ಸಚಿವರೊಬ್ಬರ ಪ್ರಭಾವ ಬಳಸಿ 600 ಕೋಟಿ ರು. ಸಾಲಕ್ಕೆ ಯತ್ನಿಸಿದ್ದ ಮನ್ಸೂರ್

By Web DeskFirst Published Jun 16, 2019, 9:19 AM IST
Highlights

ತಲೆಮರೆಸಿಕೊಂಡಿರುವ ಐಎಂಎ ಸಂಸ್ಥೆ ಮಾಲಿಕ ಮಹಮ್ಮದ್‌ ಮನ್ಸೂರ್‌ ಖಾನ್‌, ತಿಂಗಳ ಹಿಂದೆ ರಾಜ್ಯ ಸರ್ಕಾರದ ಸಚಿವರೊಬ್ಬರ ಪ್ರಭಾವ ಬಳಸಿ ಬ್ಯಾಂಕ್‌ನಲ್ಲಿ ಸಾಲ ಪಡೆಯಲು ಹುನ್ನಾರ ನಡೆಸಿದ್ದ ಎನ್ನುವ ವಿಚಾರ ಬೆಳಕಿಗೆ ಬಂದಿದೆ. 

ಬೆಂಗಳೂರು (ಜೂ.16) :  ಬಹುಕೋಟಿ ವಂಚನೆ ಆರೋಪ ಹೊತ್ತು ತಲೆಮರೆಸಿಕೊಂಡಿರುವ ಐಎಂಎ ಸಂಸ್ಥೆ ಮಾಲಿಕ ಮಹಮ್ಮದ್‌ ಮನ್ಸೂರ್‌ ಖಾನ್‌, ತಿಂಗಳ ಹಿಂದೆ ರಾಜ್ಯ ಸರ್ಕಾರದ ಸಚಿವರೊಬ್ಬರ ಪ್ರಭಾವ ಬಳಸಿ ಬ್ಯಾಂಕ್‌ನಲ್ಲಿ ಸಾಲ ಪಡೆಯಲು ನಡೆಸಿದ್ದ ಹುನ್ನಾರಕ್ಕೆ ಐಎಎಸ್‌ ಅಧಿಕಾರಿ ತಡೆ ಹಾಕಿದ್ದರು ಎಂಬ ಸಂಗತಿ ಬೆಳಕಿಗೆ ಬಂದಿದೆ.

ಮೂರು ತಿಂಗಳಿಂದ ಹೂಡಿಕೆದಾರರಿಗೆ ಲಾಭಾಂಶ ವಿತರಿಸದೆ ಸಂಕಷ್ಟಕ್ಕೆ ಸಿಲುಕಿದ್ದ ಮನ್ಸೂರ್‌ ಖಾನ್‌, ಇದಕ್ಕಾಗಿ ಬ್ಯಾಂಕ್‌ನಲ್ಲಿ ಸುಮಾರು  600 ಕೋಟಿ ರು. ಸಾಲ ಪಡೆಯಲು ಯತ್ನಿಸಿದ್ದ. ಅದಕ್ಕೆ ಸರ್ಕಾರದ ನಿರಾಕ್ಷೇಪಣಾ ಪತ್ರ (ಎನ್‌ಓಸಿ) ಬೇಕಾಗಿತ್ತು. ಆದರೆ ಅದಕ್ಕೂ ಮೊದಲೇ ಆ ಕಂಪನಿ ಮೇಲೆ ಆರ್‌ಬಿಐ ತನಿಖೆಗೆ ಸೂಚಿಸಿದ್ದರಿಂದ ಸರ್ಕಾರದ ಹಿರಿಯ ಅಧಿಕಾರಿಗಳು ನಿರಾಕ್ಷೇಪಣಾ ಪತ್ರ ನೀಡಲು ಒಪ್ಪಲಿಲ್ಲ ಎನ್ನಲಾಗಿದೆ. ರಂಜಾನ್‌ ಹಬ್ಬದ ಕೆಲ ದಿನಗಳ ಮುನ್ನ ಅಲ್ಪಸಂಖ್ಯಾತ ಸಮುದಾಯದ ಸಚಿವರೊಬ್ಬರ ಸಹಕಾರ ಪಡೆದು ಸರ್ಕಾರದಲ್ಲಿ ಎನ್‌ಓಸಿ ಪಡೆಯಲು ಮುಂದಾಗಿದ್ದ. ಈ ಸಂಬಂಧ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರನ್ನು ಮನ್ಸೂರ್‌ ಜತೆ ಖುದ್ದು ಆ ಸಚಿವರೇ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಆದರೆ ಮನ್ಸೂರ್‌ ಖಾನ್‌ ಲಾಬಿಗೆ ಆ ಐಎಎಸ್‌ ಅಧಿಕಾರಿ ಮಣಿಯದೆ ನಿರಾಕರಿಸಿದರು ಎಂದು ತಿಳಿದು ಬಂದಿದೆ.

ಆರ್‌ಬಿಐ ಪತ್ರ ಹಿನ್ನೆಲೆಯಲ್ಲಿ ಎನ್‌ಓಸಿಗೆ ನಿರಾಕರಣೆ:

2018ರಲ್ಲಿ ಆ್ಯಂಬಿಡೆಂಟ್‌ ಕಂಪನಿ ವಂಚನೆ ಬೆಳಕಿಗೆ ಬಂದ ನಂತರ ಎಚ್ಚೆತ್ತ ಜಾರಿ ನಿರ್ದೇಶನಾಲಯವು (ಇಡಿ) ರಾಜ್ಯದ ವಂಚಕ ಕಂಪನಿಗಳ ಕುರಿತು ಮಾಹಿತಿ ಕಲೆ ಹಾಕಿತ್ತು. ಆಗ ಇಡಿ ಅಧಿಕಾರಿಗಳಿಗೆ, ಆ್ಯಂಬಿಡೆಂಟ್‌ ಮಾದರಿಯಲ್ಲೇ ಐಎಂಎ ಸಹ ಹಣಕಾಸು ವ್ಯವಹಾರ ನಡೆಸುತ್ತಿರುವ ಸಂಗತಿ ಗೊತ್ತಾಯಿತು. ಸಾರ್ವಜನಿಕರಿಗೆ ಅಧಿಕ ಲಾಭಾಂಶದ ಆಮಿಷವೊಡ್ಡಿ ಸಾವಿರಾರು ಕೋಟಿ ಸಂಗ್ರಹಿಸಿ ಮಾಹಿತಿ ತಿಳಿದ ಇಡಿ, ಆ ಸಂಸ್ಥೆಯ ಆರ್ಥಿಕ ವ್ಯವಹಾರದ ಕುರಿತು ಆರ್‌ಬಿಐಗೆ ಪತ್ರ ಬರೆದಿತ್ತು. ಈ ಪತ್ರ ಹಿನ್ನೆಲೆಯಲ್ಲಿ ಆರ್‌ಬಿಐ, ಐಎಂಎ ಕಂಪನಿ ವಿರುದ್ಧ ತನಿಖೆಗೆ ರಾಜ್ಯ ಸರ್ಕಾರ ಮತ್ತು ಪೊಲೀಸರಿಗೆ ಸೂಚಿಸಿತ್ತು. ಆರ್‌ಬಿಐ ಸೂಚನೆ ಮೇರೆಗೆ ಕಂದಾಯ ಇಲಾಖೆ, ಐಎಂಎ ಸಂಸ್ಥೆಯ ಆಸ್ತಿ ಜಪ್ತಿಗೆ ಸಾರ್ವಜನಿಕ ಪ್ರಕಟಣೆ ನೀಡಿತ್ತು.

ಅದೇ ಸಮಯದಲ್ಲಿ ಆರ್ಥಿಕ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಮನ್ಸೂರ್‌, ಬ್ಯಾಂಕ್‌ನಲ್ಲಿ 600 ಕೋಟಿ ರು.ಗಳ ಸಾಲಕ್ಕೆ ಅರ್ಜಿ ಸಲ್ಲಿಸಿದ್ದ. ಆಗ ಬ್ಯಾಂಕ್‌ ಅಧಿಕಾರಿಗಳು, ನಿಮ್ಮ ಸಂಸ್ಥೆಯ ಆರ್ಥಿಕ ವಹಿವಾಟಿನ ಕುರಿತು ಆರ್‌ಬಿಐ ಶಂಕೆ ವ್ಯಕ್ತಪಡಿಸಿದೆ. ಈ ಕುರಿತು ತನಿಖೆಗೆ ಸಹ ಸೂಚಿಸಿದೆ. ಹೀಗಾಗಿ ಸರ್ಕಾರವು ನಿಮ್ಮ ವ್ಯವಹಾರದಲ್ಲಿ ಯಾವುದೇ ದೋಷವಿಲ್ಲ ಎಂಬುದಾಗಿ ನಿರಾಕ್ಷೇಪಣಾ ಪತ್ರ (ಎನ್‌ಓಸಿ) ನೀಡಿದರೆ ಸಾಲ ಮಂಜೂರು ಮಾಡುತ್ತೇವೆ ಎಂದಿದ್ದರು. ಈ ಹಿನ್ನೆಲೆಯಲ್ಲಿ ತಮ್ಮ ಸಮುದಾಯದ ಸಚಿವರ ಮೂಲಕ ಎನ್‌ಓಸಿ ಪಡೆಯಲು ಮನ್ಸೂರ್‌ ಯತ್ನಿಸಿದ್ದ ಎಂದು ತಿಳಿದು ಬಂದಿದೆ.

ಆರ್‌ಬಿಐ ಪತ್ರದ ಸಂಗತಿ ತಿಳಿದಿದ್ದ ಹಿರಿಯ ಅಧಿಕಾರಿ, ನಾವು ಯಾವುದೇ ಕಾರಣಕ್ಕೂ ಎನ್‌ಓಸಿ ನೀಡಲು ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು ಎನ್ನಲಾಗಿದೆ. ಪರಿಣಾಮ 600 ಕೋಟಿ ರು. ಸಾಲ ಪಡೆಯುವ ಮನ್ಸೂರ್‌ ಖಾನ್‌ ಪ್ರಯತ್ನ ಈಡೇರಲಿಲ್ಲ.

click me!