
ಬೆಂಗಳೂರು[ಜು. 15] ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತನಿಖಾ ತಂಡ [ಎಸ್ ಐಟಿ] ಶಿವಾಜಿನಗರ ಶಾಸಕ ರೋಷನ್ ಬೇಗ್ ಅವರನ್ನು ವಶಕ್ಕೆ ಪಡೆದುಕೊಂಡಿದೆ.
ಎಸ್‌ಐಟಿ ಡಿಸಿಪಿ ಗಿರೀಶ್ ರೋಷನ್ ಬೇಗ್ ಅವರ ಬಂಧನವನ್ನು ಸ್ಪಷ್ಟಪಡಿಸಿದ್ದಾರೆ. ಪ್ರಕರಣದಲ್ಲಿ ಹೆಸರು ಕೇಳಿಬಂದಿದ್ದರಿಂದ ಬಂದು ಉತ್ತರಿಸಲು ರೋಷನ್ ಬೇಗ್ ಅವರಿಗೆ ಎಸ್ ಐಟಿ ನೋಟಿಸ್ ನೀಡಿತ್ತು. ಆದರೆ ಬೇಗ್ ಉತ್ತರ ನೀಡದೆ ಮುಂಬೈಗೆ ಹೊರಟಿದ್ದಾರೆ ಎಂಬ ಆರೋಪದ ಅಡಿ ಮಾಜಿ ಸಚಿವರನ್ನು ಬಂಧಿಸಿದೆ.
ವಶದ ಹಿಂದೆ ಕಾಣದ ಕೈ: ಉತ್ತರ ನೀಡಲು ರೋಷನ್ ಬೇಗ್ ಅವರಿಗೆ ಇನ್ನು ಕಾಲಾವಕಾಶ ಇತ್ತು. ಆದರೆ ಗಡಿಬಿಡಿಯಿಂದ ತನಿಖಾಧಿಕಾರಿಗಳು ವಶಕ್ಕೆ ಪಡೆದಿರುವುದು ಇದೀಗ ರಾಜಕೀಯ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಸರಕಾರ ಅಲ್ಪ ಮತಕ್ಕೆ ಕುಸಿಯುವ ಭೀತಿ ಎದುರಿಸುತ್ತಿರುವಾಗ ಹೀಗೆ ಮಾಡಿರುವುದು ರಾಜಕೀಯ ಪಿತೂರಿಯಿಂದ ಎಂದು ಬಿಜೆಪಿ ನಾಯಕ ಸಿಟಿ ರವಿ ಆರೋಪಿಸಿದ್ದಾರೆ.
ದೋಸ್ತಿ ಉಳಿವಿಗೆ ಮನ್ಸೂರ್ ಅಸ್ತ್ರ, ವಿಡಿಯೋ ಬಿಡುಗಡೆ ಹಿಂದೆ ಕಾಣದ 'ಕೈ'
ಸ್ಪೀಕರ್ ಅನುಮತಿ ಪಡೆದುಕೊಂಡಿಲ್ಲ: ಶಾಸಕರನ್ನು ವಶಕ್ಕೆ ಪಡೆಯಲು ಅದರಲ್ಲೂ ವಿಧಾನಸಭೆ ಅಧಿವೇಶನ ನಡೆಯುವ ಸಂದರ್ಭದಲ್ಲಿ ಶಾಸಕರ ಮೇಲೆ ಕ್ರಮ ತೆಗೆದುಕೊಳ್ಳಲು ವಿಧಾನಸಭೆಯ ಸ್ಪೀಕರ್ ಅನುಮತಿ ಪಡೆದುಕೊಳ್ಳಬೇಕು ಎಂಬ ನಿಯಮ ಇದೆ. ಇದು ವಿಧಾನಸೌಧದ ವ್ಯಾಪ್ತಿಗೋ ಅಥವಾ ಹೊರಗೋ ಎಂಬುದರ ಬಗ್ಗೆ ಜಿಜ್ಞಾಸೆ ಇದೆ. ಆದರೆ ಈ ಪ್ರಕರಣದಲ್ಲಿ ಎಸ್ ಐಟಿ ಸ್ಪೀಕರ್ ಅನುಮತಿ ಪಡೆದುಕೊಂಡಿಲ್ಲ.
ಸಿಎಂ ಕುಮಾರಸ್ವಾಮಿ ಟ್ವೀಟ್: ರೋಷನ್ ಬೇಗ್ ಅವರನ್ನು ಮುಂಬೈನಲ್ಲಿರುವ ಅತೃಪ್ತರ ಜತೆ ಸೇರಿಸಲು ಬಿಜೆಪಿ ನಾಯಕರು ಕರೆದುಕೊಂಡು ಹೋಗುತ್ತಿದ್ದರು. ಬಿಜೆಪಿ ನಾಯಕ ಸಿಪಿ ಯೋಗೇಶ್ವರ ಮತ್ತು ಬಿಎಸ್ ಯಡಿಯೂರಪ್ಪ ಪಿಎ ಸಂತೋಷ್ ಸಹ ವಿಮಾನ ನಿಲ್ದಾಣದಲ್ಲಿ ಇದ್ದರು ಎಂದು ಕುಮಾರಸ್ವಾಮಿ ಟ್ವೀಟ್ ನಲ್ಲಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.