ನೇಪಾಳದಲ್ಲಿ ರಾಜ್ಯದ 250 ಯಾತ್ರಿಗಳಿಗೆ ಸಂಕಷ್ಟ

 |  First Published Jul 3, 2018, 8:26 AM IST

ಮಾನಸ ಸರೋವರದಲ್ಲಿ ಕಳೆದ ನಾಲ್ಕು ದಿನಗಳಿಂದ ಭಾರೀ ಮಳೆ ಹಾಗೂ ಹಿಮಪಾತವಾಗುತ್ತಿದ್ದು ರಾಜ್ಯದ 250 ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ನೆರವಿಗೆ ಧಾವಿಸಬೇಕೆಂದು ಯಾತ್ರಾರ್ಥಿಗಳು ಸಂಬಂಧಿಕರು ಮನವಿ ಮಾಡಿದ್ದಾರೆ. 


ಬೆಂಗಳೂರು (ಜೂ. 03):  ಮಾನಸ ಸರೋವರ ಯಾತ್ರೆಗೆ ತೆರಳಿದ್ದ ರಾಜ್ಯದ 250 ಮಂದಿ ಯಾತ್ರಾರ್ಥಿಗಳು ಕಳೆದ ನಾಲ್ಕು ದಿನಗಳಿಂದ ನೇಪಾಳ ಬಳಿಯ ಸಿನಿಕೋಟ್‌ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆ ಹಾಗೂ ಮಂಜಿನ ಹೊಡೆತದಿಂದ ಸಂಕಷ್ಟಕ್ಕೆ ಸಿಲುಕಿದ್ದು, ರಾಜ್ಯ ಸರ್ಕಾರ ಕೂಡಲೇ ಯಾತ್ರಾರ್ಥಿಗಳ ನೆರವಿಗೆ ಧಾವಿಸಬೇಕೆಂದು ಮನವಿ ಮಾಡಿದ್ದಾರೆ.

ಶ್ರೀ ಶಂಕರ ವಾಹಿನಿಯವರು ಯಾತ್ರೆಯ ಹೊಣೆ ಹೊತ್ತು ರಾಜ್ಯದಿಂದ ಹಲವು ಜನರನ್ನು ಮಾನಸ ಸರೋವರ ಯಾತ್ರೆಗೆ ಕರೆದೊಯ್ದಿದ್ದರು. ಸಂಕಷ್ಟದಲ್ಲಿ ಸಿಲುಕಿರುವವರಲ್ಲಿ ಮಂಡ್ಯ, ರಾಮನಗರ, ಮೈಸೂರು ಭಾಗದ ಜನರೇ ಹೆಚ್ಚಾಗಿದ್ದು, ಹಲವು ಅಸ್ವಸ್ಥಗೊಂಡಿದ್ದಾರೆ. ಕಳೆದ ನಾಲ್ಕು ದಿನದಿಂದ ಎಡಬಿಡದೆ ಸುರಿಯುತ್ತಿರುವ ಮಳೆ ಮತ್ತು ಮಂಜಿನ ಹೊಡೆತದಿಂದ ಮುಂದೆ ಸಂಚರಿಸಲಾಗದ ಸ್ಥಿತಿ ಎದುರಾಗಿದೆ. ರಾಜ್ಯ ಸರ್ಕಾರ ಎಲ್ಲ ಯಾತ್ರಾರ್ಥಿಗಳನ್ನೂ ಸುರಕ್ಷಿತವಾಗಿ ಕರೆತರಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಂಕಷ್ಟದಲ್ಲಿರುವ ಯಾತ್ರಾರ್ಥಿಗಳ ಸಂಬಂಧಿಕರು ಮನವಿ ಮಾಡಿದ್ದಾರೆ.

Tap to resize

Latest Videos

undefined

ಅಸ್ವಸ್ಥಗೊಂಡಿರುವವರ ಚಿಕಿತ್ಸೆಗೆ ಸಮೀಪದಲ್ಲಿ ಎಲ್ಲೂ ಆರೋಗ್ಯ ಕೇಂದ್ರಗಳ ಸೌಲಭ್ಯವಿಲ್ಲ. ಯಾತ್ರಾರ್ಥಿಗಳಿರುವ ಸಿನಿಕೋಟ್‌ ಪ್ರದೇಶಕ್ಕೆ ಯಾವುದೇ ಸಾರಿಗೆ ವ್ಯವಸ್ಥೆ ಇಲ್ಲ. ಕೇವಲ ಲಘು ವಿಮಾನಗಳು ಮಾತ್ರ ಹೋಗಿ ಬರಬಹುದಾಗಿದೆ ಎಂದು ಹೇಳಲಾಗುತ್ತಿದೆ. ಒಂದೆಡೆ ಯಾತ್ರಾರ್ಥಿಗಳು ಸಂಕಷ್ಟದಲ್ಲಿ ಸಿಲುಕಿದ್ದರೆ, ಅವರನ್ನು ಸಂಪರ್ಕಿಸಲು ಸಾಧ್ಯವಾಗದಿರುವುದರಿಂದ ಅವರ ಕುಟುಂಬ ಸದಸ್ಯರು ತೀವ್ರ ಆತಂಕಗೊಂಡಿದ್ದಾರೆ. ಯಾತ್ರಾರ್ಥಿಗಳ ಗ್ರಾಮಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ರಾಜ್ಯ ಸರ್ಕಾರ ತಕ್ಷಣ ನೇಪಾಳ ಸರ್ಕಾರದೊಂದಿಗೆ ಚರ್ಚಿಸಿ ಅವರನ್ನು ಸುರಕ್ಷಿತವಾಗಿ ಕರೆತರುವ ಕೆಲಸ ಮಾಡಬೇಕು ಎಂದು ಕುಟುಂಬ ಸದಸ್ಯರು ಮನವಿ ಮಾಡಿದ್ದಾರೆ.

ಮಾಹಿತಿ ಪಡೆಯುವ ಪ್ರಯತ್ನದಲ್ಲಿ ಸರ್ಕಾರ:

ಈ ನಡುವೆ, ರಾಜ್ಯ ಸರ್ಕಾರವು ಸಿನಿಕೋಟ್‌ನಲ್ಲಿ ಸಮಸ್ಯೆಗೆ ಸಿಲುಕಿರುವ ಯಾತ್ರಾರ್ಥಿಗಳ ಮಾಹಿತಿ ಕಲೆಹಾಕುವ ಪ್ರಯತ್ನದಲ್ಲಿದೆ. ನೇಪಾಳದಲ್ಲಿ ತೊಂದರೆಯಲ್ಲಿರುವ ಯಾತ್ರಾರ್ಥಿಗಳ ಸಂಪರ್ಕಿಸಲು ಪ್ರಯತ್ನಿಸಲಾಗುತ್ತಿದೆ. ಜತೆಗೆ, ಕನ್ನಡಿಗರ ರಕ್ಷಣೆಗೆ ಸಹಕರಿಸುವಂತೆ ಕೇಂದ್ರ ಸರ್ಕಾರದೊಂದಿಗೂ ಮಾತುಕತೆ ನಡೆಸಲು ಪ್ರಯತ್ನ ನಡೆದಿದೆ ಎಂದು ಕಂದಾಯ ಸಚಿವರ ಕಚೇರಿಯ ಮೂಲಗಳು ತಿಳಿಸಿವೆ.

click me!