ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಬಗ್ಗೆ ಯಾವ ರೀತಿ ಹೋರಾಟ ಮತ್ತು ಸತ್ಯಾಗ್ರಹ ಮಾಡಬೇಕು ಎಂಬುದನ್ನು ಪೇಜಾವರ ಸ್ವಾಮೀಜಿ ಹೇಳಿದ್ದಾರೆ.
ಉಡುಪಿ [ಜ.31] ಅಯೋದ್ಯೆಯಲ್ಲಿ ರಾಮಮಂದಿರ ನಿರ್ಮಾಣ, ದೇಶದಲ್ಲಿ ಗೋಹತ್ಯಾ ನಿಷೇಧ, ನಿರುದ್ಯೋಗ ನಿವಾರಣೆಗೆ ಕ್ರಮ, ಗಂಗಾ ಶುದ್ಧೀಕರಣ, ಭ್ರಷ್ಟಾಚಾರ ನಿರ್ಮೂಲನೆ ಈ 5 ಪ್ರಮುಖ ಗುರಿ ಸಾಧಿಸಲು ಮಹಾಭಾರತದ ಅರ್ಜುನರಂತೆ ಹೋರಾಟ ಮಾಡಬೇಕಾಗಿದೆ ಎಂದು ಪೇಜಾವರ ಶ್ರೀವಿಶ್ವೇಶತೀರ್ಥ ಶ್ರೀಪಾದರು ಕರೆ ನೀಡಿದ್ದಾರೆ.
ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಸಹಸ್ರಾರು ಸಂತರ ಧರ್ಮಸಭೆಯಲ್ಲಿ ಆರ್ಶಿರ್ವಚನ ನೀಡಿದ ಸ್ವಾಮೀಜಿ, ವಿಶ್ವಹಿಂದು ಪರಿಷತ್ತೆಂಬ ರಥದಲ್ಲಿ ಸಮಸ್ತ ಸಂತರು ಕೃಷ್ಣರಾಗಿ ಸಾರಥ್ಯವಹಿಸಿ, ಸಮಸ್ತ ಹಿಂದೂ ಸಮಾಜ ಅರ್ಜುನನಂತೆ ವೀರಾಗ್ರಣಿಗಳಾಗಿ ವಿಜಯ ಸಾಧಿಸುವ ತನಕ ಹೋರಾಟ ಮಾಡಲೇ ಬೇಕಾಗಿದೆ ಎಂದರು
undefined
ಈ ಪಂಚ ಗುರಿಯನ್ನು ಸಾಧಿಸಲು ಎದುರಾಗಿರುವ ಸವಾಲುಗಳನ್ನು ಮೆಟ್ಟಿ ನಿಲ್ಲುವ ಎದೆಗಾರಿಕೆಯನ್ನು ಸಮಾಜ ಹಿಂದಿಗಿಂತಲೂ ಹೆಚ್ಚು ತೋರಬೇಕಾಗಿದೆ. ರಾಮಜನ್ಮ ಭೂಮಿ ವಿವಾದ ಇತ್ಯರ್ಥ ಮತ್ತು ಅತೀ ಶೀಘ್ರ ಮಂದಿರ ನಿರ್ಮಾಣಕ್ಕಾಗಿ ಸಮಸ್ತ ಸಂತರು ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಚರ್ಚಿಸಿ ಪರಿಹಾರಕ್ಕಾಗಿ ಒತ್ತಾಯಿಸುವುದರ ಜೊತೆಗೆ ಸರದಿಯೋಪಾದಿಯಲ್ಲಿ ಉಪವಾಸ ಸತ್ಯಾಗ್ರಹವನ್ನು ಕೈಗೊಳ್ಳಬೇಕು. ಇದಕ್ಕೆ ಇಡೀ ಸಮಾಜ ಜೊತೆಗೂಡಬೇಕೆಂದು ಆಗ್ರಹಿಸಿದರು.
ಸಹಸ್ರಾರು ಸಂತರು ಕೋಟ್ಯಂತರ ಹಿಂದುಗಳ ಈ ಪವಿತ್ರ ಸಮಾಗಮ ಈ 5 ಸವಾಲುಗಳ ಪರಿಹಾರಕ್ಕೆ ಭೀಮಶಕ್ತಿಯನ್ನು ದೇಶಕ್ಕೆ ಕೊಡಲಿ ಎಂದರು. ಸರಸಂಘ ಚಾಲಕ ಮೋಹನ್ ಭಾಗವತ್, ಕಿರಿಯ ಶ್ರೀ ವಿಶ್ವಪ್ರಸನ್ನತೀರ್ಥರು ಸೇರಿದಂತೆ ಐತಿಹಾಸಿಕ ಸಮಾವೇಶದಲ್ಲಿ ದೇಶದ ಪ್ರಮುಖ ಸಂತರು ಭಾಗವಹಿಸಿದ್ದಾರೆ ಎಂದು ಪೇಜಾವರ ಮಠದ ಪ್ರಕಟಣೆ ತಿಳಿಸಿದೆ.