ಕಾಂಗ್ರೆಸ್ ಸರ್ಕಾರದ ವಿರುದ್ಧ ಎಚ್’ಡಿಕೆ ಹೊಸ ಬಾಂಬ್ ..!

Published : Jan 14, 2018, 02:53 PM ISTUpdated : Apr 11, 2018, 12:55 PM IST
ಕಾಂಗ್ರೆಸ್ ಸರ್ಕಾರದ ವಿರುದ್ಧ ಎಚ್’ಡಿಕೆ ಹೊಸ ಬಾಂಬ್ ..!

ಸಾರಾಂಶ

ರಾಜ್ಯ ವಿಧಾನಸಭಾ ಚುನಾವಣೆ ಹೊಸ್ತಿನಲ್ಲಿರುವ ವೇಳೆ ಆಡಳಿತರೂಢ ಕಾಂಗ್ರೆಸ್ ಸರ್ಕಾರವನ್ನು ಇಕ್ಕಟಿಗೆ ಸಿಲುಕಿಸುವಂತಹ ಗಂಭೀರ ಆರೋಪ ಮಾಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಸರ್ಕಾರಿ ಸ್ವಾಮ್ಯದ ಮೈಸೂರು ಮಿನರಲ್ಸ್ ಲಿಮಿಟೆಡ್ (ಎಂಎಂಎಲ್) ಮೂಲಕ ನಡೆದಿದೆ ಎನ್ನಲಾದ ಐದು ಸಾವಿರ ಕೋಟಿ ರು.ನಷ್ಟು ಗಣಿಗಾರಿಕೆ ಹಗರಣ ಕುರಿತು ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.

ಬೆಂಗಳೂರು (ಜ.14): ರಾಜ್ಯ ವಿಧಾನಸಭಾ ಚುನಾವಣೆ ಹೊಸ್ತಿನಲ್ಲಿರುವ ವೇಳೆ ಆಡಳಿತರೂಢ ಕಾಂಗ್ರೆಸ್ ಸರ್ಕಾರವನ್ನು ಇಕ್ಕಟಿಗೆ ಸಿಲುಕಿಸುವಂತಹ ಗಂಭೀರ ಆರೋಪ ಮಾಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಸರ್ಕಾರಿ ಸ್ವಾಮ್ಯದ ಮೈಸೂರು ಮಿನರಲ್ಸ್ ಲಿಮಿಟೆಡ್ (ಎಂಎಂಎಲ್) ಮೂಲಕ ನಡೆದಿದೆ ಎನ್ನಲಾದ ಐದು ಸಾವಿರ ಕೋಟಿ ರು.ನಷ್ಟು ಗಣಿಗಾರಿಕೆ ಹಗರಣ ಕುರಿತು ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.

2014-15ರಿಂದ 2016-17ರ ಅವಧಿಯಲ್ಲಿ 5 ಸಾವಿರ ಕೋಟಿ ರು. ಮೌಲ್ಯದಷ್ಟು ಅಕ್ರಮ ಗಣಿಗಾರಿಕೆ ನಡೆದಿದೆ. ಲಕ್ಷಾಂತರ ಮೆಟ್ರಿಕ್ ಟನ್‌ನಷ್ಟು ಅದಿರನ್ನು ಅಕ್ರಮವಾಗಿ ತೆಗೆದು ಸಾಗಾಣಿಕೆ ಮಾಡಲಾಗಿದೆ. ಈ ಸಂಬಂಧ ದಾಖಲೆಗಳನ್ನು ಬಹಿರಂಗಪಡಿಸಲಾಗಿದೆ. ಒಂದು ವೇಳೆ ನನ್ನ ಆರೋಪ ಸುಳ್ಳಾದರೆ ಬಹಿರಂಗ ಚರ್ಚೆಗೆ ಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕುಮಾರಸ್ವಾಮಿ ಸವಾಲನ್ನೂ ಹಾಕಿದ್ದಾರೆ.

ಶನಿವಾರ ಬೆಳಗ್ಗೆ ನಗರದಲ್ಲಿನ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಎಂಎಂಎಲ್ ಮೂಲಕ ಗಣಿಗಾರಿಕೆ ಗುತ್ತಿಗೆ ಪಡೆದಿರುವ ಕಂಪನಿಗಳು ಒಪ್ಪಂದದ ಪ್ರಕಾರ ವರ್ಷಕ್ಕೆ 30 ಲಕ್ಷ ಟನ್ ಅದಿರು ತೆಗೆಯಲು ಅನುಮತಿ ಪಡೆದಿವೆ. ಆದರೆ, 2014 -15ರಿಂದ 2016-17ನೇ ಸಾಲಿನವರೆಗೆ ಹೆಚ್ಚುವರಿಯಾಗಿ 60,52,440 ಟನ್ ಅದಿರು ತೆಗೆದು ಸಾಗಣೆ ಮಾಡಲಾಗಿದೆ. ಎಂಎಂಎಲ್ ಅಧಿಕಾರಿಗಳ ತಂಡವೇ ಆಂತರಿಕವಾಗಿ ನಡೆಸಿರುವ ತನಿಖೆಯಿಂದ ಈ ಅಂಶ ಬಯಲಾಗಿದೆ. ತನಿಖಾ ವರದಿ ಪ್ರತಿ ಲಭ್ಯವಾಗಿದ್ದು, ಇದರಲ್ಲಿನ 14 ಪುಟಗಳನ್ನು ಮಾತ್ರ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

2014ರ ನ.27ರಂದು ರೈಸನ್ ಕಾಂಟ್ರಾಕ್ಟ್ ಮೂಲಕ ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ. 2017ರ ಮಾ.31ರವರೆಗೆ ಅನ್ವಯವಾಗುವಂತೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ಗಣಿಗಾರಿಕೆ ನಡೆಸಲು ಮೂರು ಕಂಪನಿಗಳಿಗೆ ಗುತ್ತಿಗೆ ನೀಡಿದೆ. ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕು ಬಳಿ ಸುಬ್ರಾಯನಹಳ್ಳಿ, ತಿಮ್ಮಪ್ಪನಗುಡಿ ಬಳಿ ಎಂ.ಎಂ.ಹಿಲ್ಸ್‌ಗೆ ಗಣಿ ಗುತ್ತಿಗೆ ನೀಡಲಾಗಿದೆ. ಆದರೆ, ಈ ಅವಧಿಯಲ್ಲಿ ಅಕ್ರಮವಾಗಿ ಅದಿರು ಉತ್ಪಾದನೆ ಮಾಡ ಲಾಗಿದೆ. ಒಪ್ಪಂದ ಅಂತಿಮಕ್ಕೂ ಮುನ್ನವೇ ಗಣಿಗಾರಿಕೆ ಆರಂಭಿಸಲಾಗಿದೆ. ಗುತ್ತಿಗೆಯಲ್ಲಿ ಅವ್ಯವಹಾರ ನಡೆದಿದೆ ಎನ್ನುವುದಕ್ಕಿಂತ ಅದಿರು ಉತ್ಪಾದನೆ ಹಾಗೂ ಸಾಗಾಣಿಕೆ ಯಲ್ಲಿ ಅವ್ಯವಹಾರ ನಡೆಸಲಾಗಿದೆ ಎಂದು ದೂರಿದರು.

ಮುಚ್ಚಂಡಿ ಸೇರಿದಂತೆ ಮೂರು ಕಂಪನಿಗಳು ಅಕ್ರಮ ಎಸಗಿವೆ. ಉತ್ಪಾದನೆ ಆಗಿರುವುದು ಒಂದಾದರೆ ದಾಖಲೆಯಲ್ಲಿ ನಮೂದಿಸಿರುವುದೇ ಮತ್ತೊಂದಾಗಿದೆ. ಸುಬ್ಬರಾಯನಹಳ್ಳಿ ಬಳಿ 30 ಲಕ್ಷ ಮೆಟ್ರಿಕ್ ಟನ್ ಉತ್ಖನನ ಮಾಡಲು ಅವಕಾಶ ನೀಡಲಾಗಿದೆ. 2015ರ ಜುಲೈ ತಿಂಗಳಲ್ಲಿ 1,05,820 ಮೆಟ್ರಿಕ್ ಟನ್ ಅದಿರು ತೆಗೆಯಲಾಗಿದೆ. ಆದರೆ, 52,920 ಮೆಟ್ರಿಕ್ ಟನ್ ಲೆಕ್ಕ ತೋರಿಸಲಾಗಿದೆ.

ಉಳಿದ ಕಬ್ಬಿಣದ ಅದಿರು ಎಲ್ಲಿ ಹೋಗಿದೆ ಎಂಬುದರ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದರು. ಸಿಎಂ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ತುಷಾರ್ ಗಿರಿನಾಥ್ ಅವಧಿಯಲ್ಲಿ ಅಕ್ರಮ ನಡೆದಿದೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ನೆಪಮಾತ್ರಕ್ಕೆ ವಿನಯ್ ಕುಲಕರ್ಣಿ ಸಚಿವರಾಗಿದ್ದಾರೆ. ಮುಖ್ಯಮಂತ್ರಿ ಕಾರ್ಯದರ್ಶಿಯಾಗಿರುವ ತುಷಾರ್ ಗಿರಿನಾಥ್ ಅವರೇ ನಿರ್ವಹಣೆ ಮಾಡುತ್ತಿದ್ದಾರೆ. ಈ ಅಕ್ರಮದಲ್ಲಿ ಅವರ ಪಾತ್ರವೂ ಇದೆ ಎಂದು ಆಪಾದಿಸಿದ ಅವರು, ಬಿಜೆಪಿ ಅವಧಿಯಲ್ಲಿ ನಡೆದ ಅಕ್ರಮ ಗಣಿಗಾರಿಕೆಗೂ ಇದಕ್ಕೂ ಯಾವುದೇ ವ್ಯತ್ಯಾಸ ಇಲ್ಲ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತೀರ್ಥಹಳ್ಳಿಯ ವಿದ್ಯಾರ್ಥಿನಿಗೆ ಹೃದಯಾಘಾತ, ಶೃಂಗೇರಿ ಕಾಲೇಜು ಹಾಸ್ಟೆಲ್‌ನಲ್ಲಿ ಕುಸಿದು ಬಿದ್ದು ಸಾವು
ಪಿಯುಸಿ ಸರ್ಟಿಫಿಕೇಟ್ ಇದ್ದರೆ ಮಾತ್ರ ವಾಹನಕ್ಕೆ ಪೆಟ್ರೋಲ್ -ಡೀಸೆಲ್, ಡಿ.18ರಿಂದ ಹೊಸ ನಿಯಮ