ತಮಿಳುನಾಡಿನ 3 ಜಿಲ್ಲೆಗಳಲ್ಲಿ ಭಾರೀ ಮಳೆ

By Suvarna Web DeskFirst Published Mar 15, 2018, 7:35 AM IST
Highlights

ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದ ಪರಿಣಾಮ ಬುಧವಾರ ದಕ್ಷಿಣ ತಮಿಳುನಾಡಿನ ಮೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ.

ಮದುರೈ: ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದ ಪರಿಣಾಮ ಬುಧವಾರ ದಕ್ಷಿಣ ತಮಿಳುನಾಡಿನ ಮೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ತೂತ್ತುಕುಡಿ, ತಿರುನೆಲ್ವೇಲಿ, ಕನ್ಯಾಕುಮಾರಿಯಲ್ಲಿ ಎರಡು ದಿನಗಳಿಂದ ಭಾರೀ ಮಳೆ ಸುರಿಯುತ್ತಿದೆ. ನಗರಗಳಲ್ಲಿ ಕೆಲವು ಪ್ರಮುಖ ರಸ್ತೆಗಳು ನೀರಿನಿಂದ ತುಂಬಿ, ಸಂಚಾರಕ್ಕೆ ತೊಂದರೆಗಳಾದವು. ತಗ್ಗು ಪ್ರದೇಶಗಳಲ್ಲಿ ಮನೆಗಳು, ಅಂಗಡಿಗಳಿಗೆ ಮಳೆ ನೀರು ನುಗ್ಗಿತು.

ನೀರು ಹರಿವಿನ ತೀವ್ರತೆ ಹೆಚ್ಚಿರುವುದರಿಂದ, ತಿರುನೆಲ್ವೇಲಿ ಜಿಲ್ಲೆಯ ಪ್ರಸಿದ್ಧ ಕೌತ್ರಾಲಂ ಜಲಪಾತದಲ್ಲಿ ಸ್ನಾನ ಮಾಡದಂತೆ ಪ್ರವಾಸಿಗರಿಗೆ ಎಚ್ಚರಿಕೆ ನೀಡಲಾಗಿದೆ. ಎರಡು ದಿನಗಳ ಹಿಂದೆ ಜಲಪಾತ ಒಣಗಿತ್ತು. ಆದರೆ, ಘಟ್ಟಪ್ರದೇಶದಲ್ಲಿ ಅನಿರೀಕ್ಷಿತ ಮಳೆ ಸುರಿದಿರುವುದರಿಂದ, ಜಲಪಾತದಲ್ಲಿ ನೀರಿನ ಹರಿವು ತೀವ್ರತೆ ಪಡೆದಿದೆ. ತಿರುನೆಲ್ವೇಲಿ ಮತ್ತು ಕನ್ಯಾಕುಮಾರಿ ಜಿಲ್ಲೆಯಲ್ಲಿ ಕಠಾವಿಗೆ ಸಿದ್ಧವಾಗಿದ್ದ ಭತ್ತದ ಬೆಳೆಗೆ ಹಾನಿಯಾಗಿದೆ.

ಪಾಪನಾಸಂ ಅಣೆಕಟ್ಟು ಪ್ರದೇಶದಲ್ಲೂ ಉತ್ತಮ ಮಳೆಯಾಗಿದೆ. ದಕ್ಷಿಣ ತಮಿಳುನಾಡು, ಕೇರಳ ಮತ್ತು ಲಕ್ಷದ್ವೀಪದಲ್ಲಿ ಇನ್ನೂ ಎರಡು ದಿನ ಮಳೆ ಮುಂದುವರಿಯುವ ಬಗ್ಗೆ ಹವಾಮಾನ ಇಲಾಖೆ ಮೂಲಗಳು ಮುನ್ಸೂಚನೆ ನೀಡಿವೆ

click me!