
ಚೆನ್ನೈ: ತಮಿಳುನಾಡು ಮಾಜಿ ಸಿಎಂ ಜಯಲಲಿತಾ ನಿಧನಕ್ಕೆ ಸಂಬಂಧಿಸಿ ಮದ್ರಾಸ್ ಹೈಕೋರ್ಟ್ ಶಂಕೆ ವ್ಯಕ್ತಪಡಿಸಿದ್ದು, ಅವರ ಮೃತದೇಹವನ್ನು ಯಾಕೆ ಹೊರತೆಗೆಯಬಾರದು ಎಂದು ಪ್ರಶ್ನಿಸಿದೆ. ‘‘ಜಯಲಲಿತಾ ನಿಧನದ ಬಗ್ಗೆ ಮಾಧ್ಯಮಗಳೂ ಶಂಕೆ ವ್ಯಕ್ತಪಡಿಸಿವೆ, ಈ ಬಗ್ಗೆ ವೈಯಕ್ತಿಕವಾಗಿ ನನಗೂ ಸಂದೇಹಗಳಿವೆ,'' ಎಂದು ನ್ಯಾ. ಎಸ್ ವೈದ್ಯನಾಥನ್ ಹೇಳಿದ್ದಾರೆ. ಜಯಾ ಸಾವು ಶಂಕಾಸ್ಪದವಾಗಿದ್ದು, ಈ ಬಗ್ಗೆ ತನಿಖೆಯಾಗಬೇಕೆಂದು ಆಗ್ರಹಿಸಿ ಎಐಎಡಿಎಂಕೆ ಕಾರ್ಯಕರ್ತ ಪಿಎ ಜೋಸೆಫ್ ಎಂಬವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ ನ್ಯಾ. ವೈದ್ಯನಾಥನ್ ಅವರನ್ನೊಳಗೊಂಡ ನ್ಯಾಯಪೀಠ ಈ ವಿಷಯ ತಿಳಿಸಿದೆ. ‘‘ಅವರು ಆಸ್ಪತ್ರೆಯಲ್ಲಿದ್ದಾಗ, ಸರಿಯಾಗಿ ಆಹಾರ ಸೇವಿಸುತ್ತಿದ್ದಾರೆ ಎಂದು ಮೊದಲಿಗೆ ಹೇಳಲಾಗಿತ್ತು. ಕನಿಷ್ಠಪಕ್ಷ ಅವರು ನಿಧನರಾದ ಬಳಿಕವಾದರೂ ಸತ್ಯಾಂಶ ಹೊರಬೀಳಲಿ'' ಎಂದು ಕೋರ್ಟ್ ತಿಳಿಸಿದೆ. ಅಲ್ಲದೆ ಜಯಾ ಆರೋಗ್ಯಕ್ಕೆ ಸಂಬಂಧಿಸಿದ ಸಂಪೂರ್ಣ ವಿವರ ನೀಡುವಂತೆ ಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ.
ಅರ್ಜಿ ಪರ ಹಿರಿಯ ನ್ಯಾಯವಾದಿ ಕೆಎಂ ವಿಜಯನ್ ವಾದಿಸಿದರೆ, ಸರ್ಕಾರದ ಪರವಾಗಿ ವಾದಿಸಿದ ಅಡ್ವೊಕೇಟ್ ಜನರಲ್ ಮುತ್ತು ಕುಮಾರಸ್ವಾಮಿ, ಸಾವಿನಲ್ಲಿ ಯಾವುದೇ ನಿಗೂಢತೆಯಿಲ್ಲ ಎಂದು ಪ್ರತಿಪಾದಿಸಿದರು. ‘‘ಏನು ನಡೆಯಿತು ಎಂಬುದು ಸಾರ್ವಜನಿಕರಿಗೆ ತಿಳಿಯಬೇಕು. ಸಂಬಂಧಿಕರನ್ನೂ ನೋಡಲು ಬಿಟ್ಟಿರಲಿಲ್ಲ, ಇದೀಗ ಕೋರ್ಟ್'ಗೂ ಬಂದಿಲ್ಲ. ನನಗೂ ವೈಯಕ್ತಿಕವಾಗಿ ಸಂದೇಹ ಬಂದಲ್ಲಿ, ಮೃತದೇಹ ಹೊರತೆಗೆಯುವಂತೆ ನಾನು ಆದೇಶಿಸಬಹುದು. ಅವರು ಜೀವಂತವಾಗಿದ್ದಾಗ ನೀವು ಏನನ್ನೂ ತಿಳಿಸಿರಲಿಲ್ಲ'' ಎಂದು ನ್ಯಾ. ವೈದ್ಯನಾಥನ್ ಹೇಳಿದರು. ಕೇಂದ್ರದ ಪರ ನ್ಯಾಯವಾದಿ ಜೆ ಮದನಗೋಪಾಲ ರಾವ್‌ರನ್ನು ಪ್ರಶ್ನಿಸಿದ ನ್ಯಾಯಮೂರ್ತಿಗಳು, ‘‘ನೀವು ಅಲ್ಲಿಗೆ ಹೋಗಿದ್ದೀರಿ, ನೀವೂ ಏನನ್ನೂ ವರದಿ ಸಲ್ಲಿಸಿಲ್ಲ. ನಿಮಗೆ ಎಲ್ಲ ಗೊತ್ತಿದೆ, ಆದರೆ ನೀವು ಏನೊಂದೂ ವಿವರ ನೀಡಿಲ್ಲ, ಕಾರಣ ನಿಮಗೇ ಚೆನ್ನಾಗಿ ಗೊತ್ತಿರಬಹುದು. ನೀವು ಸುಮ್ಮನಿದ್ದೀರಿ'' ಎಂದು ತಿಳಿಸಿದರು.
ಮುಚ್ಚಿಡುವಂಥದ್ದೇನೂ ಇಲ್ಲ: ಈ ಬಗ್ಗೆ ಪ್ರತಿಕ್ರಿಯಿಸಿರುವ ಜಯಾ ಆಪ್ತೆ ಶಶಿಕಲಾ ನಟರಾಜನ್, ಈ ವಿಷಯದಲ್ಲಿ ಮುಚ್ಚಿಡುವಂಥದ್ದೇನೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ‘‘75 ದಿನಗಳವರೆಗೆ ನಾವು ಯಾಕೆ ಸುಳ್ಳು ಹೇಳಬೇಕಿತ್ತು? ಹೃದಯಾಘಾತ ಆಗುವುದಕ್ಕೂ ಮುನ್ನಾ ಅದು ನಮಗೆ ತಿಳಿಸಿ ಆಗುತ್ತದೆಯೇ? ನ್ಯಾಯಾಧೀಶರು ಕಾರ್ಯಕರ್ತರ ಭಾವನೆಗಳನ್ನು ಗೌರವಿಸಬೇಕು. ಇದು ನಮ್ಮ ಭಾವನೆಗೆ ಧಕ್ಕೆಯುಂಟು ಮಾಡಿದೆ, ಆದರೆ ಇದಕ್ಕೆ ಉತ್ತರಿಸಲು ನಾವು ಸಿದ್ಧರಿದ್ದೇವೆ'' ಎಂದು ಪಕ್ಷದ ವಕ್ತಾರೆ ಸಿಆರ್ ಸರಸ್ವತಿ ಹೇಳಿದ್ದಾರೆ.
ಎಚ್'ಸಿಪಿ ನಿರಾಕರಣೆ:
ಎಐಎಡಿಎಂಕೆ ಕಾರ್ಯಕರ್ತರಿಂದ ಹಲ್ಲೆಗೊಳಗಾಗಿದ್ದರೆನ್ನಲಾದ ರಾಜ್ಯಸಭಾ ಸದಸ್ಯೆ ಶಶಿಕಲಾ ಪುಷ್ಪಾರ ಪತಿ ಲಿಂಗೇಶ್ವರ ತಿಲಕನ್ ಅವರನ್ನು ಹಾಜರು ಪಡಿಸುವಂತೆ ಪೊಲೀಸರಿಗೆ ನಿರ್ದೇಶಿಸಲು ಸಲ್ಲಿಸಲಾಗಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ(ಎಚ್‌ಸಿಪಿ)ಯನ್ನು ಮದ್ರಾಸ್ ಹೈಕೋರ್ಟ್ ತಳ್ಳಿ ಹಾಕಿದೆ. ತಿಲಕನ್ ಅವರನ್ನು ಬೆಳಗ್ಗೆ 9:30ಕ್ಕೇ ಜಾಮೀನಿನಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಸರ್ಕಾರಿ ವಕೀಲ ರಾಜರತ್ನಂ ನ್ಯಾಯಪೀಠಕ್ಕೆ ತಿಳಿಸಿದರು. ತಿಲಕನ್ ಅವರನ್ನು ಜಾಮೀನು ಮೇಲೆ ಬಿಡುಗಡೆಗೊಳಿಸಿದ ಬಳಿಕ, ಹೇಬಿಯಸ್ ಕಾರ್ಪಸ್ ಅರ್ಜಿಯ ಪ್ರಶ್ನೆ ಎಲ್ಲಿಂದ ಬಂತು ಎಂದು ನ್ಯಾಯಪೀಠ ಪ್ರಶ್ನಿಸಿತು.
ಪಿಟಿಐ ವರದಿ
epaper.kannadaprabha.in
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.