸಹ ಕಲ್ಪಿಸಿದ್ದರು. ಮನ್ಸೂರ್‌ ವಿರುದ್ಧ ವಂಚನೆ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಐಎಂಎ ಸಂಸ್ಥೆಯಿಂದ ನೇಮಕಗೊಂಡಿರುವ ಶಿಕ್ಷಕರಿಗೆ ವೇತನ ಸಮಸ್ಯೆ ಎದುರಾಗಿದೆ. ಹೀಗಾಗಿ ತಮ್ಮ ಸಂಬಳ ಸಮಸ್ಯೆ ಇತ್ಯರ್ಥವಾಗುವವರೆಗೆ ಪಾಠ ಮಾಡುವುದಿಲ್ಲ ಎಂದು ಅವರು ಪಟ್ಟು ಹಿಡಿದಿದ್ದಾರೆ. ಇದರಿಂದಾಗಿ ಶಾಲೆಗೆ ರಜೆ ನೀಡಲಾಗಿದೆ ಎಂದು ಶಿಕ್ಷಕರೊಬ್ಬರು ಹೇಳಿದ್ದಾರೆ.

ಶಿವಾಜಿನಗರದ ಪ್ಲಬಿಕ್‌ ಶಾಲೆಯಲ್ಲಿ ಮಕ್ಕಳಿಗೆ ತೊಂದರೆ ಉಂಟಾಗದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಆ ಶಾಲೆಗೆ ಭೇಟಿ ನೀಡಿ ಮಾಹಿತಿ ಪಡೆಯಲಾಗಿದೆ. ಐಎಂಎ ಸಂಸ್ಥೆಯಿಂದ ನೇಮಕೊಂಡಿರುವ ಶಿಕ್ಷಕರ ಸೇವೆಯನ್ನು ಪ್ರಸಕ್ತ ಶೈಕ್ಷಣಿಕ ವರ್ಷ ಮುಂದುವರಿಸುವ ಸಂಬಂಧ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಲಾಗುವುದು.

-ಸಿ.ಬಿ.ಜಯರಂಗ, ಬೆಂಗಳೂರು ಉತ್ತರ ವಲಯ ಡಿಡಿಪಿಐ.

click me!