ಮಿಕ್ಕ ಆಹಾರ ಚೆಲ್ಲುವ ಹೋಟೆಲ್, ಕಲ್ಯಾಣ ಮಂಟಪಗಳಿಗೆ ಕಾದಿದೆ ಕಂಟಕ: ಬೀಳಲಿದೆ ದಂಡ!

By Suvarna Web DeskFirst Published Apr 26, 2017, 3:42 AM IST
Highlights

ಕಲ್ಯಾಣ ಮಂಟಪಗಳು, ಹೋಟೆಲ್‌ಗಳು, ಸಾರ್ವಜನಿಕ ಸಭೆ, ಸಮಾರಂ​ಭಗಳಲ್ಲಿ ವ್ಯವಸ್ಥೆ ಮಾಡಲಾಗಿದ್ದ ಊಟ- ತಿಂಡಿ ಮೊದಲಾದ ಆಹಾರ ಪದಾರ್ಥಗಳು ಮಿಕ್ಕಿವೆ ಎಂದು ಇನ್ನು ಮುಂದೆ ಹೊರ ಚೆಲ್ಲುವಂತಿಲ್ಲ. ಈ ರೀತಿ ಆಹಾರ ಪದಾರ್ಥಗಳನ್ನು ವ್ಯರ್ಥ ಮಾಡಿ ದರೆ ದಂಡ ವಿಧಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

ಬೆಂಗಳೂರು(ಎ.26): ಕಲ್ಯಾಣ ಮಂಟಪಗಳು, ಹೋಟೆಲ್‌ಗಳು, ಸಾರ್ವಜನಿಕ ಸಭೆ, ಸಮಾರಂ​ಭಗಳಲ್ಲಿ ವ್ಯವಸ್ಥೆ ಮಾಡಲಾಗಿದ್ದ ಊಟ- ತಿಂಡಿ ಮೊದಲಾದ ಆಹಾರ ಪದಾರ್ಥಗಳು ಮಿಕ್ಕಿವೆ ಎಂದು ಇನ್ನು ಮುಂದೆ ಹೊರ ಚೆಲ್ಲುವಂತಿಲ್ಲ. ಈ ರೀತಿ ಆಹಾರ ಪದಾರ್ಥಗಳನ್ನು ವ್ಯರ್ಥ ಮಾಡಿ ದರೆ ದಂಡ ವಿಧಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

ಆಹಾರ ಮತ್ತು ನಾಗರಿಕ ಸರಬ​ರಾಜು ಸಚಿವ ಯು.ಟಿ.ಖಾದರ್‌ ಮಂಗ​ಳ​ವಾರ ಈ ವಿಷಯ ತಿಳಿಸಿದ್ದು, ವ್ಯರ್ಥವಾಗುವ ಆಹಾರ ವನ್ನು ಹಸಿದ​ವರಿಗೆ ನೀಡಲಾಗುವುದು. ಈ ನಿಟ್ಟಿ​ನಲ್ಲಿ ಸರ್ಕಾರ ಶೀಘ್ರದಲ್ಲೇ ಸೂಕ್ತವಾದ ನೀತಿ ನಿಯಮಾವಳಿ ರೂಪಿಸಿ ಜಾರಿ ಮಾಡಲಾಗುವುದು ಎಂದರು. ನಗರದ ಹೋಟೆಲ್‌ಗಳು ಹಾಗೂ ಕಲ್ಯಾಣ ಮಂಟಪಗಳಲ್ಲಿ ಸಾಕಷ್ಟುಪ್ರಮಾಣದ ಆಹಾರ ಉಳಿಕೆಯಾ​ಗುತ್ತಿದೆ. ಈ ಉಳಿಕೆ ಆಹಾರ ಪದಾರ್ಥ​ಗಳನ್ನು ಹೊರಚೆಲ್ಲುತ್ತಿದ್ದು, ಇದನ್ನು ತಪ್ಪಿಸಿ ಅಗತ್ಯವುಳ್ಳವರಿಗೆ ನೀಡಲು ಉದ್ದೇಶಿಸಲಾಗಿದೆ. ಕೆಲವು ಸರ್ಕಾರೇತರ ಸಂಸ್ಥೆಗಳು ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಅಂತಹ ಸಂಸ್ಥೆಗ ಳೊಂದಿಗೂ ಸಹಭಾಗಿತ್ವ ಸಾಧಿಸಲಾಗುವುದು. ಪ್ರತಿದಿನ ಉಳಿಕೆ ಆಹಾರವನ್ನು ಚೆಲ್ಲದೇ ಕೆಡದಂತೆ ಕಾಪಾಡಿ ಅಗತ್ಯ ವಿದ್ದವರಿಗೆ ನೀಡುವ ನಿಟ್ಟಿನಲ್ಲಿ ಸಹಕರಿಸಲು ಹೋಟೆಲ್‌ಗಳ ಹಾಗೂ ಕಲ್ಯಾಣ ಮಂಟಪಗಳ ಮಾಲೀಕರ ಸಭೆ ಕರೆದು ಕೋರಲಾಗುವುದು ಎಂದು ಹೇಳಿದರು.

ರಾಜ್ಯದಲ್ಲೂ ಸೇವಾಶುಲ್ಕ ಕಡ್ಡಾಯವಲ್ಲ

ಹೋಟೆಲ್‌ಗಳಲ್ಲಿ ಇನ್ನು ಮುಂದೆ ಸೇವಾ ಶುಲ್ಕ (ಸವೀರ್‍ಸ್‌ ಚಾರ್ಜ್) ಕಡ್ಡಾಯವಾಗಿ ವಸೂಲಿ ಮಾಡುವಂತಿಲ್ಲ. ಸೇವಾ ಶುಲ್ಕ ಪಾವತಿ ಗ್ರಾಹಕರ ಆಯ್ಕೆಗೆ ಬಿಟ್ಟಿದ್ದು, ಸೇವಾಶುಲ್ಕ ಪಾವತಿಸಿಲ್ಲವೆಂದು ಸೇವೆಯನ್ನೂ ನಿರಾಕರಿಸುವಂತಿಲ್ಲ. ಕೇಂದ್ರ ಸರ್ಕಾರದ ನಿರ್ದೇಶನದನ್ವಯ ರಾಜ್ಯ ಸರ್ಕಾರವೂ ರಾಜ್ಯದ ಎಲ್ಲ ಹೋಟೆಲ್‌ಗಳಿಗೆ ಈ ಕುರಿತು ಶೀಘ್ರದಲ್ಲೇ ಆದೇಶ ಹೊರಡಿಸಲಿದೆ.

ಸುದ್ದಿಗಾರರೊಂ ದಿಗೆ ಮಾತನಾಡಿದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್‌ ಈ ವಿಷಯ ತಿಳಿಸಿದರು. ರಾಜ್ಯದ ಹಲವಾರು ಹೋಟೆಲ್‌ಗಳು, ಅದರಲ್ಲೂ ಐಷಾರಾಮಿ ಹೋಟೆಲ್‌ಗಳಲ್ಲಿ ಬಿಲ್‌ ಮೇಲೆ ಶೇ.6ರಿಂದ ಶೇ.8ರಷ್ಟುಸೇವಾ ಶುಲ್ಕ ವಿಧಿಸಲಾಗುತ್ತಿದೆ. ಆದರೆ ಈ ಶುಲ್ಕ ವಿಧಿಸುವುದು 1986ರ ಗ್ರಾಹಕ ರಕ್ಷಣಾ ಕಾಯ್ದೆ ಅನ್ವಯ ನ್ಯಾಯಯುತ ಅಲ್ಲದ ಕಾರಣ ಈ ಕುರಿತು ಗ್ರಾಹಕರು ಗ್ರಾಹಕರ ನ್ಯಾಯಾಲಯಗಳಲ್ಲಿ ದೂರು ಸಲ್ಲಿಸಬಹುದು. ಸೇವಾ ಶುಲ್ಕ ವಿಚಾರದಲ್ಲಿ ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು ಹಾಗೂ ಆಹಾರ ತಯಾರಿಕಾ ಸಂಸ್ಥೆಗಳಿಗೆ ಸೂಕ್ತ ತಿಳಿವಳಿಕೆ ನೀಡುವಂತೆ ಕೇಂದ್ರ ಸರ್ಕಾರವು ರಾಜ್ಯಗಳ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದು ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಹೋಟೆಲ್‌ಗಳಿಗೂ ಸೇವಾಶುಲ್ಕ ವಸೂಲಿ ಮಾಡದಂತೆ ಆದೇಶ ಹೊರಡಿಸಲಾಗುವುದು ಎಂದರು. ಸೇವಾಶುಲ್ಕ ಕಡ್ಡಾಯ ಮಾಡುವಂತಿಲ್ಲ, ಸೇವಾ ಶುಲ್ಕ ನೀಡಲು ನಿರಾಕರಿಸುವ ಗ್ರಾಹಕರಿಗೆ ಹೋಟೆಲ್‌ಗಳಲ್ಲಿ ಆಹಾರ ನಿರಾಕರಿಸುವಂತಿಲ್ಲ ಅಥವಾ ಪ್ರವೇಶ ನಿರಾಕರಣೆ ಮಾಡುವಂತಿಲ್ಲ . ಹೋಟೆಲ್‌ಗಳ ಬಿಲ್‌ನಲ್ಲಿ ಸೇವಾ ಶುಲ್ಕದ ಶೇಕಡಾವಾರು ಪ್ರಮಾಣ ಅಥವಾ ಮೊತ್ತವನ್ನು ಮುದ್ರಿಸುವಂತಿಲ್ಲ. ಗ್ರಾಹಕರ ಸಮ್ಮತಿ ಯೊಂದಿಗೆ ಸೇವಾ ಶುಲ್ಕ ಪಡೆಯಬಹುದು ಎಂದು ಖಾದರ್‌ ತಿಳಿಸಿದರು. 

ವರದಿ: ಕನ್ನಡಪ್ರಭ

click me!