
ಬೆಂಗಳೂರು : ಆರ್‌ಟಿಒ ಶುಲ್ಕ ಹೆಚ್ಚಳದಿಂದ ನಲುಗುತ್ತಿದ್ದ ಸಾರಿಗೆ ವಾಹನಗಳ (ವಾಣಿಜ್ಯ) ಮಾಲಿಕರಿಗೆ ಸಿಹಿ ಸುದ್ದಿ! ಸಾರಿಗೆ ಇಲಾಖೆಯು ವಾಹನ ನೋಂದಣಿ ಶುಲ್ಕವನ್ನು ಭಾರಿ ಪ್ರಮಾಣದಲ್ಲಿ ಇಳಿಸಿದೆ. ಭಾರಿ ಸರಕು ವಾಹನಕ್ಕೆ (ಲಾರಿ, ಟ್ರಕ್) ಹೊಸದಾಗಿ ಅಥವಾ ನವೀಕರಿಸುವ ನೋಂದಣಿ ಪತ್ರ ಮತ್ತು ಹೊಸ ನೋಂದಣಿ ಸಂಖ್ಯೆ ನೀಡಲು ಈ ಹಿಂದೆ ವಿಧಿಸಲಾಗಿದ್ದ ಶುಲ್ಕ 1,500 ರು.ನಿಂದ 1 ಸಾವಿರ ರು., ಭಾರಿ ಪ್ಯಾಸೆಂಜರ್ ಮೋಟಾರು ವಾಹನ (ಬಸ್ )ದ ಶುಲ್ಕ 1,500 ರಿಂದ 1 ಸಾವಿರ ರು.ಗೆ ಇಳಿಸಿ ಅಧಿಸೂಚನೆ ಹೊರಡಿಸಿದೆ.
ಕೇಂದ್ರ ಹೆದ್ದಾರಿ ಮತ್ತು ಭೂ ಸಾರಿಗೆ ಸಚಿವಾಲಯ ಕಳೆದ 2016 ಡಿ.29ರಿಂದ ಅನ್ವಯವಾಗುವಂತೆ ಆರ್ ಟಿಒ ಶುಲ್ಕಗಳ ಪರಿಷ್ಕರಣೆ ಮಾಡಿತ್ತು. ಇದರಿಂದ ವಾಹನ ಕಲಿಕಾ ಪರವಾನಗಿ (ಎಲ್‌ಎಲ್‌ಆರ್), ಚಾಲನಾ ಪರವಾನಗಿ (ಡಿಎಲ್), ನೋಂದಣಿ (ರಿಜಿಸ್ಟ್ರೇಷನ್) ಶುಲ್ಕ ಸೇರಿ ಎಲ್ಲ ಶುಲ್ಕ ಭಾರಿ ಏರಿಕೆಯಾಗಿತ್ತು. ಈ ವೇಳೆ ದೇಶಾದ್ಯಂತ ಸಾರಿಗೆ ವಾಹನಗಳ ವಲಯದಿಂದ ಶುಲ್ಕ ಏರಿಕೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಸಚಿವಾಲಯವು 2017 ರ ಮಾ. 21 ರಂದು ಅಧಿಸೂಚನೆ ಹೊರಡಿಸಿ, ರಾಜ್ಯ ಸರ್ಕಾರಗಳು ಕೇಂದ್ರ ನಿಗದಿಗೊಳಿಸಿರುವ ಶುಲ್ಕಕ್ಕಿಂತ ಕಡಿಮೆ ಶುಲ್ಕ ಪಡೆಯಬಹುದು ಎಂದು ತಿಳಿಸಿತ್ತು.
ಈ ವೇಳೆ ಲಾರಿ ಮಾಲೀಕರ ಸಂಘಟನೆಗಳು ಶುಲ್ಕ ಇಳಿಸುವಂತೆ ರಾಜ್ಯ ಸಾರಿಗೆ ಇಲಾಖೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದವು. ಮನವಿ ಪುರಸ್ಕರಿಸಿದ್ದ ಸಾರಿಗೆ ಇಲಾಖೆ ಆಯುಕ್ತರು ದರ ಇಳಿಕೆ ಸಂಬಂಧ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದರು. ಇದೀಗ ಹಣಕಾಸು ಇಲಾಖೆ ಸಮ್ಮತಿ ಮೇರೆಗೆ ಸಾರಿಗೆ ಇಲಾಖೆ ಶುಲ್ಕ ಇಳಿಕೆ ಮಾಡಿದೆ.
ಒಪ್ಪಂದ ನಮೂದು ಶುಲ್ಕವೂ ಇಳಿಕೆ: ಸಾರಿಗೆ ಇಲಾಖೆ ನೋಂದಣಿ ಶುಲ್ಕ ಇಳಿಕೆ ಜತೆಗೆ ಬಾಡಿಗೆ, ಭೋಗ್ಯ ಹಾಗೂ ಸಾಲದ ಒಪ್ಪಂದ ನಮೂದಿಸುವ (ಎಂಡೋರ್ಸಿಂಗ್ ಹೈಪೋಥಿಕೇಷನ್ ಅಗ್ರಿಮೆಂಟ್) ಶುಲ್ಕವನ್ನೂ ಭಾರಿ ಪ್ರಮಾಣದಲ್ಲಿ ಇಳಿಸಿದೆ. ಈ ಹಿಂದೆ ತ್ರಿಚಕ್ರ ವಾಹನ, ಲಘು ಮೋಟಾರು ವಾಹನಕ್ಕೆ 1,500 ರು. ಇದ್ದ ಶುಲ್ಕ ಇದೀಗ 800 ರು.ಗೆ ಇಳಿಕೆಯಾಗಿದೆ. ಅಂತೆಯೇ ಮಧ್ಯಮ ಮತ್ತು ಭಾರಿ ಗಾತ್ರದ ವಾಹನಕ್ಕೆ ಇದ್ದ 3000 ರು. ಶುಲ್ಕವನ್ನು 800 ರು.ಗೆ ಇಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.