ಆಡಿಯೋ ಪ್ರಕರಣ: ತೀರ್ಪು ಕಾಯ್ದಿರಿಸಿದ ‘ಹೈ’ ಪೀಠ

By Web Desk  |  First Published Feb 21, 2019, 9:47 AM IST

ಆಪರೇಶನ್‌ ಕಮಲ ಆಡಿಯೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗುರುಮಠಕಲ್‌ ಶಾಸಕ ನಾಗಣ್ಣಗೌಡ ಕಂದಕೂರ್‌ ಪುತ್ರ ಶರಣಗೌಡ ಅವರು ಯಡಿಯೂರಪ್ಪ ಮತ್ತು ಹಲವರ ವಿರುದ್ಧ ಆಡಿಯೋ ವಿಚಾರವಾಗಿ 4 ದಿನದ ಹಿಂದಷ್ಟೇ ರಾಯಚೂರು ಜಿಲ್ಲೆಯ ದೇವದುರ್ಗ ಠಾಣೆಯಲ್ಲಿ ಈ ದೂರು ದಾಖಲಿಸಿದ್ದರು. ಈ ಪ್ರಕರಣ ರದ್ದುಗೊಳಿಸುವಂತೆ ಯಡಿಯೂರಪ್ಪ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು ವಿಚಾರಣೆ ನಡೆಸಿದ ನ್ಯಾಯಾಲಯ ತೀರ್ಪು ಕಾಯ್ದಿರಿಸಿದೆ.
 


 ಕಲಬುರಗಿ (ಫೆ. 21):  ದೇವದುರ್ಗ ಪೊಲೀಸರು ತಮ್ಮ ವಿರುದ್ಧ ದಾಖಲಿಸಿರುವ ಆಪರೇಷನ್‌ ಕಮಲ ಆಡಿಯೋ ಬಾಂಬ್‌ ಪ್ರಕರಣದ ರದ್ದತಿ ಕೋರಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿರುವ ಇಲ್ಲಿನ ಹೈಕೋರ್ಟ್‌ ತೀರ್ಪನ್ನು ಕಾಯ್ದಿರಿಸಿದೆ.

ನ್ಯಾ.ಪ್ರಲ್ಹಾದ್‌ ಗೋವಿಂದರಾವ್‌ ಮಾಲೀಪಾಟೀಲ್‌ ಅವರಿದ್ದ ಏಕಸದಸ್ಯ ಪೀಠ ಬುಧವಾರ ಇಡೀ ದಿನ ವಾದಿ-ಪ್ರತಿವಾದಿಗಳಿಬ್ಬರ ಕಡೆಯಿಂದ ವಾದ ಆಲಿಸಿತು. ಯಡಿಯೂರಪ್ಪ ಪರ ವಕೀಲ ಸಿ.ವಿ.ನಾಗೇಶ್‌ ವಾದ ಮಂಡಿಸಿದರು. ಶಾಸಕ ಶಿವನಗೌಡ ನಾಯಕ ಹಾಗೂ ಯಡಿಯೂರಪ್ಪ ಅವರ ಮಾಧ್ಯಮ ಸಲಹೆಗಾರ ಎಂ.ಬಿ.ಮರಮಕಲ್‌ ಪರವಾಗಿ ವಕೀಲ ಅಶೋಕ ಹಾರನಹಳ್ಳಿ ವಾದಿಸಿದರು. ಇದೇವೇಳೆ ಸರ್ಕಾರದ ಪರವಾಗಿ ಎಎಜಿ ಸಂಜಯ್‌ ಚೌಟ್‌ ವಾದ ಮಂಡಿಸಿದರು.

Latest Videos

undefined

ಬಿಎಸ್‌ವೈ ಲಂಚದ ಮಾತಾಡಿಲ್ಲ:

ಯಡಿಯೂರಪ್ಪನವರ ಪರವಾಗಿ ವಾದ ಮಂಡಿಸಿದ ವಕೀಲ ಸಿ.ವಿ.ನಾಗೇಶ್‌, ಎಫ್‌ಐಆರ್‌ನಲ್ಲಿ ಹೇಳಿರುವಂತೆಯೇ .10 ಕೋಟಿ ಚುನಾವಣೆ ವೆಚ್ಚಕ್ಕಾಗಿ ನೀಡಲಾಗುತ್ತದೆ ಎಂದು ಹೇಳಲಾಗಿದೆ. ಆದರೆ ಇಡೀ ಆಡಿಯೋದಲ್ಲಿ ಎಲ್ಲಿಯೂ ಲಂಚದ ವಿಚಾರವಾಗಿ ಮಾತನ್ನು ಯಡಿಯೂರಪ್ಪವರು ಆಡಿಲ್ಲ ಎಂದು ಪ್ರತಿಪಾದಿಸಿದರು. ಚುನಾವಣೆ ವೆಚ್ಚವೆಂದು ಹಣ ಕೊಡುವ ಮಾತಿದೆ. ಹೀಗಾಗಿ ಈ ಪ್ರಕರಣ ವಿಚಾರಣೆಗೆ ಅಂಗೀಕರಿಸದೆ ರದ್ದು ಪಡಿಸಬೇಕು ಅಥವಾ ವಿಚಾರಣೆಗೆ ಮದ್ಯಂತರ ತಡೆ ನೀಡಬೇಕು ಎಂದು ಕೋರಿದರು.

ಪ್ರಕರಣವೇ ತಪ್ಪು:

ಶಿವನಗೌಡ ನಾಯಕ, ಎಂ.ಬಿ.ಮರಕಲ್‌ ಅವರ ಪರವಾಗಿ ವಾದಿಸಿದ ಹಿರಿಯ ನ್ಯಾಯವಾದಿ ಅಶೋಕ ಹಾರ್ನಹಳ್ಳಿ, ಆಪರೇಷನ್‌ ಕಮಲ ಆಡಿಯೋ ಬಾಂಬ್‌ ಪ್ರಕರಣ ಭ್ರಷ್ಟಾಚಾರ ನಿಗ್ರಹ ಕಾಯಿದೆ ಹಾಗೂ ಐಪಿಸಿ ಕಾಯಿದೆಯಡಿಯಲ್ಲಿ ದಾಖಲಾದ ಪ್ರಕರಣ. ಆದರೆ ಆಡಿಯೋದಲ್ಲೆಲ್ಲೂ ಶಿವನಗೌಡ ನಾಯಕರಾಗಲಿ, ಯಡಿಯೂರಪ್ಪನವರ ಮಾಧ್ಯಮ ಸಲಹೆಗಾರ ಎಂ.ಬಿ. ಮರಮಕಲ್‌ ಅವರಾಗಲಿ ಲಂಚದ ವಿಚಾರ ಪ್ರಸ್ತಾಪ ಮಾಡಿಲ್ಲ. ಇದು ಚುನಾವಣೆ ಸಂಹಿತೆ ವಿಚಾರದಡಿ ಬರುವ ಪ್ರಕರಣ. ಆದರೆ ಪೊಲೀಸರು ಇದನ್ನು ಭ್ರಷ್ಟಾಚಾರ ನಿಗ್ರಹ ಕಾಯಿದೆ ಮತ್ತು ಐಪಿಸಿ ಅಡಿ ಪ್ರಕರಣ ದಾಖಲಿಸಿದ್ದಾರೆ.

ಮೂಲತಃ ಈ ಪ್ರಕರಣವೇ ತಪ್ಪು. ಹೀಗಾಗಿ ಎಫ್‌ಐಆರ್‌ ರದ್ದಾಗಬೇಕು. ಯಾರು ಯಾರಿಗೆ ಲಂಚ ಕೊಟ್ಟಿದ್ದಾರೆ ಎಂಬ ಬಗ್ಗೆಯೂ ಎಲ್ಲೂ ಮಾಹಿತಿಯಿಲ್ಲ. ಸಾಕ್ಷಿ, ಪುರಾವೆಗಳಿಲ್ಲ. ಇದು ರಾಜಕೀಯ ದುರುದ್ದೇಶದಿಂದ ಕೂಡಿದ ಪ್ರಕರಣವಾಗಿ ದಾಖಲಾಗಿದೆ. ಮುಖ್ಯಮಂತ್ರಿಗಳು ಸದರಿ ಪ್ರಕರಣದ ತನಿಖೆ ಮಾಡುತ್ತೇವೆ ಎಂದೂ ಹೇಳಿದ್ದರು. ಅದರಂತೆಯೇ ಸದ್ಯಕ್ಕೆ ಪೊಲೀಸರಿಂದ ಪ್ರಕರಣ ದಾಖಲಿಸಿ ತನಿಖೆ ಶುರು ಮಾಡಲಾಗಿದೆ. ಇಲ್ಲಿ ಭ್ರಷ್ಟಾಚಾರವೇ ನಡೆದಿಲ್ಲ ಎಂದು ವಾದಿಸಿದರು.

ಸರ್ಕಾರದ ಪರವಾಗಿ ಎಎಜಿ ಸಂಜಯ್‌ ಚೌಟ್‌ ವಾದ ಮಂಡಿಸುತ್ತ ಆಡಿಯೋ ಪ್ರಕರಣದಲ್ಲಿನ ಅನೇಕ ಸಂಗತಿಗಳನ್ನು ನ್ಯಾಯಮೂರ್ತಿಗಳ ಗಮನಕ್ಕೆ ತಂದರು. ಪೊಲೀಸರು ಈಗಷ್ಟೇ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಕೈಗೆತ್ತಿಕೊಂಡಿದ್ದಾರೆ. ಹಾಗಾಗಿ ಈಗಲೇ ತಡೆಯಾಜ್ಞೆ ಅಥವಾ ವಿಚಾರಣೆಯೇ ರದ್ದು ಮಾಡುವ ವಾದ ಸರಿಯಲ್ಲ ಎಂದರು.

ಆಪರೇಶನ್‌ ಕಮಲ ಆಡಿಯೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗುರುಮಠಕಲ್‌ ಶಾಸಕ ನಾಗಣ್ಣಗೌಡ ಕಂದಕೂರ್‌ ಪುತ್ರ ಶರಣಗೌಡ ಅವರು ಯಡಿಯೂರಪ್ಪ ಮತ್ತು ಹಲವರ ವಿರುದ್ಧ ಆಡಿಯೋ ವಿಚಾರವಾಗಿ 4 ದಿನದ ಹಿಂದಷ್ಟೇ ರಾಯಚೂರು ಜಿಲ್ಲೆಯ ದೇವದುರ್ಗ ಠಾಣೆಯಲ್ಲಿ ಈ ದೂರು ದಾಖಲಿಸಿದ್ದರು. ಈ ಪ್ರಕರಣ ರದ್ದುಗೊಳಿಸುವಂತೆ ಯಡಿಯೂರಪ್ಪ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು ವಿಚಾರಣೆ ನಡೆಸಿದ ನ್ಯಾಯಾಲಯ ತೀರ್ಪು ಕಾಯ್ದಿರಿಸಿದೆ.

click me!