
ಬೆಂಗಳೂರು(ಫೆ.07): ಸ್ವತಂತ್ರ ಸಮವರ್ತಿ ಲೆಕ್ಕ ಪರಿಶೋಧನೆ ಹೆಸರಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ನಡೆಯುತ್ತಿದ್ದ ಕೋಟ್ಯಂತರ ರೂಪಾಯಿ ದುರುಪಯೋಗ ಪ್ರಕರಣವನ್ನು ಬೆಳಕಿಗೆ ತಂದಿದ್ದ ಹೊರ ಗುತ್ತಿಗೆ ಲೆಕ್ಕ ಸಮಾಲೋಚಕರಿಗೆ ಇಲಾಖೆಯ ಉನ್ನತ ಅಧಿಕಾರಿಗಳು ಕಿರುಕುಳ ನೀಡಿದ ಪ್ರಕರಣ ಬೆಳಕಿಗೆ ಬಂದಿದೆ.
ಅಧಿಕಾರಿಗಳ ನಡೆಯಿಂದ ಬೇಸತ್ತ ಲೆಕ್ಕ ಸಮಾಲೋಚಕ ತನ್ನ ಹುದ್ದೆಗೆ ರಾಜೀನಾಮೆ ಸಲ್ಲಿಸಿ ಹೊರ ನಡೆದಿದ್ದಾರೆ. ರಾಜ್ಯ ಲೆಕ್ಕ ಪತ್ರ ಇಲಾಖೆಯಲ್ಲಿ 33 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ನಿಜಗುಣ ಎಂಬುವರು ನಿವೃತ್ತಿ ನಂತರ ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯಲ್ಲಿ ಹೊರಗುತ್ತಿಗೆ ಅಡಿಯಲ್ಲಿ ಲೆಕ್ಕ ಸಮಾಲೋಚಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಪ್ರಕರಣ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದನ್ನೇ ನೆಪವಾಗಿಸಿಕೊಂಡ ಉನ್ನತ ಅಧಿಕಾರಿಗಳು ನಿಜಗುಣ ಅವರಿಗೆ ಕಿರುಕುಳ ನೀಡಿದೆ ಎಂದು ಹೇಳಲಾಗುತ್ತಿದೆ.
ಏನದು ಪ್ರಕರಣ?
ರಾಜ್ಯದ ಬೀದರ್ ಜಿಲ್ಲೆ ಹೊರತುಪಡಿಸಿ 29 ಜಿಲ್ಲೆಗಳಲ್ಲಿ ಅನುಷ್ಠಾನಗೊಂಡಿದ್ದ ನರೇಗಾ ಯೋಜನೆ ಸೇರಿದಂತೆ ಇನ್ನಿತರೆ ಯೋಜನೆಗಳ ಕುರಿತು ರಾಜ್ಯ ಲೆಕ್ಕ ಪತ್ರ ಇಲಾಖೆ ಲೆಕ್ಕ ಪರಿಶೋಧನೆ ನಡೆಸಿ ವರದಿ ಸಲ್ಲಿಸಿದೆ. ಆದರೂ ಇಲಾಖೆಯ ಉನ್ನತ ಅಧಿಕಾರಿಗಳು ಖಾಸಗಿ ಚಾರ್ಟಡ್ ಅಕೌಂಟೆಂಟ್ಸ್ ಮಾಫಿಯಾ ಜತೆ ಶಾಮೀಲಾಗಿ ಒಮ್ಮೆ ಲೆಕ್ಕ ಪರಿಶೋಧನೆ ಆಗಿರುವುದನ್ನೇ ಪುನಃ ಲೆಕ್ಕ ಪರಿಶೋಧನೆ ನಡೆಸಲಾಗಿದೆ. ಕಳೆದ 3 ವರ್ಷಗಳ ಅವಧಿಯವರೆಗೆ ನಡೆಸಿರುವ ಸ್ವತಂತ್ರ ಸಮವರ್ತಿ ಲೆಕ್ಕ ಪರಿಶೋಧನೆ ಹೆಸರಿನಲ್ಲಿ ಇಲಾಖೆ ಚಾರ್ಟಡ್ ಅಕೌಂಟೆಂಟ್ಸ್ಗಳಿಗೆ 13 ಕೋಟಿ 86 ಲಕ್ಷ ರೂಪಾಯಿಯನ್ನು ಪಾವತಿಸಲಾಗಿದೆ.
ಈ ಪ್ರಕರಣವನ್ನು ನಿಜಗುಣ ಅವರು ಇಲಾಖೆಯ ಅಯುಕ್ತರು ಸೇರಿದಂತೆ ಉನ್ನತ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಸ್ವತಂತ್ರ ಸಮವರ್ತಿ ಲೆಕ್ಕ ಪರಿಶೋಧನೆ ಹೆಸರಿನಲ್ಲಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿದೆ ಎಂದು ತಮ್ಮ ಟಿಪ್ಪಣಿಯಲ್ಲಿ ದಾಖಲಿಸಿದ್ದರು. ಇದೇ ಟಿಪ್ಪಣಿ ಅಧರಿಸಿ ಇಲಾಖೆಯ ಆಂತರಿಕ ಆರ್ಥಿಕ ಸಲಹೆಗಾರರಾಗಿದ್ದ ಮಹದೇವ ಅವರು ಕೂಡ ಆಯುಕ್ತರ ಗಮನಕ್ಕೆ ತಂದಿದ್ದಲ್ಲದೆ, ಸ್ವತಂತ್ರ ಸಮವರ್ತಿ ಲೆಕ್ಕ ಪರಿಶೋಧನೆಯನ್ನು ಮುಂದುವರೆಸಬಾರದು.
ಈಗಾಗಲೇ ನಡೆದಿರುವ ಸ್ವತಂತ್ರ ಲೆಕ್ಕ ಪರಿಶೋಧನೆ ಗುಣಮಟ್ಟದಿಂದ ಕೂಡಿಲ್ಲ. ಇಂಡಿಪೆಂಡೆಂಟ್ ಚಾರ್ಟಡ್ ಅಕೌಂಟೆಂಟ್ಸ್ಗಳು ಮಾರ್ಗಸೂಚಿಗಳ ಪ್ರಕಾರ ಲೆಕ್ಕ ಪರಿಶೋಧನೆ ಮಾಡಿಲ್ಲ. ಪ್ರತಿ 3 ತಿಂಗಳಿಗೊಮ್ಮೆ ವರದಿ ಕೊಡ್ಬೇಕಿದ್ದರೂ ಅದು ಪಾಲನೆ ಆಗ್ತಿಲ್ಲ. ಅಷ್ಟೇ ಅಲ್ಲ, ಲೆಕ್ಕ ಪತ್ರಗಳ ನಿರ್ವಹಣೆ, ಲೆಕ್ಕ ಸಮನ್ವಯ ಕೂಡ ಗುಣಮಟ್ಟದಿಂದ ಕೂಡಿಲ್ಲ ಅಂತ ಆರ್ಥಿಕ ಸಲಹೆಗಾರರು ವರದಿ ಸಲ್ಲಿಸಿದ್ದರು.
ಈ ವರದಿ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಸರ್ಕಾರದ ಬೊಕ್ಕಸಕ್ಕೆ ಆಗುತ್ತಿದ್ದ ನಷ್ಟವನ್ನು ಆರಂಭದಿಂದಲೂ ಗಮನಕ್ಕೆ ತಂದಿದ್ದ ನಿಜಗುಣ ಅವರೇ ಇದಕ್ಕೆ ಕಾರಣ ಎಂದು ಅಧಿಕಾರಿಗಳು ಬೊಟ್ಟು ಮಾಡಿದ್ದರು. ಅವರ ಮೇಲೆಯೇ ಸಂಶಯ ವ್ಯಕ್ತಪಡಿಸಿದ್ದರು. ಇದರಿಂದ ಬೇಸತ್ತ ನಿಜಗುಣ ಅವರೀಗ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿ ಹೊರ ನಡೆದಿದ್ದಾರೆ.
ಮುಖ್ಯ ಆರ್ಥಿಕ ಸಲಹೆಗಾರರು ನನಗೆ ನೀಡಿರುವ ಜವಾಬ್ದಾರಿಯನ್ನು ನಿಯಮಾನುಸಾರ ನಿರ್ವಹಿಸಲು ನನಗೆ ಸಾಧ್ಯವಾಗುತ್ತಿಲ್ಲ. ನನ್ನ ಆತ್ಮಸಾಕ್ಷಿಗೆ ವಿರುದ್ಧವಾಗಿ ಆರ್ಥಿಕ ಸಲಹೆಗಾರರು ನೀಡುತ್ತಿರುವ ಮೌಖಿಕ ಸೂಚನೆಗಳನ್ನು ಪಾಲಿಸಲು ಸಾಧ್ಯವಾಗುತ್ತಿಲ್ಲ. ಒಲ್ಲದ ಮನಸ್ಸಿನಿಂದ ಮಾಸಿಕ 20,000 ರೂಪಾಯಿ ಸಂಭಾವನೆ ಪಡೆದು ಸಮಾಲೋಚಕನಾಗಿ ಆಯುಕ್ತಾಲಯದ ಸೇವೆಯಲ್ಲಿ ಮುಂದುವರೆಯುವುದು ಸೂಕ್ತವಲ್ಲ. ಹೀಗಾಗಿ ಈ ಹುದ್ದೆಗೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ಆಯುಕ್ತಾಲಯದಲ್ಲಿ ಕೇವಲ 8 ತಿಂಗಳು ಸೇವೆ ಸಲ್ಲಿಸಿದ್ದರೂ ಈ ಅವಧಿಯಲ್ಲಿ ಕೋಟ್ಯಂತರ ರೂಪಾಯಿ ದುರುಪಯೋಗ ಆಗುತ್ತಿರುವುದನ್ನು ಬೆಳಕಿಗೆ ತಂದು ಗಮನ ಸೆಳೆಯುವಲ್ಲಿ ಕೊಂಚ ಮಟ್ಟಿಗಾದರೂ ಸಫಲನಾಗಿದ್ದೇನೆ. ಈ ನೆಮ್ಮದಿಯೊಂದಿಗೆ ಸ್ವಯಂ ನಿರ್ಗಮಿಸುತ್ತಿದ್ದೆನೆ' ಎಂದು ನಿಜಗುಣ ಅವರು ಸಚಿವ ಎಚ್.ಕೆ,.ಪಾಟೀಲ್ ಅವರಿಗೆ ಸಲ್ಲಿಸಿರುವ ರಾಜೀನಾಮೆ ಪತ್ರದಲ್ಲಿ ವಿವರಿಸಿದ್ದಾರೆ.
ವರದಿ: ಜಿ.ಮಹಾಂತೇಶ್, ಸುವರ್ಣ ನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.