ಹೆಚ್ಚಿದ ವರುಣನ ಅಬ್ಬರ : ಕೆಆರ್ ಎಸ್ ಭರ್ತಿಗೆ 5 ಅಡಿ ಬಾಕಿ

By Kannadaprabha NewsFirst Published Jul 13, 2018, 7:34 AM IST
Highlights

ಕಳೆದ ಕೆಲ ದಿನಗಳಿಂದ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಪ್ರಬಲವಾಗಿರುವ ಮುಂಗಾರು ಮಳೆ ಪ್ರಭಾವ ಗುರುವಾರವೂ ಮುಂದುವರಿದಿದ್ದು ಕೆಆರ್‌ಎಸ್‌ ಸೇರಿದಂತೆ ಕಾವೇರಿ ಕೊಳ್ಳದ ಪ್ರಮುಖ ಜಲಾಶಯಗಳು ಭರ್ತಿಯಾಗುವ ಹಂತದಲ್ಲಿವೆ. 

ಬೆಂಗಳೂರು :   ಕಳೆದ ಕೆಲ ದಿನಗಳಿಂದ ರಾಜ್ಯದ ಮಲೆನಾಡು ಪ್ರದೇಶಗಳಲ್ಲಿ ಪ್ರಬಲವಾಗಿರುವ ಮುಂಗಾರು ಮಳೆ ಪ್ರಭಾವ ಗುರುವಾರವೂ ಮುಂದುವರಿದಿದ್ದು ಕೆಆರ್‌ಎಸ್‌ ಸೇರಿದಂತೆ ಕಾವೇರಿ ಕೊಳ್ಳದ ಪ್ರಮುಖ ಜಲಾಶಯಗಳು ಭರ್ತಿಯಾಗುವ ಹಂತದಲ್ಲಿವೆ. ಮಳೆ ಸಂಬಂಧಿ ಕಾರಣಗಳಿಗಾಗಿ ಎಂಟು ವರ್ಷದ ಬಾಲಕಿಯೂ ಸೇರಿದಂತೆ ಇಬ್ಬರು ಮೃತಪಟ್ಟಿರುವ ಪ್ರತ್ಯೇಕ ಘಟನೆಗಳು ಬೀದರ್‌ ಹಾಗೂ ಶಿವಮೊಗ್ಗ ಜಿಲ್ಲೆಗಳಿಂದ ವರದಿಯಾಗಿದೆ.

ಹೈದ್ರಾಬಾದ್‌ ಕರ್ನಾಟಕ ವ್ಯಾಪ್ತಿಯ ಕೆಲಭಾಗಗಳಲ್ಲಿ ಸಾಧಾರಣ ಮಳೆ ಸುರಿದಿದ್ದು ಮನೆಯೊಂದರ ಗೋಡೆ ಕುಸಿದ ಪರಿಣಾಮ ಬಾಲಕಿಯೊಬ್ಬಳು ಸ್ಥಳದಲ್ಲಿಯೇ ಮೃತಪಟ್ಟಘಟನೆ ಬೀದರ್‌ ತಾಲೂಕಿನ ಕಪಲಾಪುರ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ. ಬಾಲಕಿ ಪಕ್ಕದಲ್ಲಿಯೇ ಇದ್ದ ತಾಯಿ ಸವೀತಾಗೆ ಸಣ್ಣಪುಟ್ಟಗಾಯಗಳಾಗಿದ್ದು ಪ್ರಾಣಪಾಯದಿಂದ ಪಾರಾಗಿದ್ದಾಳೆ. ಸಾಗರ ಪಟ್ಟಣದ ಬೆಳಲಮಕ್ಕಿ ಎಂಬಲ್ಲಿ ಮನೆಯ ಕಾಂಪೌಂಡ್‌ ಗೋಡೆ ಕುಸಿದು ವೃದ್ಧೆ ಕಲ್ಲಮ್ಮ(65) ಮೃತಪಟ್ಟಿದ್ದಾರೆ. ಬುಧವಾರ ರಾತ್ರಿ ಮಳೆಗೆ ಒದ್ದೆಗೊಂಡಿದ್ದ ಕಾಂಪೌಂಡು ಗೋಡೆ ಬಳಿ ಅವರು ಗುರುವಾರ ಬೆಳಗ್ಗೆ ಸಂಚರಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.

ಅಪಾಯ ಮಟ್ಟದಲ್ಲಿ ನದಿಗಳು:

ಶಿವಮೊಗ್ಗ ಜಿಲ್ಲೆಯಲ್ಲಿ ತುಂಗ, ಭದ್ರಾ, ಶರಾವತಿ, ಕುಮುದ್ವತಿ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಸಾಗರ ತಾಲೂಕಿನ ಬೀಸನಗದ್ದೆ ಗ್ರಾಮ ಸಂಪೂರ್ಣ ಜಲಾವೃತಗೊಂಡಿದೆ. ದ್ವೀಪದಂತಾಗಿರುವ ಇಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ. ಚಿಕ್ಕಮಗಳೂರಿನಲ್ಲೂ ತುಂಗಾ, ಭದ್ರಾ, ಹೇಮಾವತಿ ನದಿಗಳು ತುಂಬಿ ಹರಿಯುತ್ತಿದ್ದು, ತಗ್ಗಿನ ಪ್ರದೇಶಗಳು ಜಲಾವೃತವಾಗಿವೆ. ಶಂಗೇರಿ ವಲಯದಲ್ಲಿ ಮಂಗಳೂರು- ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ 169 ಮರಗಳು ಬಿದ್ದಿವೆ, ಕೆಲವೆಡೆ ರಸ್ತೆ ಕುಸಿದಿದೆ.

ಪ್ರವಾಸಿಗಳ ರಕ್ಷಣೆ: ತಲಕಾವೇರಿ ಹಾಗೂ ಭಾಗಮಂಡಲ ವ್ಯಾಪ್ತಿಯಲ್ಲಿಯೂ ಪ್ರವಾಹ ಇಳಿಮುಖವಾಗುತ್ತಿದೆ. ತಮಿಳುನಾಡಿನಿಂದ ತಲಕಾವೇರಿಗೆ ಆಗಮಿಸಿದ್ದ ಯಾತ್ರಿಗಳ ವಾಹನವೊಂದು ಗುರುವಾರ ಮಧ್ಯಾಹ್ನ ಪ್ರವಾಹದ ನೀರಿನಲ್ಲಿ ಸಿಲುಕಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ರಾರ‍ಯಫ್ಟಿಂಗ್‌ ಮೂಲಕ ಯಾತ್ರಿಗಳನ್ನು ರಕ್ಷಿಸಿದರು. ಪಶ್ಚಿಮಘಟ್ಟಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಭಾಗದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಮಂಗಳೂ ಮತ್ತು ಸುಬ್ರಹ್ಮಣ್ಯ ನಡುವೆ ಸಂಪರ್ಕ ಕಲ್ಪಿಸುವ ಕಡಬ ಸಮೀಪದ ಹೊಸ್ಮಠ ಸೇತುವೆ ನೆರೆ ನೀರಿನಿಂದ ಆವೃತವಾಗಿದೆ.

ಮೈಸೂರು ಜಿಲ್ಲೆಯಲ್ಲಿ ಕಪಿಲಾ ನದಿಯ ಹರಿವಿನ ಮಟ್ಟದಲ್ಲಿ ಗುರುವಾರ ಮತ್ತೆ ಮೂರು ಅಡಿಯಷ್ಟುಏರಿಕೆಯಾಗಿದ್ದು, ಇದರಿಂದಾಗಿ ನದಿ ಅಂಚಿನ ತಗ್ಗು ಪ್ರದೇಶದ ಹಳ್ಳದ ಕೇರಿ, ಸರಸ್ವತಿ ಕಾಲೋನಿಯ ಮನೆಗಳು ಜಲಾವೃತಗೊಂಡಿವೆ. ಕಬಿನಿ ಜಲಾಶದ ಒಳ ಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗಿರುವುದರಿಂದ 45 ಸಾವಿರ ಕ್ಯುಸೆಕ್‌ ನೀರನ್ನು ನದಿಗೆ ಹರಿ ಬಿಡಲಾಗುತ್ತಿದೆ. ಇದರಿಂದ ನದಿ ಅಂಚಿನ 8 ಗ್ರಾಮಗಳ ಜಮೀನುಗಳು ಮುಳುಗಡೆಯಾಗಿವೆ.

ಬೆಳಗಾವಿ ನಗರ ಸೇರಿದಂತೆ ಖಾನಾಪುರ ತಾಲೂಕಿನಾದ್ಯಂದ ಗುರುವಾರವೂ ಭರ್ಜರಿ ಮಳೆಯಾಗಿದ್ದು ಎರಡು ಮಂದಿರಗಳು ಜಲಾವೃತವಾಗಿವೆ. 13 ಮನೆಗಳಿಗೆ ಭಾಗಶಃ ಹಾನಿಯಾಗಿವೆ. ಬೆಳಗಾವಿ-ಪಣಜಿ ರಸ್ತೆ ಸಂಚಾರ ವ್ಯತ್ಯಯವಾಗಿದೆ. ನೆರೆಯ ಮಹಾರಾಷ್ಟ್ರದ ಘಟ್ಟಪ್ರದೇಶದಲ್ಲಿ ವರುಣಾರ್ಭಟ ಹೆಚ್ಚಾಗಿರುವುದರಿಂದ ಚಿಕ್ಕೋಡಿ ತಾಲೂಕಿನಲ್ಲಿ ಕೃಷ್ಣಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಮತ್ತೆ ಎರಡು ಸೇತುವೆಗಳು ಮುಳುಗಡೆಯಾಗಿದ್ದು ಒಟ್ಟಾರೆ 6 ಸೇತುವೆಗಳು ಮುಳುಗಡೆಯಾದಂತಾಗಿವೆ.

ಹಾಸನ ಜಿಲ್ಲೆಯ ಸಕಲೇಶಪುರ, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ, ಕುಮಟಾ, ಹೊನ್ನಾವರ, ಕಾರವಾರ ತಾಲೂಕಿನಲ್ಲಿ ಚೆನ್ನಾಗಿ ಮಳೆ ಸುರಿಯುತ್ತಲೇ ಇದೆ. ಘಟ್ಟದ ಮೇಲಿನ ತಾಲೂಕಾದ ಶಿರಸಿ, ಯಲ್ಲಾಪುರ, ಸಿದ್ದಾಪುರ ತಾಲೂಕಿನಲ್ಲೂ ಬಿಟ್ಟು ಬಿಟ್ಟು ಮಳೆ ಸುರಿಯುತ್ತಿದೆ. ಧಾರವಾಡ ಜಿಲ್ಲೆಯ ಧಾರವಾಡ, ಕಲಘಟಗಿ, ನವಲಗುಂದ, ಕುಂದಗೋಳ, ಹುಬ್ಬಳ್ಳಿ, ಹಾವೇರಿ ಜಿಲ್ಲೆಯ ಶಿಗ್ಗಾಂವಿ, ಹಾನಗಲ್‌, ಹಿರೇಕೆರೂರು, ಹಾವೇರಿ, ಗದಗ ಜಿಲ್ಲೆಯ ನರಗುಂದ, ರೋಣದಲ್ಲಿ ಸಾಧಾರಣ ಮಳೆ ಸುರಿದಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ತುಮಕೂರು, ಬೀದರ್‌, ಕಲಬುರಗಿ, ಯಾದಗಿರಿ, ಬಾಗಲಕೋಟೆ, ವಿಜಯಪುರ ಜಿಲ್ಲೆಯಲ್ಲಿ ಜಿಟಿಜಿಟಿ ಮಳೆಯಾಗಿದೆ.

ಎಲ್ಲೆಲ್ಲಿ ಶಾಲೆಗೆ ರಜೆ?

ಕೊಡಗು ಜಿಲ್ಲೆಯಾದ್ಯಂತ ಅಂಗನವಾಡಿ ಸೇರಿದಂತೆ ಶಾಲಾ-ಕಾಲೇಜುಗಳಿಗೆ ರಜೆಯನ್ನು ಜು.14ರ ತನಕ ವಿಸ್ತರಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕುಗಳ ಶಾಲೆಗಳಿಗೆ, ಸಾಗರ ತಾಲೂಕಿನ ಕರೂರು, ಬಾರಂಗಿ ಹೋಬಳಿಗಳ ಶಾಲೆಗಳಿಗೆ ಮಾತ್ರ ಮಾತ್ರ ಶುಕ್ರವಾರ, ಶನಿವಾರಗಳಂದು ರಜೆ ನೀಡಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಮೂಡಿಗೆರೆ, ಶಂಗೇರಿ ತಾಲೂಕಿನ ಶಾಲಾ ಕಾಲೇಜುಗಳಿಗೆ ಶುಕ್ರವಾರದಂದು ರಜೆ ಸಾರಲಾಗಿದೆ.

ಕೆಆರ್‌ಎಸ್‌ ಭರ್ತಿಗೆ ಐದು ಅಡಿ ಬಾಕಿ

ಕೊಡಗು ಮತ್ತು ಹಾಸನ ಜಿಲ್ಲೆಗಳ ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಪ್ರಮುಖ ಜಲಾಶಯವಾದ ಕೃಷ್ಣರಾಜಸಾಗರ ಜಲಾಶಯ ಭರ್ತಿಯಾಗುವ ಹಾದಿಯಲ್ಲಿದ್ದು ಇನ್ನು ಕೇವಲ 5 ಅಡಿ ಮಾತ್ರ ಬಾಕಿ ಇದೆ. ಬುಧವಾರ 35,435 ಕ್ಯುಸೆಕ್‌ ಇದ್ದ ಒಳ ಹರಿವಿನ ಪ್ರಮಾಣ ಗುರುವಾರ ಸಂಜೆ ವೇಳೆಗೆ 41, 583 ಕ್ಯುಸೆಕ್‌ಗೆ ಏರಿಕೆಯಾಗಿದೆ. ಇದೇ ಪ್ರಮಾಣದಲ್ಲಿ ನೀರು ಜಲಾಶಯಕ್ಕೆ ಹರಿದು ಬಂದರೆ ಇನ್ನೂ ಎರಡು, ಮೂರು ದಿನಗಳಲ್ಲಿ ಜಲಾಶಯ ಭರ್ತಿಯಾಗಲಿದೆ. ಮತ್ತೊಂದು ಪ್ರಮುಖ ಜಲಾಶಯವಾದ ಹಾಸನದ ಹೇಮಾವತಿ ಜಲಾಶಯ ಭರ್ತಿಯಾಗಲು ಏಳು ಅಡಿ ಬಾಕಿ ಇದೆ.

ತುಂಬಿ ಹರಿವ ಹಳ್ಳದಲ್ಲೇ ಶವ ಹೊತ್ತೊಯ್ದು ಅಂತ್ಯಸಂಸ್ಕಾರ!

ಅಂಕೋಲಾ: ನಿರಂತರ ಮಳೆಯಿಂದಾಗಿ ಇತ್ತೀಚೆಗೆ ಉಡುಪಿ ಜಿಲ್ಲೆಯ ಕಟಪಾಡಿಯಲ್ಲಿ ಮಳೆ ನೀರಿನಲ್ಲಿ ಟೈರ್‌ ಮೇಲೆ ಶವವಿಟ್ಟು ಅಂತ್ಯಸಂಸ್ಕಾರಕ್ಕೆ ತೆಗೆದುಕೊಂಡು ಹೋಗಿದ್ದು ಹಸಿರಾಗುವಾಗಲೇ ಅದೇ ಮಾದರಿಯ ಮತ್ತೊಂದು ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕೇಣಿಯ ಗಾಂವಕರವಾಡದಲ್ಲಿ ಗುರುವಾರ ನಡೆದಿದೆ. ಗ್ರಾಮದ ಸುಶೀಲಾ ಪುತ್ತು ಗಾಂವಕರ(80) ಎಂಬ ವೃದ್ಧೆ ನಿಧನರಾಗಿದ್ದರು. ಆದರೆ, ಹಳ್ಳದ ಸೇತುವೆ ಇತ್ತೀಚೆಗೆ ಕುಸಿದ ಹಿನ್ನೆಲೆ ಶವಸಂಸ್ಕಾರಕ್ಕೆ ಮೃತದೇಹವನ್ನು ತಲೆಮಟ್ಟದ ನೀರಿನಲ್ಲಿಯೇ ಸುಮಾರು ಅರ್ಧ ಕಿ.ಮೀ. ನಷ್ಟುದೂರ ಹೊತ್ತೊಯ್ದು ಸಾಗಿಸಲಾಯಿತು. ಒಂದೆಡೆ ತುಂಬಿ ಹರಿಯುತ್ತಿರುವ ಹಳ್ಳ. ಇನ್ನೊಂದೆಡೆ ಹಳ್ಳದ ಪಕ್ಕದಲ್ಲಿಯೇ ಇರುವ ರುದ್ರಭೂಮಿಯಲ್ಲಿ ಶವಸಂಸ್ಕಾರಕ್ಕೆ ಕಟ್ಟಿಗೆಯನ್ನು ತೆಗೆದುಕೊಂಡು ಹೋಗಿ ಸಿದ್ಧತೆ ಮಾಡಿಕೊಳ್ಳಲಾಯಿತು. ಬಳಿಕ ಹರಿಯುವ ನದಿಯಲ್ಲಿಯೇ ಅರ್ಧ ಕಿ.ಮೀ.ವರೆಗೆ ಶವವನ್ನು ಹೊತ್ತು ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು.

click me!