ಬೆಂಗಳೂರು ಜಿಲ್ಲಾಧಿಕಾರಿ ಅರೆಸ್ಟ್

By Web DeskFirst Published Jul 9, 2019, 8:03 AM IST
Highlights

ಭಾರೀ ಲಂಚ ಪ್ರಕರಣದಲ್ಲಿ ಬೆಂಗಳೂರು ಜಿಲ್ಲಾಧಿಕಾರಿಯನ್ನೇ ಬಂಧಿಸಲಾಗಿದೆ. 

ಬೆಂಗಳೂರು [ಜು.09] : ಬಹುಕೋಟಿ ವಂಚನೆ ಆರೋಪ  ಹೊತ್ತಿರುವ ಐಎಂಎ ಸಂಸ್ಥೆಯ ಮಾಲಿಕ ಮಹಮ್ಮದ್ ಮನ್ಸೂರ್ ಖಾನ್‌ನಿಂದ ‘ಫಲಾನುಭವಿ’ಗಳಾಗಿದ್ದ ಸರ್ಕಾರಿ ಅಧಿಕಾರಿಗಳು ಒಬ್ಬೊಬ್ಬರಾಗಿ ಎಸ್ ಐಟಿ ಬಲೆಗೆ ಬೀಳುತ್ತಿದ್ದು, ಸೋಮವಾರ ಭರ್ಜರಿ ಕಾರ್ಯಾಚರಣೆಯಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಬಂಧನವಾಗಿದೆ.

ಜಿಲ್ಲಾಧಿಕಾರಿ ಬಿ.ಎಂ.ವಿಜಯ ಶಂಕರ್ ಅವರನ್ನು ಡಿಸಿಪಿ ಎಸ್.ಗಿರೀಶ್ ನೇತೃತ್ವದ ತಂಡವು ಬಂಧಿಸಿದೆ. ಮನ್ಸೂರ್ ಪರವಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲು ಜಿಲ್ಲಾಧಿಕಾರಿ 1.5 ಕೋಟಿ ರು. ಲಂಚ ಪಡೆದಿದ್ದ ಸಂಗತಿ ಬಯಲಾಗಿತ್ತು. ಈ ಮಾಹಿತಿ ಮೇರೆಗೆ ಜಿಲ್ಲಾಧಿಕಾರಿ ಮನೆ ಮತ್ತು ಕಚೇರಿ  ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ವಿಜಯಶಂಕರ್ ಅವರು ಮೊದಲು ಕೆಎಎಸ್ ಶ್ರೇಣಿ ಅಧಿ ಕಾರಿಯಾಗಿದ್ದು, ನಂತರ ಐಎಎಸ್‌ಗೆ ಬಡ್ತಿ ಪಡೆದಿದ್ದರು.

ಇದೇ ರೀತಿ ಮಹಮ್ಮದ್ ಪರವಾಗಿ ಸರ್ಕಾರಕ್ಕೆ ವರದಿ ನೀಡಲು  4.5 ಕೋಟಿ ರು. ಲಂಚ ಪಡೆದಿದ್ದ ಆರೋಪದ ಮೇರೆಗೆ ಬೆಂಗಳೂರು ಉತ್ತರ ವಿಭಾಗದ ಉಪವಿಭಾಗಾಧಿಕಾರಿ ಎಲ್.ಸಿ.ನಾಗರಾಜ್ ಹಾಗೂ ಗ್ರಾಮ ಲೆಕ್ಕಿಗ ಮಂಜುನಾಥ್ ಅವರನ್ನು ಶುಕ್ರವಾರ ಎಸ್‌ಐಟಿ ಬಂಧಿಸಿತ್ತು. ಈ ಆರೋಪಿಗಳ ವಿಚಾರಣೆ ವೇಳೆ ಜಿಲ್ಲಾಧಿಕಾರಿ ಪಾತ್ರ ಬಯಲಾಗಿದೆ ಎನ್ನಲಾಗಿದೆ.

ಪತ್ನಿ ಹೆಸರಿನಲ್ಲಿ ಆಸ್ತಿ ಖರೀದಿಗೆ ಯತ್ನ?: ಐಎಂಎ ಸಂಸ್ಥೆ ಆರ್ಥಿಕ ವಹಿವಾಟಿನ ಬಗ್ಗೆ ಅನುಮಾನದ ವ್ಯಕ್ತಪಡಿಸಿದ್ದ ಆರ್‌ಬಿಐನ ಪ್ರಾದೇಶಿಕ ಆಯುಕ್ತರು, ಆ ಸಂಸ್ಥೆ ಹಣಕಾಸು ವ್ಯವಹಾರದ ಬಗ್ಗೆ ತನಿಖೆ ನಡೆಸುವಂತೆ 2018 ರ ನವೆಂಬರ್‌ನಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು, ಐಎಂಎ ಸಂಸ್ಥೆ ಬಗ್ಗೆ ವಿಚಾರಣೆ ನಡೆಸಿ ವರದಿ ನೀಡುವ ಸಲುವಾಗಿ ಉಪ ವಿಭಾಗಾಧಿಕಾರಿ ನಾಗರಾಜ್ ಅವರನ್ನು ಸಕ್ಷಮ ಪ್ರಾಧಿಕಾರಿಯನ್ನಾಗಿ ನೇಮಿಸಿತ್ತು. ವಿಚಾರಣೆ ನಡೆಸಿದ ಉಪ ವಿಭಾಗಾಧಿಕಾರಿ, ಮನ್ಸೂರ್ ಪರವಾಗಿ ವರದಿ ನೀಡಲು  4.5 ಕೋಟಿ ರು. ಪಡೆದರೆ, ಗ್ರಾಮ ಲೆಕ್ಕಿಗ  ಮಂಜುನಾಥ್ 10 ಲಕ್ಷ ರು. ಸುಲಿಗೆ ಮಾಡಿದ್ದ.

ಕೆಳಹಂತದ ಅಧಿಕಾರಿಗಳ ಬಳಿಕ ಮನ್ಸೂರ್‌ಗೆ ಜಿಲ್ಲಾಧಿಕಾರಿ ಗಾಳ ಹಾಕಿದ್ದರು. ಮನ್ಸೂರ್ ಪರವಾಗಿ ಆ ಸಂಸ್ಥೆ ನಿರ್ದೇಶಕ ನಿಜಾಮುದ್ದೀನ್, ಏಪ್ರಿಲ್‌ನಲ್ಲಿ ಜಿಲ್ಲಾಧಿಕಾರಿ ವಿಜಯಶಂಕರ್‌ರನ್ನು ಭೇಟಿಯಾಗಿ ನಮ್ಮ ಪರವಾಗಿ ವರದಿ ನೀಡಲು ಕೋರಿದ್ದ. ಮೊದಲು 2 ಕೋಟಿ ರು.ಗೆ ಬೇಡಿಕೆ ಇಟ್ಟ ಜಿಲ್ಲಾಧಿಕಾರಿ, ಕೊನೆಗೆ 1.5 ಕೋಟಿ ರು.ಗೆ ಒಪ್ಪಿದ್ದರು. ಅನಂತರ ಜಿಲ್ಲಾಧಿಕಾರಿ ವಿಜಯಶಂಕರ್ ಸೂಚನೆ ಮೇರೆಗೆ ನಿಜಾಮುದ್ದೀನ್, ರಿಯಲ್ ಎಸ್ಟೇಟ್ ಉದ್ಯಮಿ ಕೃಷ್ಣಮೂರ್ತಿಗೆ ಹಣ ತಲುಪಿಸಿದ್ದ. ತಮ್ಮ ಪತ್ನಿ ಹೆಸರಿನಲ್ಲಿ ಜೆ.ಪಿ.ನಗರ  ಮತ್ತು ನಂದಿಬೆಟ್ಟದ ಬಳಿ 4 ಕೋಟಿ ರು. ಮೌಲ್ಯದ ಆಸ್ತಿ ಖರೀದಿಗೆ ಉದ್ಯಮಿ ಕೃಷ್ಣಮೂರ್ತಿ ಅವರೊಂದಿಗೆ ಜಿಲ್ಲಾಧಿಕಾರಿ ವ್ಯವಹಾರ ನಡೆಸಿದ್ದರು. 

ಅದರ ಮುಂಗಡವಾಗಿ ಕೃಷ್ಣಮೂರ್ತಿಗೆ ತಲಾ  1.5 ಕೋಟಿ ರು. ಐಎಂಎ ಸಂಸ್ಥೆ ಹಾಗೂ ಮತ್ತೊಬ್ಬರಿಂದ ಜಿಲ್ಲಾಧಿಕಾರಿ ತಲುಪಿಸಿದ್ದರು ಎನ್ನಲಾಗಿದೆ.

click me!