
ಹಾಸನ: ‘‘ಬಿಜೆಪಿ ವಿರುದ್ಧ ಮಾತ್ರ ದಂಗೆ ಏಳಿ ಎಂದು ಹೇಳಿಲ್ಲ, ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದಿದ್ದರೆ, ನಿಮ್ಮ ಭಾವನೆಗಳು-ಗೌರವಕ್ಕೆ ಧಕ್ಕೆ ಆಗುವಂತೆ ನಡೆದುಕೊಂಡಿದ್ದರೆ ನನ್ನ ವಿರುದ್ಧವೂ ದಂಗೆ ಏಳಿ ಎಂದಿದ್ದೆ’’ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಈ ಮೂಲಕ ತಮ್ಮ ‘ದಂಗೆ’ ಹೇಳಿಕೆ ಸೃಷ್ಟಿಸಿರುವ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನವನ್ನು ಕುಮಾರಸ್ವಾಮಿ ಮತ್ತೊಮ್ಮೆ ಮಾಡಿದ್ದಾರೆ.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೇರವೇರಿಸಿದ ನಂತರ ನಡೆದ ಸಭೆಯಲ್ಲಿ ಮಾತನಾಡಿ, ನಾನೇನು ರಾಜ್ಯದ ಜನರಿಗೆ ಬೆಂಕಿ ಹಚ್ಚಿ ಎಂದು ಹೇಳಿಲ್ಲ. ‘ದಂಗೆ’ ಪದ ಬಳಸಿದ ಸಂದರ್ಭ ಮತ್ತು ಆಡಿದ ರೀತಿಯನ್ನು ಗಮನಿಸದೆ ಇಲ್ಲದ ಟೀಕೆ, ಟಿಪ್ಪಣಿಗಳನ್ನು ಮಾಡುತ್ತಾ ಬಿಜೆಪಿಯವರು ಎಲ್ಲರಿಗೂ ದೂರು ನೀಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಕಿಡಿಕಾರಿದರು.
ಸರ್ಕಾರ ಪತನವಾಗುತ್ತದೆ ಎಂದು ಹೇಳಿದ ಮಾತ್ರಕ್ಕೆ ಸರ್ಕಾರ ಉರುಳಲ್ಲ. ಬಿಜೆಪಿ ನಾಯಕರಿಂದ ಅಷ್ಟು ಸುಲಭವಾಗಿ ನಮ್ಮಿಂದ ಅಧಿಕಾರ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಸರ್ಕಾರದ ಅಳಿವು, ಉಳಿವಿನ ಬಗ್ಗೆ ಸುಖಾಸುಮ್ಮನೆ ಅಪಪ್ರಚಾರ ಮಾಡಲಾಗುತ್ತಿದೆ. ಸರ್ಕಾರ ಸುಭದ್ರವಾಗಿದೆ, ಸರ್ಕಾರಕ್ಕೆ ಯಾವುದೇ ಆತಂಕ ಇಲ್ಲ, ನನ್ನನ್ನು ನೋಡಿದರೆ ನಿಮಗೆ ಆಂತಕದಲ್ಲಿದ್ದೇನೆ ಎಂದು ಅನಿಸುತ್ತಿದೆಯೇ ಎಂದು ಇದೇ ವೇಳೆ ನೆರೆದಿದ್ದ ಜನರನ್ನುಕುಮಾರಸ್ವಾಮಿ ಪ್ರಶ್ನಿಸಿದರು.
ದೇವರು ಕೊಟ್ಟ ಅಧಿಕಾರ: ಮುಖ್ಯಮಂತ್ರಿ ಹುದ್ದೆ ನನಗೆ ದೇವರು ಕೊಟ್ಟ ಅಧಿಕಾರ. ನಾನು ಎಷ್ಟುದಿನ ಅಧಿಕಾರ ದಲ್ಲಿರುತ್ತೇನೆ ಎಂಬುದನ್ನು ಈಗಾಗಲೇ ದೇವರು ತೀರ್ಮಾ ನಿಸಿ ಆಗಿದೆ. ಉತ್ತರ ಕರ್ನಾಟಕದ ಜನ ಸೇರಿ ರಾಜ್ಯದ ಆರೂವರೆ ಕೋಟಿ ಜನ ನನ್ನ ಬಗ್ಗೆ ಯೋಚಿಸುತ್ತಿದ್ದಾರೆ. ಅಯ್ಯೋ ಇವರಿಗೆ ಮತ ನೀಡಲಿಲ್ಲವಲ್ವಾ ಎಂದು ಕೊರಗುತ್ತಿದ್ದಾರೆ ಎಂದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ತೀವ್ರ ಹರಿಹಾಯ್ದ ಕುಮಾರಸ್ವಾಮಿ, ಒಂದು ವೇಳೆ ಅವರಿಂದ ಉಪದೇಶ ಹೇಳಿಸಿಕೊಳ್ಳುವ ಸ್ಥಿತಿ ಬಂದರೆ ರಾಜಕೀಯವನ್ನೇ ತೊರೆಯುತ್ತೇನೆ ಎಂದು ಶಪಥ ಮಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.