
ಬೆಂಗಳೂರು [ಜು.12] : ಜಿಲ್ಲಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿಗಳ ಬಳಿಕ ಮಹಾವಂಚನೆ ಆರೋಪ ಹೊತ್ತ ಐಎಂಎ ಸಂಸ್ಥೆಯ ಮಾಲಿಕ ಮಹಮ್ಮದ್ ಮನ್ಸೂರ್ ಖಾನ್‌ನಿಂದ ‘ಫಲಾನುಭವಿ’ ಆಗಿದ್ದ ಮೌಲ್ವಿಯೊಬ್ಬರು ಎಸ್‌ಐಟಿ ಬಲೆಗೆ ಬಿದ್ದಿದ್ದಾರೆ. ಹೂಡಿಕೆದಾರರ ಮೇಲೆ ಪ್ರಭಾವ ಬೀರಲು ಅವರು .3 ಕೋಟಿ ಮೌಲ್ಯದ ಮನೆ ಉಡುಗೊರೆ ಪಡೆದಿದ್ದ ಸಂಗತಿ ಬಯಲಾಗಿದೆ.
ಶಿವಾಜಿನಗರದ ಓಪಿಎಚ್ ರಸ್ತೆಯಲ್ಲಿ ಬೇಪಾರಿಯನ್ ಮಸೀದಿ ಧರ್ಮಗುರು ಹನೀಫ್ ಅಪ್ಸರ್ ಅಜೀಜ್ ಬಂಧನವಾಗಿದೆ. ಐಎಂಎ ಸಂಸ್ಥೆ ನಿರ್ದೇಶಕರ ವಿಚಾರಣೆ ವೇಳೆ ಧರ್ಮಗುರುವಿಗೆ 2017ರಲ್ಲಿ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಮೂರು ಕೋಟಿ ಮೌಲ್ಯದ ‘ಮನೆ ಕಾಣಿಕೆ’ ವಿಷಯ ಬೆಳಕಿಗೆ ಬಂದಿತ್ತು. ಈ ಮಾಹಿತಿ ಹಿನ್ನೆಲೆಯಲ್ಲಿ ಮೌಲ್ವಿ ಅವರನ್ನು ಬೆಳಗ್ಗೆ ವಶಕ್ಕೆ ಪಡೆದ ಅಧಿಕಾರಿಗಳು, ಬಳಿಕ ಸಂಜೆ ವೇಳೆ ಬಂಧನ ಪ್ರಕ್ರಿಯೆಯನ್ನು ಅಧಿಕೃತಗೊಳಿಸಿದ್ದಾರೆ.
ಈ ಧರ್ಮ ಗುರು ಮಾತು ಕೇಳಿ ಸಾವಿರಾರು ಮಂದಿ ಅಮಾಯಕರು ಐಎಂಎನಲ್ಲಿ ಹೂಡಿಕೆ ಮಾಡಿದ್ದರು. ಜನ ಸಮಾನ್ಯರ ಧಾರ್ಮಿಕ ಭಾವನೆಗಳನ್ನು ದುರ್ಬಳಕೆ ಮಾಡಿಕೊಂಡು ಐಎಂಎ ಸಂಸ್ಥೆಯಲ್ಲಿ ಸಹಕರಿಸಿದ ಆರೋಪದ ಮೇರೆಗೆ ಹನೀಫ್ ಅವರನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.
ಮಹಾಮೋಸ ಆರೋಪ ತಲೆಮರೆಸಿಕೊಂಡಿರುವ ಮನ್ಸೂರ್, ಅಜ್ಞಾತ ಸ್ಥಳದಿಂದ ಬಿಡುಗಡೆಗೊಳಿಸಿದ್ದ ಆಡಿಯೋ ಮತ್ತು ವಿಡಿಯೋ ಹೇಳಿಕೆಗಳಲ್ಲಿ ತನ್ನಿಂದ ಧಾರ್ಮಿಕ ಗುರುಗಳು ಹಣ ವಸೂಲಿ ಮಾಡಿದ್ದಾರೆ ಎಂದು ಆರೋಪಿಸಿದ್ದ. ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಎಸ್‌ಐಟಿ ಅಧಿಕಾರಿಗಳು, ವಂಚನೆ ಪ್ರಕರಣದಲ್ಲಿ ಬಂಧಿತರಾಗಿದ್ದ ಐಎಂಎ ಸಂಸ್ಥೆಯ ನಿರ್ದೇಶಕರನ್ನು ಪ್ರಶ್ನಿಸಿದಾಗ ಹಾಗೂ ಆ ಸಂಸ್ಥೆಯ ದಾಖಲೆಗಳನ್ನು ಪರಿಶೀಲಿಸಿದ ವೇಳೆ ‘ಗುರು ಕಾಣಿಕೆ’ ವಿವರಗಳು ಲಭ್ಯವಾಗಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.
ತನ್ನ ಸಂಸ್ಥೆಗೆ ಹೂಡಿಕೆದಾರರನ್ನು ಸೆಳೆಯಲು ಮನ್ಸೂರ್, ಹಲವು ಮಂದಿ ಧಾರ್ಮಿಕ ಗುರುಗಳನ್ನು ದಾಳವಾಗಿ ಬಳಸಿಕೊಂಡಿದ್ದ. ಆರೋಗ್ಯ ತಪಾಸಣೆ, ಶಾಲೆಗಳ ದತ್ತು, ಸಾಮಾಹಿಕ ವಿವಾಹ ಹೀಗೆ ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದ ಮನ್ಸೂರ್, ಆ ಸಮಾರಂಭಗಳಿಗೆ ಧಾರ್ಮಿಕ ಗುರುಗಳನ್ನು ಆಹ್ವಾನಿಸಿ ತನ್ನ ಸಂಸ್ಥೆ ಪರ ಒಳ್ಳೆಯ ಮಾತುಗಳನ್ನಾಡಿಸುತ್ತಿದ್ದ. ಅಲ್ಲದೆ ಶುಕ್ರವಾರದ ಸಾಮೂಹಿಕ ಪ್ರಾರ್ಥನೆ ಬಳಿಕ ಪ್ರವಚನ ವೇಳೆ ಮನ್ಸೂರ್ ಪರವಾಗಿ ಆತನಿಂದ ಉಪಕೃತರಾಗಿದ್ದ ಮೌಲ್ವಿಗಳು ಪ್ರಚಾರ ನಡೆಸಿದ್ದರು ಎಂದು ತಿಳಿದು ಬಂದಿದೆ.
ಧಾರ್ಮಿಕ ಕೇಂದ್ರಗಳ ಬೋಧನೆಯ ಪ್ರಭಾವಕ್ಕೊಳಗಾದ ಮಧ್ಯಮ ವರ್ಗದ ಸಾವಿರಾರು ಜನರು, ವಂಚಕ ಮನ್ಸೂರ್‌ನ ಜೋಳಿಗೆ ತುಂಬಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.