
ವಡೋದರಾ (ಡಿ. 03): ನರಭಕ್ಷಕ ಹುಲಿ, ಸಿಂಹ, ಚಿರತೆಗಳು ಇದ್ದರೆ ಅವುಗಳನ್ನು ಹಿಡಿಯಲು ಬೋನಿನಲ್ಲಿ ಮೇಕೆಗಳು ಅಥವಾ ಇತರ ಪ್ರಾಣಿಗಳನ್ನು ಇಡುವುದು ಮಾಮೂಲಿ. ಆದರೆ ಗುಜರಾತ್‌ನ ದಾಹೋದ್ ಜಿಲ್ಲೆಯ ಧನಪುರ ತಾಲೂಕಿನಲ್ಲಿ ಮೂವರನ್ನು ಕೊಂದು ಐವರನ್ನು ಗಾಯಗೊಳಿಸಿರುವ ನರಹಂತಕ ಚಿರತೆಯನ್ನು ಸೆರೆಯಿಡಿಯಲು ಮೂವರು ಅರಣ್ಯ ಸಿಬ್ಬಂದಿಯೇ ಬೋನು ಸೇರಿದ್ದಾರೆ!
ಇಂತಹ ವಿನೂತನ ಐಡಿಯಾವನ್ನು ಮಾಡಿರುವುದು ಗುಜರಾತ್‌ನ ಅರಣ್ಯ ಇಲಾಖೆ. ಕಳೆದ ಅನೇಕ ದಿವಸಗಳಿಂದ ಈ ಭಾಗದಲ್ಲಿ ಭೀತಿ ಹುಟ್ಟಿಸಿರುವ ಈ ಚಿರತೆ ಅರಣ್ಯ ಸಿಬ್ಬಂದಿಗೆ ಚಳ್ಳೆಹಣ್ಣು ತಿನ್ನಿಸಿ ಓಡಾಡುತ್ತಿದೆ. ಪಕ್ಕದಲ್ಲೇ ಮಧ್ಯಪ್ರದೇಶವೂ ಇದ್ದು, ಗಡಿ ದಾಟಿ ಆ ರಾಜ್ಯಕ್ಕೂ ಚಿರತೆ ಓಡಿ ಹೋಗಿರಬಹುದು ಎನ್ನಲಾಗುತ್ತಿದೆ.
ಆದರೆ ಚಿರತೆಯನ್ನು ಹಿಡಿಯುವ ಪ್ರಯತ್ನ ಬಿಡದ ಅರಣ್ಯ ಇಲಾಖೆ ಕಳೆದ ಶುಕ್ರವಾರ 11 ಬೋನುಗಳನ್ನು ಇರಿಸಿತ್ತು. 8 ಬೋನುಗಳಲ್ಲಿ ಪ್ರಾಣಿಗಳಿದ್ದರೆ ಇನ್ನು 3 ಬೋನುಗಳಲ್ಲಿ ಅರಣ್ಯ ಸಿಬ್ಬಂದಿಗಳಿದ್ದರು. ವಿಜಯ್ ಬಮಾನಿಯಾ ಎಂಬ ಓರ್ವ ಫಾರೆಸ್ಟ್ ಗಾರ್ಡ್, ಓರ್ವ ಟ್ರಾಂಕ್ವಿಲೈಸರ್ ಶೂಟರ್ ಹಾಗೂ ಪಶುವೈದ್ಯರೊಬ್ಬರು ತಲಾ ಒಂದೊಂದು ಬೋನಿನಲ್ಲಿ ಅವಿತಿದ್ದರು.
ಬರೀ ಪ್ರಾಣಿಗಳನ್ನು ಇಟ್ಟು ಚಿರತೆ ಹಿಡಿಯಲು ಹೊರಟಾಗ ಅದು ಬಂದಿದ್ದು ನಿಖರವಾಗಿ ಗೊತ್ತಾಗುತ್ತಿಲ್ಲ. ಹೀಗಾಗಿ ಪ್ರಾಣಿಗಳ ಬೋನಿನ ಪಕ್ಕದ ಬೋನುಗಳಲ್ಲಿ ನಮ್ಮ ಸಿಬ್ಬಂದಿಯಿದ್ದರೆ ಅದರ ಬರುವಿಕೆ ನಿಖರವಾಗಿ ಗೊತ್ತಾಗುತ್ತದೆ. ಇತರ ಅರಣ್ಯ ಸಿಬ್ಬಂದಿಯನ್ನು ಕೂಡಲೇ ಅವರು ಎಚ್ಚರಿಸುತ್ತಾರೆ. ಹೀಗಾಗಿ ಈ ವಿನೂತನ ಉಪಾಯ ಮಾಡಿದ್ದೇವೆ ಎಂದು ವಡೋದರಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣ ಅಧಿಕಾರಿ ಎಸ್.ಕೆ. ಶ್ರೀವಾಸ್ತವ ಹೇಳಿದರು.
ಶನಿವಾರ ರಾತ್ರಿ ಕೂಡ ಈ ಅರಣ್ಯ ಸಿಬ್ಬಂದಿ ಬೋನಿನಲ್ಲೇ ಕಳೆದರು. ಚಿರತೆ ಪತ್ತೆಯಾಗುವರೆಗೂ ಇದೇ ತಂತ್ರಗಾರಿಕೆಯನ್ನು ಇಲಾಖೆ ಮುಂದುವರಿಸುವ ಸಾಧ್ಯತೆ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.