
ಬೆಂಗಳೂರು : ಬಜೆಟ್‌ನಲ್ಲಿ ಘೋಷಣೆಯಾದ ಸಾಲ ಮನ್ನಾವೂ ರೈತರಿಗೆ ದಕ್ಕದೆ ಉಳ್ಳವರ ಪಾಲಾಗುತ್ತಿದೆ ಎಂಬ ರೈತ ಸಂಘಟನೆಗಳು ಹಾಗೂ ವಿರೋಧ ಪಕ್ಷಗಳ ಟೀಕೆಗಳಿಗೆ ಮಣಿದಂತೆ ಕಂಡು ಬರುತ್ತಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಚಾಲ್ತಿಯಲ್ಲಿರುವ ಬೆಳೆ ಸಾಲವನ್ನೂ ಮನ್ನಾಗೊಳಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಬಜೆಟ್‌ನಲ್ಲಿ ಸುಸ್ತಿದಾರರ ಬೆಳೆ ಸಾಲ ಮಾತ್ರ ಮನ್ನಾ ಮಾಡುವುದಾಗಿ ಘೋಷಿಸಲಾಗಿತ್ತು. ಆದರೆ ರಾಷ್ಟ್ರೀಕೃತ ಹಾಗೂ ಸಹಕಾರ ಬ್ಯಾಂಕ್‌ಗಳಲ್ಲಿ ಸುಸ್ತಿದಾರ ರೈತರ ಸಂಖ್ಯೆ ಕಡಿಮೆ ಇದ್ದು, ಬ್ಯಾಂಕ್‌ಗಳಲ್ಲಿ ಬಹುಪಾಲು ರೈತರು ಚಾಲ್ತಿ ಸಾಲಗಾರರಾಗಿದ್ದಾರೆ. ಹಾಗಾಗಿ ಸಾಲ ಮನ್ನಾ ಯೋಜನೆಯು ರೈತರಿಗೆ ಅನುಕೂಲವಾಗುವುದಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು. ಇದೇ ವಿಚಾರ ಮುಂದಿಟ್ಟು ವಿಧಾನಸಭೆಯ ಪ್ರತಿಪಕ್ಷದ ನಾಯಕ ಬಿ.ಎಸ್ .ಯಡಿಯೂರಪ್ಪ, ರೈತ ಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹಾಗೂ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ, ಕಾಂಗ್ರೆಸ್‌ನ ಮಾಜಿ ಶಾಸಕ ಕೆ. ಎನ್.ರಾಜಣ್ಣ ಸೇರಿದಂತೆ ಅನೇಕರು ಬಜೆಟ್‌ನಲ್ಲಿ ಪ್ರಕಟಿಸಿರುವ ಸಾಲ ಮನ್ನಾ ಯೋಜನೆ ರೈತ ಸಮುದಾಯಕ್ಕೆ ಪ್ರಯೋಜನವಿಲ್ಲ ಎಂದು ಕಟುವಾಗಿ ಟೀಕಿಸಿದ್ದರು.
ಸಹಕಾರಿ ಕ್ಷೇತ್ರದ ಹಿರಿಯ ಧುರೀಣ ರಾಜಣ್ಣ ಅವರು, ಸಹಕಾರಿ ಬ್ಯಾಂಕ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಡ ರೈತರು ಸಾಲಗಾರರಾಗಿದ್ದಾರೆ. ಆದರೆ ರಾಷ್ಟ್ರೀಯ ಬ್ಯಾಂಕ್‌ಗಳಲ್ಲಿ ಸಿರಿವಂತ ರೈತರು ಸಾಲ ಪಡೆದಿದ್ದಾರೆ. ಈಗ ಸಾಲ ಮನ್ನಾ ಯೋಜನೆ ಫಲಾನುಭವಿಗಳು ರಾಷ್ಟ್ರೀಯ ಬ್ಯಾಂಕ್‌ನ ಸುಸ್ತಿದಾರರಾಗಿರುವ ಶ್ರೀಮಂತರು ಎಂದಿದ್ದರು. ಈ ಟೀಕೆಗಳ ಹಿನ್ನೆಲೆ ಯಲ್ಲಿ ಎಚ್ಚೆತ್ತಿರುವ ಸಿಎಂ ಕುಮಾರಸ್ವಾಮಿ ಅವರು, ಸುಸ್ತಿ ಮತ್ತು ಚಾಲ್ತಿಯಲ್ಲಿರುವ ಬೆಳೆ ಸಾಲದ ಕುರಿತು ಆರ್ಥಿಕ ಇಲಾಖೆ, ಬ್ಯಾಂಕ್ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ.
ಈಗ ಆರ್ಥಿಕ ಚಿಂತಕರ ಜತೆ ಸಮಾಲೋಚಿಸಿರುವ ಮುಖ್ಯಮಂತ್ರಿಗಳು, ಚಾಲ್ತಿ ಸಾಲವನ್ನೂ ಕೂಡಾ ಮನ್ನಾ ಮಾಡುವ ಮೂಲಕ ರೈತರ ಮನ ಗೆಲ್ಲಲು ಚಿಂತಿಸಿದ್ದಾರೆ ಎನ್ನಲಾಗಿದೆ. ಸಾಲ ಮನ್ನಾ ಯೋಜನೆಗೆ ಬಜೆಟ್‌ನಲ್ಲಿ ಕುಮಾರಸ್ವಾಮಿ ಅವರು34 ಸಾವಿರ ಕೋಟಿ ರು. ಮೀಸಲಿಟ್ಟಿದ್ದಾರೆ. ಆದರೆ ಸಾಲ ಮನ್ನಾಕ್ಕೆ ವಿಧಿಸಿರುವ ಷರತ್ತುಗಳ ಅನ್ವಯ ರೈತರ ಸಾಲವು 16 ಸಾವಿರ ಕೋಟಿ ರು. ಕೂಡ ದಾಟುವುದಿಲ್ಲ. ಹೀಗಾಗಿ ಸುಸ್ತಿ ಜೊತೆಗೆ ಚಾಲ್ತಿ ಸಾಲವನ್ನು ಸೇರಿಸಿದಲ್ಲಿ ಆರ್ಥಿಕ ಹೊರೆ ಬೀಳುವುದಿಲ್ಲ ಎಂಬ ಅಭಿಪ್ರಾಯಕ್ಕೆ ಮುಖ್ಯಮಂತ್ರಿಗಳು ಬಂದಿದ್ದಾರೆ. ಬಜೆಟ್ ಮೇಲಿನ ಚರ್ಚೆ ವೇಳೆ ಈ ಬಗ್ಗೆ ಪ್ರಕಟಿಸುವ ನಿರೀಕ್ಷೆಯಿದೆ ಎಂದು ತಿಳಿದು ಬಂದಿದೆ.
ರಾಜ್ಯದ ರೈತರು ರಾಷ್ಟ್ರೀಯ ಬ್ಯಾಂಕ್‌ಗಳಲ್ಲಿ15 ಸಾವಿರ ಕೋಟಿ ರು., ಸಹಕಾರಿ ಬ್ಯಾಂಕ್‌ಗಳಲ್ಲಿ561 ಕೋಟಿ ರು. ಸುಸ್ತಿ ಸಾಲ ಹೊಂದಿದ್ದಾರೆ. ಡಿ.31 ರವರೆಗೆ ಸುಸ್ತಿದಾರರಾಗಿರುವವರ ಸಾಲ ಮನ್ನಾ ಮಾಡಲಾಗುತ್ತದೆ ಎಂದು ಸರ್ಕಾರವು ಹೇಳಿದೆ. ಶೂನ್ಯ ಬಡ್ಡಿ ದರದಲ್ಲಿ ಸಾಲ ಪಡೆದಿರುವವರು ನಿಗದಿತ ಅವಧಿಯೊಳಗೆ ಸಾಲ ಮರು ಪಾವತಿಸಿರುತ್ತಾರೆ. ಇದರಿಂದ ಸುಸ್ತಿ ಸಾಲ ವ್ಯಾಪ್ತಿಗೆ ಹೆಚ್ಚಿನ ರೈತರು ಒಳಪಡುವುದಿಲ್ಲ ಎಂದು ರೈತ ಸಂಘದ ನಾಯಕರು ಹೇಳಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.