ಏನೋ ಆಗಬೇಕಿತ್ತು, ಏನೋ ಆದೆ

First Published Jun 27, 2018, 7:30 AM IST
Highlights

ನಾನು ಏನೋ ಆಗಬೇಕಿತ್ತು, ಆದರೆ ಏನೋ ಆಗಿದ್ದೇನೆ ಎಂದು  ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ಅಲ್ಲದೇ ಶಿಕ್ಷಣ ಸಚಿವನಾಗಬೇಕು ಎಂಬ ಆಸೆ ಪಕ್ಷಾತೀತವಾಗಿ ಇತ್ತು. ಅನಿವಾರ್ಯ ಕಾರಣಗಳಿಂದ ಸಭಾಪತಿಯಾಗಿದ್ದೇನೆ ಎಂದರು.

ಹಾವೇರಿ :  ನಾನು ಸದ್ಯ ಹಂಗಾಮಿ ಸಭಾಪತಿಯಾಗಿದ್ದು, ಮುಂದೆ ಬರುವ ಅಧಿವೇಶನದಲ್ಲಿ ಕಾಯಂ ಸಭಾಪತಿಯಾಗಿ ಆಯ್ಕೆಯಾದರೆ ಲಿಂಗಾಯತ ಸ್ವತಂತ್ರ ಧರ್ಮ ಹೋರಾಟದಲ್ಲಿ ಪಾಲ್ಗೊಳ್ಳುವುದಿಲ್ಲ. ಸಭಾಪತಿ ಸ್ಥಾನಕ್ಕೆ ವಿಶೇಷವಾದ ಗೌರವ ಇದೆ. ಅದನ್ನು ಎತ್ತಿ ಹಿಡಿಯಬೇಕಾಗಿರುವುದು ನಮ್ಮ ಕರ್ತವ್ಯ. ಹೀಗಾಗಿ ಲಿಂಗಾಯತ ಸ್ವತಂತ್ರ ಧರ್ಮ ಹೋರಾಟದಲ್ಲಿ ಭಾಗಿಯಾಗುವುದಿಲ್ಲ. 

ಅದನ್ನು ಮುಂದುವರೆಸುವವರು ಆ ಕೆಲಸ ಮಾಡುತ್ತಾರೆ ಎಂದು ಹಂಗಾಮಿ ಸಭಾಪತಿ ಮತ್ತು ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟಗಾರರಲ್ಲಿ ಒಬ್ಬರಾದ ಬಸವರಾಜ ಹೊರಟ್ಟಿತಿಳಿಸಿದ್ದಾರೆ. ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಏನೋ ಆಗಬೇಕಿತ್ತು, ಆದರೆ ಏನೋ ಆಗಿದ್ದೇನೆ. ಹೊರಟ್ಟಿ ಶಿಕ್ಷಣ ಸಚಿವನಾಗಬೇಕು ಎಂಬ ಆಸೆ ಪಕ್ಷಾತೀತವಾಗಿ ಇತ್ತು. ಅನಿವಾರ್ಯ ಕಾರಣಗಳಿಂದ ಸಭಾಪತಿಯಾಗಿದ್ದೇನೆ ಎಂದರು.

ಶಿಕ್ಷಕರು ಭಯಪಡುವ ಅವಶ್ಯಕತೆಯಿಲ್ಲ. ರಾಜ್ಯಪಾಲರ ನಂತರದಲ್ಲಿ ಕಾನೂನಾತ್ಮಕವಾಗಿ ಎರಡನೇಯ ಉನ್ನತ ಸ್ಥಾನವಾಗಿರುವ ಸಭಾಪತಿ ಸ್ಥಾನದಲ್ಲಿ ನಾನು ಕುಳಿತು, ಆ ಹುದ್ದೆಯ ಘನತೆಗೆ ಗೌರವ ತರುವ ರೀತಿಯಲ್ಲಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತೇನೆ ಎಂದು ಭರವಸೆ ನೀಡಿದರು.

ಪುಸ್ತಕ ನೋಡಿ ಪರೀಕ್ಷೆಗೆ ಅಸಮಾಧಾನ: 

ಈಗಲೇ ವಿದ್ಯಾರ್ಥಿಗಳು ಓದುತ್ತಿಲ್ಲ. ಇನ್ನು ಪುಸ್ತಕ ನೋಡಿ ಪರೀಕ್ಷೆ ಬರೆಯುವುದು ಎಂದರೆ ಮಕ್ಕಳು ಓದುವುದೇ ಇಲ್ಲ. ಪರೀಕ್ಷೆ ವೇಳೆ ಪೇಜ್‌ ನಂಬರ್‌ ಎಷ್ಟುಎಂಬುದನ್ನು ಯಾರಾದರೂ ಹೇಳಿದರೆ ಎಲ್ಲರೂ ಬರೆಯುತ್ತಾರೆ ಎಂದು ಹೊರಟ್ಟಿಹಾಸ್ಯಚಟಾಕಿ ಹಾರಿಸಿದರು. ಹಿಂದಿನಿಂದಲೂ ದೇಶದಲ್ಲಿ ಪುಸ್ತಕ ನೋಡಿ ಪರೀಕ್ಷೆ ಬರೆಯುವ ವ್ಯವಸ್ಥೆ ಇಲ್ಲ. ಶಿಕ್ಷಣ ಸಚಿವ ಮಹೇಶ ಅಧ್ಯಯನ ಮಾಡಿರಬಹುದು ಎಂದರು.

ಪುಸ್ತಕ ನೋಡಿ ಪರೀಕ್ಷೆ ಬರೆಯುವ ವ್ಯವಸ್ಥೆ ಬಗ್ಗೆ ನನಗೆ ಹೆಚ್ಚಿನ ಮಾಹಿತಿಯಿಲ್ಲ. ಈ ವ್ಯವಸ್ಥೆಯ ಸಾಧಕ ಬಾಧಕಗಳ ಬಗ್ಗೆ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪಾಲಕರ ಸಭೆ ಕರೆದು ಚರ್ಚೆಯಾಗಬೇಕು.

ರಾಜ್ಯ ಸರ್ಕಾರದಲ್ಲಿ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಸ್ಥಾನ ಸಿಗಬೇಕಿತ್ತು ಎಂಬ ವಾದವನ್ನು ನಾನೂ ಒಪ್ಪುತ್ತೇನೆ. ಕಾಂಗ್ರೆಸ್‌  ಪಕ್ಷದ ವರಾದರೂ ಈ ಭಾಗದವರನ್ನು ಸಚಿವರನ್ನಾಗಿ ಮಾಡಬಹುದಿತ್ತು. ಹೊಸ ಸರ್ಕಾರ ಬಂದಾಗ ಬಜೆಟ್‌ ಮಂಡನೆ ಸಹಜ ಪ್ರಕ್ರಿಯೆ. ಆದರೆ ಸಮ್ಮಿಶ್ರ ಸರ್ಕಾರ ಇರುವುದರಿಂದ ಹೊಂದಾಣಿಕೆ ಮಾಡಿಕೊಂಡು ಬಜೆಟ್‌ ಮಂಡಿಸುವುದು ಸೂಕ್ತ. ಏನೇ ಭಿನ್ನಾಭಿಪ್ರಾಯಗಳಿದ್ದರೂ ಒಳ್ಳೆಯ ಬಜೆಟ್‌ ಮಂಡನೆಯಾಗಲಿದೆ ಎಂಬ ನಂಬಿಕೆಯಿದೆ ಎಂದು ಹೇಳಿದರು.

ಲಿಂಗಾಯತ ಧರ್ಮ ಹೋರಾಟದಲ್ಲಿ ಪಾಲ್ಗೊಂಡಿದ್ದೇ ಸಚಿವ ಸ್ಥಾನ ತಪ್ಪಲು ಕಾರಣವಾಯಿತೇ ಎಂಬ ಪ್ರಶ್ನೆಗೆ, ಮಾತೆ ಮಹಾದೇವಿ ಹಾಗೂ ರಂಭಾಪುರಿ ಸ್ವಾಮೀಜಿ ಅನವಶ್ಯಕವಾಗಿ ಮಾತನಾಡಿ ಗೊಂದಲ ಮೂಡಿಸಿದರು. ಅಲ್ಲದೇ ಧರ್ಮದ ಕಾರಣಕ್ಕಾಗಿಯೇ ಸಚಿವರು, ಅನೇಕ ನಾಯಕರು ಚುನಾವಣೆಯಲ್ಲಿ ಸೋಲುಂಡಿದ್ದಾರೆ ಎಂದು ಹೇಳುವುದು ತಪ್ಪು. ಮಹಾದಾಯಿ ಹೋರಾಟದಲ್ಲಿ ಜೆಡಿಎಸ್‌ ಮಾಡಿದಷ್ಟುಹೋರಾಟ ಯಾರೂ ಮಾಡಿಲ್ಲ. ಹೋರಾಟ ಮಾಡದೇ ಸುಮ್ಮನಿದ್ದ ಬಿಜೆಪಿಯವರು ಗೆದ್ದಿದ್ದಾರೆ ಎಂದು ಹೇಳಿದರು.

click me!