ಉಪಚುನಾವಣೆಗೆ ಹೊಸ ದಿನಾಂಕ: ಈ ಎಲೆಕ್ಷನ್ ಕೂಡಾ ನಡೆಯೋದು ಡೌಟು!

By Web DeskFirst Published Sep 28, 2019, 7:33 AM IST
Highlights

ಡಿ.5ಕ್ಕೆ ಉಪಚುನಾವಣೆ| ಡಿ.9ಕ್ಕೆ ಫಲಿತಾಂಶ: ಚುನಾವಣಾ ಆಯೋಗ ಘೋಷಣೆ| ರಾಜ್ಯದ 15 ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಹೊಸ ದಿನಾಂಕ ಹಠಾತ್‌ ಪ್ರಕಟ| ಮೊನ್ನೆ ಅನರ್ಹ ಶಾಸಕರ ಕೇಸ್‌ ವಿಚಾರಣೆ ವೇಳೆ ಮುಂದೂಡಿಕೆ ಪ್ರಕಟಿಸಿದ್ದ ಆಯೋಗ| ಈ ಚುನಾವಣೆ ಕೂಡ ನಡೆಯೋದು ಡೌಟು!

ಬೆಂಗಳೂರು[ಸೆ.28]: ಸುಪ್ರೀಂಕೋರ್ಟ್‌ ಆದೇಶದಿಂದಾಗಿ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಮುಂದೂಲ್ಪಟ್ಟ ಉಪಚುನಾವಣೆಗೆ ಕೇಂದ್ರ ಚುನಾವಣಾ ಆಯೋಗವು ಹೊಸದಾಗಿ ದಿನಾಂಕ ಘೋಷಣೆ ಮಾಡಿದ್ದು, ಡಿ.5ಕ್ಕೆ ಮತದಾನ ನಡೆಯಲಿದೆ. ಪರಿಣಾಮ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮತ್ತು ಚುನಾವಣಾ ಕಣಕ್ಕಿಳಿಯಲು ಬಯಸಿರುವ ಅನರ್ಹ ಶಾಸಕರಿಗೆ ಕಾಲಾವಕಾಶ ಲಭಿಸಿದಂತಾಗಿದೆ. ಹೀಗಿದ್ದರೂ ಈ ಚುನಾವಣೆಯೂ ನಡೆಯೋದು ಅನುಮಾನವಾಗಿದೆ.

ಹೌದು ಚುನಾವಣಾ ಸಿದ್ಧತೆಗೆ ಸಾಕಷ್ಟುಕಾಲಾವಕಾಶ ಲಭಿಸಿರುವುದರಿಂದ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿ ಬಿಜೆಪಿ ಸರ್ಕಾರ ಅಧಿಕಾರ ಗದ್ದುಗೆ ಹಿಡಿಯಲು ಪ್ರಮುಖ ಪಾತ್ರ ವಹಿಸಿದ್ದ ಅನರ್ಹಗೊಂಡಿರುವ ಶಾಸಕರು ಮತ್ತು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನಿರಾಳರಾಗಿದ್ದಾರೆ. ಹೊಸ ವೇಳಾಪಟ್ಟಿಪ್ರಕಾರ, ಅ.21ರಂದು ನಡೆಯಬೇಕಿದ್ದ ಮತದಾನ ಡಿ.5ರಂದು ನಡೆಯಲಿದೆ. ಡಿ.9ರಂದು ಮತ ಎಣಿಕೆ ನಡೆಯಲಿದೆ.

ಚುನಾವಣೆ ನಡೆಯೋದು ಡೌಟ್!

ಹೊಸದಾಗಿ ಹೊರಡಿಸಿರುವ ಅಧಿಸೂಚನೆಯಲ್ಲಿ ‘ಡಿ.5ಕ್ಕೆ ಅಗತ್ಯ ಬಿದ್ದರೆ ಚುನಾವಣೆ ನಡೆಯಲಿದೆ’ ಎಂದು ಕೇಂದ್ರ ಚುನಾವಣಾ ಆಯೋಗ ಉಲ್ಲೇಖಿಸಿದೆ. ಅನರ್ಹ ಶಾಸಕರ ಪ್ರಕರಣ ಸುಪ್ರೀಂಕೋರ್ಟಿನಲ್ಲಿ ನಡೆಯುತ್ತಿದ್ದು, ಒಂದು ವೇಳೆ ಶಾಸಕರ ಅನರ್ಹತೆಯನ್ನು ನ್ಯಾಯಾಲಯ ರದ್ದುಗೊಳಿಸಿದ್ದೇ ಆದಲ್ಲಿ ಅಂತಹ ಸನ್ನಿವೇಶದಲ್ಲಿ ಉಪಚುನಾವಣೆ ನಡೆಸುವ ಪ್ರಮೇಯವೇ ಬರುವುದಿಲ್ಲ. ಹಾಗಾಗಿ, ಉಪಚುನಾವಣೆ ನಡೆಯುವುದು ಅಥವಾ ನಡೆಯದಿರುವುದು ಸುಪ್ರೀಂಕೋರ್ಟ್‌ ತೀರ್ಮಾನದ ಮೇಲೆ ಅವಲಂಬಿತವಾಗಿದೆ.

ಚುನಾವಣಾ ವೇಳಾಪಟ್ಟಿ

ನ.11: ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಂದುವರಿಕೆ

ನ.18: ನಾಮಪತ್ರಗಳ ಸಲ್ಲಿಕೆಗೆ ಕಡೆಯ ದಿನಾಂಕ

ನ.19: ನಾಮಪತ್ರಗಳನ್ನು ಪರಿಶೀಲಿಸುವ ದಿನಾಂಕ

ನ.21: ನಾಮಪತ್ರ ಹಿಂಪಡೆಯಲು ಕಡೇ ದಿನಾಂಕ

ಡಿ.5: ರಾಜ್ಯದ 15 ಅಸೆಂಬ್ಲಿ ಕ್ಷೇತ್ರಗಳಲ್ಲಿ ಮತದಾನ

ಡಿ.9: ಮತ ಎಣಿಕೆ ಪ್ರಕ್ರಿಯೆ, ಅಂದೇ ಫಲಿತಾಂಶ

ಯಾವ್ಯಾವ ಕ್ಷೇತ್ರ?

ಅಥಣಿ, ಕಾಗವಾಡ, ಗೋಕಾಕ್‌, ಯಲ್ಲಾಪುರ, ಹಿರೇಕೆರೂರು, ರಾಣೆಬೆನ್ನೂರು, ವಿಜಯನಗರ, ಚಿಕ್ಕಬಳ್ಳಾಪುರ, ಕೆ.ಆರ್‌.ಪುರ, ಯಶವಂತಪುರ, ಮಹಾಲಕ್ಷ್ಮೇ ಲೇಔಟ್‌, ಶಿವಾಜಿನಗರ, ಹೊಸಕೋಟೆ, ಕೆ.ಆರ್‌.ಪೇಟೆ ಮತ್ತು ಹುಣಸೂರು.

click me!