
ನವದೆಹಲಿ(ಡಿ.25): ಇನ್ಮುಂದೆ ಚೆಕ್ ಬೌನ್ಸ್ ಪ್ರಕರಣದಲ್ಲಿ ಸೀದಾ ಜೈಲಿಗೆ ಹೋಗುವ ಸಂದರ್ಭ ಬಂದರೂ ಬರಬಹುದು. ಕೇಂದ್ರಸರ್ಕಾರ ಹಾಲಿ ಇರುವ ಚೆಕ್ ಬೌನ್ಸ್ ಕಾಯ್ದೆಗೆ ತಿದ್ದುಪಡಿ ತಂದು ಮತ್ತಷ್ಟು ಕಠಿಣಗೊಳಿಸುವ ಚಿಂತನೆ ನಡೆಸಿದೆ. ಬಜೆಟ್ ಪೂರ್ವ ಮಾತುಕತೆಗಾಗಿ ವಿತ್ತ ಸಚಿವರನ್ನ ಭೇಟಿಯಾದ ಟ್ರೇಡರ್ಸ್ ಅಸೋಸಿಯೇಶನ್ ಸರ್ಕಾರದ ಮುಂದೆ ಈ ಬೇಡಿಕೆ ಇಟ್ಟಿದೆ ಎನ್ನಲಾಗಿದೆ.
ಕ್ಯಾಶ್ ಲೆಸ್ ವ್ಯವಹಾರವನ್ನ ಸರ್ಕಾರ ಅತ್ಯಂತ ಕಟುಬದ್ಧವಾಗಿ ಪಾಲಿಸಲು ಮುಂದಾಗಿರುವ ಹಿನ್ನೆಲೆಯಲ್ಲಿ ವ್ಯಾಪಾರಿಗಳು ಬೇರೆ ವಿಧಿ ಇಲ್ಲದೆ ವ್ಯವಹಾರದಲ್ಲಿ ಚೆಕ್ ಪಡೆಯಬೇಕಿದೆ. ಆದರೆ, ಚೆಕ್ ಬೌನ್ಸ್ ಆಗುವ ಭಯದಿಂದ ಬಹುತೇಕರು ಚೆಕ್ ವ್ಯವಹಾರಕ್ಕೆ ಹೆದರುತ್ತಿದ್ದಾರೆ. ಹೀಗಾಗಿ, ಚೆಕ್ ಬೌನ್ಸ್ ಕಾಯ್ದೆ ತಿದ್ದುಪಡಿಗೆ ವ್ಯಾಪಾರಿಗಳಿಂದ ಸರ್ಕಾರಕ್ಕೆ ಒತ್ತಡ ಕೇಳಿಬಂದಿದೆ.
ಜೊತೆಗೆ ವಿವಿಧ ಕೋರ್ಟ್‌ಗಳಲ್ಲಿ ವಿಚಾರಣೆಗಾಗಿ ಬಾಕಿ ಇರುವ ಚೆಕ್ ಬೌನ್ಸ್ ಕೇಸುಗಳ ಸಂಖ್ಯೆ 18.63 ಲಕ್ಷಕ್ಕೆ ತಲುಪಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಚಿಂತನೆ ನಡೆಸುತ್ತಿದೆ. ಇದರ ಜತೆಗೆ ಚೆಕ್ ಬೌನ್ಸ್ ಪ್ರಕರಣ ಎಲ್ಲಿ ನಡೆದಿದೆಯೋ ಆ ವ್ಯಾಪ್ತಿಯಲ್ಲಿಯೇ ವಿಚಾರಣೆ ನಡೆಯಬೇಕೆಂದು ಸುಪ್ರೀಂಕೋರ್ಟ್ 2014ರಲ್ಲಿ ತೀರ್ಪು ನೀಡಿದ್ದು ಕೂಡ ಕಾಯ್ದೆಯಲ್ಲಿ ಬದಲು ಮಾಡಲು ಕಾರಣ ಎನ್ನಲಾಗಿದೆ.. ಪ್ರಸ್ತಾವಿತ ಕ್ರಮದಿಂದಾಗಿ ಹಲವು ವರ್ಷಗಳ ಕಾಲ ಕೋರ್ಟ್‌ಗಳಲ್ಲಿ ಇತ್ಯರ್ಥವಾಗದೇ ಉಳಿದಿರುವ ಕೇಸುಗಳನ್ನು ಇತ್ಯರ್ಥಗೊಳಿಸಲು ನೆರವಾಗುವ ಸಾಧ್ಯತೆ ಇದೆ. ಪ್ರಸ್ತಾವಿತ ಸಲಹೆಗಳ ಪ್ರಕಾರ 30 ದಿನಗಳ ಒಳಗಾಗಿ ಪ್ರಕರಣ ಇತ್ಯರ್ಥಗೊಳಿಸಲು ಎರಡು ಪಕ್ಷಗಳಿಗೂ ಅವಕಾಶ ನೀಡಲಾಗುತ್ತದೆ. ಇತ್ಯರ್ಥವಾಗದಿದ್ದಲ್ಲಿ ಚೆಕ್ ನೀಡಿದಾತನಿಗೆ ಕೋರ್ಟ್ ಸೂಚನೆಯನ್ವಯ ಜಾಮೀನು ನೀಡದೆ ಜೈಲು ಶಿಕ್ಷೆ ವಿಸಬಹುದಾಗಿದೆ.
ಹಾಲಿ ಇರುವ ಕಾನೂನು ಪ್ರಕಾರ ಚೆಕ್ ಬೌನ್ಸ್ ಪ್ರಕರಣದಲ್ಲಿ ಆರೋಪಕ್ಕೆ ಗುರಿಯಾದ ವ್ಯಕ್ತಿಗೆ ಜಾಮೀನು ಪಡೆಯಲು ಅವಕಾಶ ಉಂಟು. ಇದರಿಂದಾಗಿ ತಪ್ಪಿತಸ್ಥರಿಗೆ ವಿಚಾರಣೆ ಮುಕ್ತಾಯವಾಗುವವರೆಗೆ ಜೈಲಿಂದ ಪಾರಾಗಲು ಅವಕಾಶ ತಪ್ಪಿದಂತಾಗುತ್ತದೆ. ಅಪರಾಧ ಸಾಬೀತಾದಲ್ಲಿ ಎರಡು ವರ್ಷ ಜೈಲು ಅಥವಾ ಎಷ್ಟು ಮೊತ್ತ ಚೆಕ್ ನೀಡಲಾಗಿದೆಯೋ ಅದರ ಎರಡರಷ್ಟು ಮೊತ್ತವನ್ನು ದಂಡವಾಗಿ ನೀಡಬೇಕು. ಇಲ್ಲವೇ ಎರಡೂ ಶಿಕ್ಷೆಯನ್ನು ಕೋರ್ಟ್ ನೀಡುವ ಸಾಧ್ಯತೆ ಇದೆ. ಕಾನೂನು ಖಟ್ಲೆಗಳನ್ನು ಕಡಿಮೆಗೊಳಿಸುವುದೇ ಕಠಿಣ ಕ್ರಮದ ಉದ್ದೇಶವಾಗಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಬಜೆಟ್ ಅವೇಶನದಲ್ಲಿ ಅನುಮೋದನೆ?: ಮುಂದಿನ ತಿಂಗಳ ಕೊನೆಯ ವಾರದಿಂದ ಆರಂಭವಾಗಲಿರುವ ಬಜೆಟ್ ಅವೇಶನದಲ್ಲಿ ಹಾಲಿ ಇರುವ ಕಾನೂನಿಗೆ ತಿದ್ದುಪಡಿ ತಂದು ಅನುಮೋದನೆ ಪಡೆದೊಳ್ಳಲು ಬಯಸಿದೆ. ನಕಲಿ ನೋಟುಗಳ ಹಾವಳಿ ತಪ್ಪಿಸಲು ಡೆಬಿಟ್, ಕ್ರೆಡಿಟ್ ಕಾರ್ಡ್‌ಗಳ ಬಳಕೆ, ಚೆಕ್‌ಗಳ ಮೂಲಕವೂ ಸುಲಲಿತವಾಗಿ ವಹಿವಾಟು ನಡೆಯಬೇಕೆನ್ನುವುದು ಸರ್ಕಾರದ ಇರಾದೆ. ವ್ಯಾಪಾರೋದ್ದಿಮೆ ಸಂಸ್ಥೆಗಳು ಮತ್ತು ಉದ್ಯಮಿಗಳು ಚೆಕ್ ಬೌನ್ಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಸುಸ್ತಿದಾರರನ್ನು ಪತ್ತೆಹಚ್ಚಲು ಕಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.