
ಬೆಂಗಳೂರು (ಸೆ. 11): ‘ಕರ್ನಾಟಕವು ಜಂಗಲ್ ರಾಜ್ಯವಾಗಿ ಪರಿವರ್ತನೆಯಾಗಿದೆ. ಪೊಲೀಸರು ತಮ್ಮನ್ನು ತಾವೇ ಕಾನೂನು ಎಂಬುದಾಗಿ ಭಾವಿಸಿದ್ದಾರೆ. ಸಿವಿಲ್ ವ್ಯಾಜ್ಯಗಳಲ್ಲಿ ಮಧ್ಯಪ್ರವೇಶ ಮಾಡದಂತೆ
ನ್ಯಾಯಾಲಯ ಹಲವು ಬಾರಿ ಆದೇಶಿಸಿದ್ದರೂ, ಪೊಲೀಸರು ಮಾತ್ರ ಠಾಣೆಯಲ್ಲಿ ಸಿವಿಲ್ ಪ್ರಕರಣಗಳನ್ನು ಸೆಟಲ್‌ಮೆಂಟ್ ಮಾಡುತ್ತಿದ್ದಾರೆ’ ಎಂದು ಹೈಕೋರ್ಟ್ ಕಿಡಿಕಾರಿದೆ.
ಬಸವನಗುಡಿ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ತಮ್ಮ ವಿರುದ್ಧ ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಡಿ.ವೆಂಕಟೇಶ್ ಗುಪ್ತಾ ಮತ್ತವರ ಪುತ್ರ ಶ್ರೀಹರಿ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ಏಕಸದಸ್ಯ ಪೀಠ, ಪೊಲೀಸರ ವಿರುದ್ಧ ಸೋಮವಾರ ಆಕ್ರೋಶ ವ್ಯಕ್ತಪಡಿಸಿತು.
ಅಲ್ಲದೆ, ಪ್ರಕರಣ ಸಂಬಂಧ ಕಾನೂನು ಪ್ರಕಾರ ಕ್ರಮ ಜರುಗಿಸಲು ಬಸವನಗುಡಿ ಠಾಣಾ ಪೊಲೀಸರಿಗೆ ಷರಾ ಬರೆದ ಸಂಬಂಧ ವಿವರಣೆ ನೀಡಲು ಬೆಂಗಳೂರು ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರು
ಸೆ.24 ರಂದು ವಿಚಾರಣೆಗೆ ಖುದ್ದು ಹಾಜರಾಗಬೇಕು ಎಂದು ನ್ಯಾಯಪೀಠ ನಿರ್ದೇಶಿಸಿದೆ.
ಇದಕ್ಕೂ ಮುನ್ನ ಸಿವಿಲ್ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡುವ ಪೊಲೀಸರ ಕಾರ್ಯ ವೈಖರಿ ಕುರಿತು ಆಕ್ರೋಶಗೊಂಡ ನ್ಯಾಯಮೂರ್ತಿಗಳು, ವಾಸ್ತವದಲ್ಲಿ ಅಪರಾಧ ಕೃತ್ಯ ಘಟಿಸಿದ್ದರೆ, ಪೊಲೀಸರು ಆ ಕುರಿತು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸಲಿ. ಅದನ್ನು ಹೊರತುಪಡಿಸಿ ಸಿವಿಲ್ ಪ್ರಕರಣಗಳ ಸಂಬಂಧ ಸಾರ್ವಜನಿಕರನ್ನು ಪೊಲೀಸ್ ಠಾಣೆಗೆ ಕರೆದು ಸೆಟೆಲ್‌ಮೆಂಟ್ ಮಾಡಬಾರದು. ಇಂತಹ ನಡವಳಿಕೆಯನ್ನು ಕೋರ್ಟ್ ಎಂದಿಗೂ ಸಹಿಸುವುದಿಲ್ಲ ಎಂದರು.
ಅಲ್ಲದೆ, ಪ್ರಕರಣದಲ್ಲಿ ದಕ್ಷಿಣ ವಿಭಾಗದ ಡಿಸಿಪಿಯು ತನಿಖೆಗೆ ಶಿಫಾರಸು ಮಾಡಿರುವ ಬಗ್ಗೆ ಬೇಸರಗೊಂಡ ನ್ಯಾಯಮೂರ್ತಿ, ಇದು ಸಹ ಸಿವಿಲ್ ಪ್ರಕರಣವಾಗಿದೆ. ಸಿವಿಲ್ ಪ್ರಕರಣಗಳಲ್ಲಿ ಪೊಲೀಸರು ಮಧ್ಯಪ್ರವೇಶಿಸಬಾರದು. ಆದರೆ, ಡಿಸಿಪಿಯೇ ಅವರು ತನಿಖೆಗೆ ಶಿಫಾರಸು ಮಾಡಿದರೆ ಹೇಗೆ? ಅವರು ಹಿರಿಯ ಅಧಿಕಾರಿಯಾಗಿದ್ದು, ಕಾನೂನಿನ ಬಗ್ಗೆ ಅರಿವು ಇಲ್ಲವೆ ಎಂದು ಖಾರವಾಗಿ ನ್ಯಾಯಮೂರ್ತಿ ಪ್ರಶ್ನಿಸಿದರು.
ಹಾಗೆಯೇ, ಪೊಲೀಸರು ತಮ್ಮನ್ನೇ ತಾವು ಕಾನೂನು ಎಂದು ಭಾವಿಸಿದ್ದಾರೆ. ಕರ್ನಾಟಕ ಜಂಗಲ್ ರಾಜ್ಯವಾಗಿ ಪರಿವರ್ತನೆಯಾಗಿದೆ. ಇಂತಹ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಆಗಷ್ಟೇ ಅವರಿಗೆ ಬುದ್ಧಿ ಬರುತ್ತದೆ. ಸಂಜ್ಞೆಯ ಅಪರಾಧವಾಗದಿದ್ದರೂ ಅರ್ಜಿದಾರರ ವಿರುದ್ಧ ಎಫ್ ಐಆರ್ ದಾಖಲಿಸಿರುವುದು ಎಷ್ಟ ಸರಿ? ಪೊಲೀಸರು ಈ ಪ್ರವೃತ್ತಿ ಬದಲಿಸಿಕೊಳ್ಳಬೇಕು ಎಂದು ನ್ಯಾಯಪೀಠ ಚಾಟಿ ಬೀಸಿ ವಿಚಾರಣೆ ಮುಂದೂಡಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.