ಈ ಹುದ್ದೆ ತಮಗೆ ಬೇಡ ಎನ್ನುತ್ತಿದ್ದಾರೆ ಹಿರಿಯ ಜೆಡಿಎಸ್‌ ಶಾಸಕರು

First Published Jun 6, 2018, 8:34 AM IST
Highlights

ಜೆಡಿಎಸ್ ನಾಯಕರಾದ ಈ ಇಬ್ಬರನ್ನು ಸಂಪುಟದಿಂದ ದೂರ ಇಡುವ ಪ್ರಯತ್ನ ಮಾಡಲಾಗಿದ್ದು, ಈ ನಿರ್ಧಾರಕ್ಕೆ ಈ ನಾಯಕರು ಅಸಮಾಧಾನಗೊಂಡಿದ್ದಾರೆ.  ತಮಗೆ ನೀಡಲು ತೀರ್ಮಾನಿಸಿದ್ದ ಆ ಹುದ್ದೆ ತಮಗೆ ಬೇಡ ಎಂದು ಇಬ್ಬರು ನಾಯಕರು ಹೇಳಿದ್ದಾರೆ.

ಬೆಂಗಳೂರು/ ಹಾಸನ :  ವಿಧಾನಸಭೆಯ ಉಪಸಭಾಧ್ಯಕ್ಷ ಸ್ಥಾನ ನೀಡುವ ಮೂಲಕ ಸಚಿವ ಸಂಪುಟದಿಂದ ದೂರ ಇಡುವವರ ಪಟ್ಟಿಯಲ್ಲಿದ್ದ ಜೆಡಿಎಸ್‌ನ ಹಿರಿಯ ಶಾಸಕರಾದ ಎಚ್‌.ವಿಶ್ವನಾಥ್‌ ಮತ್ತು ಎ.ಟಿ.ರಾಮಸ್ವಾಮಿ ಅವರಿಬ್ಬರೂ ಆ ಹುದ್ದೆ ಬೇಡ ಎಂದು ಹೇಳಿದ್ದಾರೆ.

ನಾನು ಹಿಂದೆ ಸಂಪುಟ ದರ್ಜೆ ಸಚಿವನಾಗಿ ಕೆಲಸ ಮಾಡಿದ್ದೇನೆ. ನನ್ನ ಬದಲಿಗೆ ಯುವಕರಿಗೆ ಉಪಸಭಾಧ್ಯಕ್ಷ ಸ್ಥಾನವನ್ನು ನೀಡಿ ತಯಾರು ಮಾಡಬೇಕು ಎಂದು ವಿಶ್ವನಾಥ್‌ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಇನ್ನು, ತಮಗೆ ಉಪಸಭಾಧ್ಯಕ್ಷ ಹುದ್ದೆ ನೀಡಿದರೆ ಒಪ್ಪುವುದಿಲ್ಲ ಎಂದು ಎ.ಟಿ.ರಾಮಸ್ವಾಮಿ ತಿಳಿಸಿದ್ದಾರೆ.

ಮಂಗಳವಾರ ಪಕ್ಷದ ವರಿಷ್ಠ ನಾಯಕ ಎಚ್‌.ಡಿ.ದೇವೇಗೌಡರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್‌, ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಬೇಕು ಎಂದು ವರಿ ಷ್ಠರ ಬಳಿಕ ಮನವಿ ಮಾಡಿಲ್ಲ. ದೇವೇಗೌಡರು ನಮಗೆ ರಾಜಕೀಯ ಪುರ್ನಜನ್ಮ ನೀಡಿದ್ದಾರೆ. ಪಕ್ಷದವರೆಲ್ಲಾ ಸೇರಿ ಒಕ್ಕೊರಲಿನಿಂದ ನಿರ್ಧರಿಸಿ ಸಚಿವ ಸ್ಥಾನ ನೀಡಿದರೆ ಉತ್ತಮವಾಗಿ ಕೆಲಸ ಮಾಡುತ್ತೇನೆ. ಸಚಿವ ಸ್ಥಾನ ನೀಡದಿದ್ದರೂ ಬೇಸರ ಮಾಡಿಕೊಳ್ಳದೆ ಸರ್ಕಾರದ ಜತೆ ಎಡಬಲದಲ್ಲಿ ನಿಂತು ಕೆಲಸ ಮಾಡುತ್ತೇನೆ. ಸಚಿವನಾಗಿಯೇ ಕೆಲಸ ಮಾಡಬೇಕೆಂದೇನೂ ಇಲ್ಲ ಎಂದು ತಿಳಿಸಿದರು.

ವಿಧಾನಸಭೆ ಉಪಾಧ್ಯಕ್ಷ ಸ್ಥಾನಕ್ಕೆ ತಮ್ಮ ಹೆಸರು ಪ್ರಸ್ತಾಪವಾಗುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಸಂಪುಟ ದರ್ಜೆ ಸಚಿವನಾಗಿ ಕೆಲಸ ಮಾಡಿದ್ದೇನೆ. ನನ್ನ ಬದಲಿಗೆ ಯುವಕರಿಗೆ ಅವಕಾಶ ನೀಡಿಬೇಕು. ಅವರಿಗೆ ಉಪ ಸಭಾಧ್ಯಕ್ಷ ಸ್ಥಾನವನ್ನು ನೀಡಿ ತಯಾರು ಮಾಡಬೇಕು ಎಂದು ಹೇಳುವ ಮೂಲಕ ಪರೋಕ್ಷವಾಗಿ ಉಪಸಭಾಧ್ಯಕ್ಷ ಹುದ್ದೆಯನ್ನು ತಿರಸ್ಕರಿಸಿರುವ ಸಂದೇಶ ರವಾನಿಸಿದರು.

ಇದೇ ವೇಳೆ ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಸ್ವಾಮಿ, ಉಪಸಭಾಧ್ಯಕ್ಷನಾದರೆ ಕೆಲವು ವಿಷಯಗಳ ಬಗ್ಗೆ ಮೌನ ವಹಿಸಬೇಕಾಗುತ್ತದೆ. ಪ್ರಮುಖ ವಿಷಯಗಳ ಬಗ್ಗೆ ಸದನದಲ್ಲಿ ದನಿ ಎತ್ತಲು ಆಗುವುದಿಲ್ಲ. ಹೀಗಾಗಿ ಉಪಸಭಾಧ್ಯಕ್ಷ ಹುದ್ದೆ ಒಪ್ಪಿಕೊಳ್ಳುವುದಿಲ್ಲ ಎಂದರು.

ಸಚಿವ ಸ್ಥಾನಕ್ಕಾಗಿ ನಾನು ಲಾಬಿ ನಡೆಸಿಲ್ಲ, ಮುಂದೆಯೂ ಲಾಬಿ ಮಾಡುವುದಿಲ್ಲ. ಸಚಿವ ಸ್ಥಾನದ ಸಂಖ್ಯೆ ಕಡಿಮೆ ಇದೆ. ಪಕ್ಷದ ವರಿಷ್ಠರಿಗೆ ಸರಾಗವಾಗಿ ಸರ್ಕಾರದ ಕೆಲಸ ಮಾಡಲು ಬಿಡಬೇಕು. ಹಿರಿತನದ ಆಧಾರ, ಕ್ಷೇತ್ರವಾರು ಸಚಿವ ಸ್ಥಾನ ಹಂಚಿಕೆ ಆಗಬೇಕಾಗಿದೆ. ಸಚಿವ ಸ್ಥಾನ ಕೊಟ್ಟರೆ ನಿಭಾಯಿಸುವ ಸಾಮರ್ಥ್ಯ ಇದೆ, ಆದರೆ ಲಾಬಿ ನಡೆಸಲ್ಲ. ಕ್ಷೇತ್ರದ ಜನರೇ ಪ್ರಭುಗಳು. ಅವರ ಆಸ್ಥಾನದಲ್ಲಿ ಮಂತ್ರಿಯಾಗಿ ಕರ್ತವ್ಯ ನಿರ್ವಹಿಸುತ್ತೇನೆ ಎಂದು ನೇರವಾಗಿ ಹೇಳಿದರು.

click me!