ರಾಜ್ಯದ ಹಲವೆಡೆ ಭಾರಿ ಪ್ರಮಾಣದಲ್ಲಿ ಆಲಿಕಲ್ಲು ಮಳೆ

By Web DeskFirst Published Apr 6, 2019, 11:23 AM IST
Highlights

ಯುಗಾದಿ ಹಬ್ಬದ ಮುನ್ನಾ ದಿನ ರಾಜ್ಯದ ಹಲವೆಡೆ ಆಲಿಕಲ್ಲು ಸಹಿತ ಮಳೆಯಾಗಿದೆ. 

ಧಾರವಾಡ/ಸುಬ್ರಹ್ಮಣ್ಯ : ಯುಗಾದಿ ಮುನ್ನಾದಿನವಾದ ಶುಕ್ರವಾರದಂದು ರಾಜ್ಯದ ಕೆಲವೆಡೆ ಬೇಸಿಗೆ ಮಳೆ ತಂಪೆರೆದಿದ್ದು ಕೆಲವೆಡೆ ಆಲಿಕಲ್ಲು ಮಳೆಯಾಗಿರುವ ಬಗ್ಗೆ ವರದಿಯಾಗಿದೆ. 

ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಶುಕ್ರವಾರ ಸಂಜೆ ಗುಡುಗು ಸಹಿತ ಭಾರಿ ಗಾಳಿ ಮಳೆಯೊಂದಿಗೆ ಆಲಿಕಲ್ಲಿನ ಸುರಿಮಳೆಯಾಗಿದೆ. ಮಳೆ ಬರುವ ಮುಂಚಿತವಾಗಿ ಬೀಸಿದ ಗಾಳಿಗೆ ಸುಬ್ರಹ್ಮಣ್ಯ ನೂಚಿಲ ಮನೆಯ ಮೇಲೆ ಬೃಹದಾಕಾರದ ಮರ ಬಿದ್ದು ಹಾನಿಯಾಗಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. 

ಸುತ್ತಮುತ್ತಲ ಪ್ರದೇಶಗಳ ಕೆಲವು ಕೃಷಿ ತೋಟಗಳು ವಿಪರೀತ ಗಾಳಿಗೆ ಹಾನಿಗೀಡಾಗಿವೆ. ಧಾರ​ವಾ​ಡ​ ನಗರದಲ್ಲಿ ಶುಕ್ರವಾರ ಸುಮಾರು ಅರ್ಧ​ಗಂಟೆಗೂ ಹೆಚ್ಚು ಕಾಲ ಸಾಧಾ​ರಣ ಮಳೆ​ಯಾ​ಗಿದೆ. ಗುರು​ವಾರ ತಡರಾತ್ರಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ನಾನಾ ಕಡೆ ಸುರಿದ ಭಾರೀ ಪ್ರಮಾ​ಣ ಬಿರು​ಗಾಳಿ ಮಿಶ್ರಿತ ಆಲಿ​ಕಲ್ಲು ಮಳೆಗೆ ಒಂದು ಎಮ್ಮೆ ಹಾಗೂ 23 ಕುರಿಗಳು ಬಲಿ​ಯಾ​ಗಿವೆ. 

ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ 300ಕ್ಕೂ ಅಧಿಕ ಹೆಕ್ಟೇರ್‌ ಬೆಳೆ ನಾಶವಾಗಿದೆ. ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿಯೂ ಸಂಜೆ ವೇಳೆಗೆ ಗುಡುಗುಸಹಿತ ಭಾರಿ ಮಳೆಯಾಗಿದೆ. ಮಹಾರಾಷ್ಟ್ರದ ಕೆಲವೆಡೆ ಮಳೆಯಾಗಿರುವುದರಿಂದ ರಾಜಾಪುರ ಬ್ಯಾರೇಜ್‌ನಿಂದ 7 ಗೇಟ್‌ಗಳ ಮೂಲಕ ಕೃಷ್ಣಾ ನದಿಗೆ ಬೃಹತ್‌ ಪ್ರಮಾಣದಲ್ಲಿ ರಾಜ್ಯಕ್ಕೆ ನೀರು ಹರಿದು ಬರುತ್ತಿದೆ.

click me!