ಸುದೀಪ್‌ಗೆ ಆಹ್ವಾನ ನೀಡಿರುವುದು ನಿಜ

Published : Apr 04, 2018, 08:12 AM ISTUpdated : Apr 14, 2018, 01:13 PM IST
ಸುದೀಪ್‌ಗೆ ಆಹ್ವಾನ ನೀಡಿರುವುದು ನಿಜ

ಸಾರಾಂಶ

ಖ್ಯಾತ ನಟ ಕಿಚ್ಚ ಸುದೀಪ್‌ ಭೇಟಿ ಬಗ್ಗೆ ಕುಮಾರಸ್ವಾಮಿ ವಿವರಣೆ ನೀಡಿದ್ದು, ಅವರನ್ನು ರಾಜಕೀಯಕ್ಕೆ ಬರುವಂತೆ ಆಹ್ವಾನ ನೀಡಿದ್ದೇನೆ. ಆದರೆ, ಜೆಡಿಎಸ್‌ ಸೇರುವುದು, ಪಕ್ಷದ ಪರ ಪ್ರಚಾರ ನಡೆಸುವುದು ಅವರಿಗೆ ಬಿಟ್ಟವಿಚಾರ ಎಂದಿದ್ದಾರೆ.

ಹಾಸನ: ಖ್ಯಾತ ನಟ ಕಿಚ್ಚ ಸುದೀಪ್‌ ಭೇಟಿ ಬಗ್ಗೆ ಕುಮಾರಸ್ವಾಮಿ ವಿವರಣೆ ನೀಡಿದ್ದು, ಅವರನ್ನು ರಾಜಕೀಯಕ್ಕೆ ಬರುವಂತೆ ಆಹ್ವಾನ ನೀಡಿದ್ದೇನೆ. ಆದರೆ, ಜೆಡಿಎಸ್‌ ಸೇರುವುದು, ಪಕ್ಷದ ಪರ ಪ್ರಚಾರ ನಡೆಸುವುದು ಅವರಿಗೆ ಬಿಟ್ಟವಿಚಾರ ಎಂದಿದ್ದಾರೆ.

ಸಿದ್ದು ಟೀಂ 25 ಸೀಟು ಗೆದ್ದರೆ ಅಚ್ಚರಿಯೇನಿಲ್ಲ

ಹಾಸನ : ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಅನ್ನು ಜನರೇ ಧೂಳೀಪಟ ಮಾಡಲಿದ್ದಾರೆ. ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿದ್ದಾಗ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ 39 ಸೀಟು ಪಡೆದಿತ್ತು. ಈಗ ಸಿದ್ದರಾಮಯ್ಯ ಅವರು 25 ಸೀಟುಗಳಿಗಷ್ಟೇ ಸೀಮಿತವಾದರೆ ಅಚ್ಚರಿ ಪಡಬೇಕಿಲ್ಲ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್‌ ಮತ್ತು ಬಿಜೆಪಿಯ ಚಾಣಕ್ಯ ತಂತ್ರವಾಗಲಿ, ಮಂತ್ರವಾಗಲಿ ಈ ಬಾರಿ ರಾಜ್ಯದಲ್ಲಿ ನಡೆಯುವುದಿಲ್ಲ. ಕರ್ನಾಟಕದಲ್ಲಿ ಅತಂತ್ರ ಸರ್ಕಾರ ಬರುವುದಿಲ್ಲ, ಸಿದ್ದರಾಮಯ್ಯ ಜೆಡಿಎಸ್‌ ಅನ್ನು ಕೆಣಕಿದಷ್ಟುನಮಗೇ ಲಾಭ ಎಂದರು.

2006ರ ಚಾಮುಂಡೇಶ್ವರಿ ಉಪ ಚುನಾವಣೆಯಲ್ಲಿ ಸೋನಿಯಾಗಾಂಧಿ ಅವರು ಪೀಟರ್‌ ಎಂಬಾತನನ್ನು ಚುನಾವಣಾಧಿಕಾರಿಯಾಗಿ ಕಳುಹಿಸಿದ್ದರು. ಅವರು ಕಾಂಗ್ರೆಸ್‌ ಏಜೆಂಟ್‌ನಂತೆ ಕೆಲಸ ಮಾಡಿದ್ದರಿಂದ ಸಿದ್ದರಾಮಯ್ಯ 252 ಮತಗಳಿಂದ ಗೆದ್ದರು. ಈಗ 5 ದಿನ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಠಿಕಾಣಿ ಹೂಡಿದರೂ ಅವರಿಗೆ ಯಾವುದೇ ಪ್ರಯೋಜನವಾಗಿಲ್ಲ. ಸಿದ್ದರಾಮಯ್ಯಗೆ ಜನ ಹೇಗೆ ಸ್ಪಂದಿಸಿದ್ದಾರೆ ಎಂಬುದು ನನಗೂ ಗೊತ್ತಿದೆ. ಅವರ ದುರಹಂಕಾರ, ಉದ್ಧಟತನದ ವರ್ತನೆ ಪರಿಣಾಮ ವೀರಪ್ಪ ಮೊಯ್ಲಿ ಅವಧಿಗಿಂತ ಕಡಿಮೆ ಸ್ಥಾನಗಳನ್ನು ಪಡೆಯಲಿದ್ದಾರೆ ಎಂದು ಕುಮಾರಸ್ವಾಮಿ ಕುಟುಕಿದರು.

ಪದೇ ಪದೆ ಸಿದ್ದರಾಮಯ್ಯ ಜೆಡಿಎಸ್‌ 25 ಸ್ಥಾನಗಳಿಗಿಂತ ಹೆಚ್ಚು ಪಡೆಯುವುದಿಲ್ಲ ಎನ್ನುತ್ತಿರುವುದು ಜನರ ಗಮನ ಬೇರೆಡೆ ಸೆಳೆಯುವ ಹುನ್ನಾರವೇ ಹೊರತು ಬೇರೇನೂ ಅಲ್ಲ. ಇನ್ನೊಂದು ಜನ್ಮ ಎತ್ತಿ ಬಂದರೂ ಸಿದ್ದರಾಮಯ್ಯಗೆ ಜನರ ಮನಸ್ಸು ಪರಿವರ್ತಿಸಲು ಸಾಧ್ಯವಿಲ್ಲ. ರಾಮನಗರದಲ್ಲಿ ನಾನು ಅರ್ಜಿ ಹಾಕಿ ಬರುತ್ತೇನಷ್ಟೆ. ಜನರೇ ಚುನಾವಣೆ ನಡೆಸಿ ಗೆಲ್ಲಿಸುತ್ತಾರೆ ಎಂದು ಇದೇ ವೇಳೆ ಕುಮಾರಸ್ವಾಮಿ ತಿಳಿಸಿದರು.

ಇವರದು ಅಪ್ಪ-ಮಕ್ಕಳ ಪಕ್ಷವಲ್ಲವೇ?: ಸಿದ್ದರಾಮಯ್ಯ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ಪುತ್ರರು ಚುನಾವಣೆಗೆ ಸ್ಪರ್ಧಿಸಿದರೆ ಅಪ್ಪ-ಮಕ್ಕಳ ಪಕ್ಷ ಆಗಲ್ಲ. ಆದರೆ, ದೇವೇಗೌಡರ ಮಕ್ಕಳು ನಿಂತರೆ ಅಪ್ಪ-ಮಕ್ಕಳ ಪಕ್ಷ ಆಗುತ್ತದೆಯಾ? ಇಬ್ಬರ ಪುತ್ರರು ವರುಣ ಕ್ಷೇತ್ರಕ್ಕೆ ಯಾವ ಕೊಡುಗೆ ನೀಡಿದ್ದಾರೆ? ಎಂದು ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡರು.

ಜ್ಯೋತಿಷ್ಯ ಕಲಿಯುತ್ತಿದ್ದಾರಾ?: ಚಾಮುಂಡೇಶ್ವರಿಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಒಂದಾದರೂ ನನ್ನನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಸಿಎಂ ಹೇಳುತ್ತಾರೆ. ಅವರೇನು ಜ್ಯೋತಿಷ್ಯ ಕಲಿಯುತ್ತಿದ್ದಾರಾ? ಕೆಂಪಯ್ಯ ಅವರನ್ನು ಇಟ್ಟುಕೊಂಡಿರುವುದೇ ಪೊಲೀಸ್‌ ವಾಹನದಲ್ಲಿ ಹಣ ಸಾಗಿಸಲು. ಮೇ 18ರಂದು ಮಾಜಿ ಪ್ರಧಾನಿ ದೇವೇಗೌಡರ ಜನ್ಮದಿನ. ಅಂದು ಜೆಡಿಎಸ್‌ ಸರ್ಕಾರ ರಚನೆ ಆಗುತ್ತದೆಂದು ನಾನು ಹೇಳಿರುವುದು ಉತ್ಪ್ರೇಕ್ಷೆಯಲ್ಲ. ಹಿಂದೆ ನನ್ನ ಒಂದು ರಾಜಕೀಯ ನಿರ್ಧಾರದಿಂದ ದೇವೇಗೌಡರಿಗೆ ನೋವು ಕೊಟ್ಟಿದ್ದೇನೆ. ಜೆಡಿಎಸ್‌ ಸರ್ಕಾರ ರಚಿಸಿ ಅವರನ್ನು ಸಂತೋಷಪಡಿಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.

ಜಮೀರ್‌ ರಾಜಕೀಯ ವಿದೂಷಕ

ಜೆಡಿಎಸ್‌ನಿಂದ ಬಂಡಾಯವೆದ್ದು ಈಗ ಕಾಂಗ್ರೆಸ್‌ ಸೇರ್ಪಡೆಯಾಗಿರುವ ಮಾಜಿ ಶಾಸಕ ಜಮೀರ್‌ ವಿರುದ್ಧ ಹರಿಹಾಯ್ದ ಕುಮಾರಸ್ವಾಮಿ, ಜಮೀರ್‌ ಮಾತುಗಳನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ. ಅವರೊಬ್ಬ ರಾಜಕೀಯ ವಿದೂಷಕ ಎಂದು ವ್ಯಂಗ್ಯವಾಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ
ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?