
ಬೆಂಗಳೂರು (ಮಾ. 01): ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಸಂಬಂಧ ಆರನೇ ವೇತನ ಆಯೋಗದ ವರದಿ ಅನುಷ್ಠಾನದ ಅಧಿಕೃತ ಆದೇಶಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಅಂಕಿತ ಹಾಕಿದ್ದಾರೆ.
ಶನಿವಾರ ನಡೆಯಲಿರುವ ಸಂಪುಟ ಸಭೆಯಲ್ಲಿ ಘಟನೋತ್ತರ ಮಂಜೂರಾತಿ ಪಡೆಯಲಿದ್ದು, ಕೊನೆಗೂ ನೌಕರರ ವೇತನ ಶೇ.30 ರಷ್ಟು ಹೆಚ್ಚಳವಾಗುವುದು ಅಂತಿಮವಾಗಿದೆ. ಎಂ.ಆರ್.ಶ್ರೀನಿವಾಸ್ ಮೂರ್ತಿ ನೇತೃತ್ವದ 6 ನೇ ವೇತನ ಆಯೋಗವು ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವರದಿ ಸಲ್ಲಿಸಿತ್ತು. ನಂತರ 6 ನೇ ವೇತನ ಆಯೋಗದ ಮಸೂದೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ
ಬಜೆಟ್ ಜತೆ ಮಂಡಿಸಿ ಸದನದ ಒಪ್ಪಿಗೆ ಪಡೆದಿದ್ದರು. ಫೆ.27 ರಂದು ಮಂಗಳವಾರ ನಡೆಯಬೇಕಿದ್ದ ಸಚಿವ ಸಂಪುಟ ಸಭೆಯಲ್ಲಿ ಅದಕ್ಕೆ ಅಂಗೀಕಾರ ಪಡೆಯಲು ನಿರ್ಧರಿಸಿದ್ದರೂ, ಸಂಪುಟ ಸಭೆ ಮುಂದೂಡಿದ್ದರಿಂದ ಸಾಧ್ಯವಾಗಿರಲಿಲ್ಲ. ಇದೀಗ ಶನಿವಾರದ ಸಚಿವ ಸಂಪುಟ ಸಭೆಯ ಘಟನೋತ್ತರ ಮಂಜೂರಾತಿ ನಿರೀಕ್ಷಿಸಿ ಬುಧವಾರ ಸಿದ್ದರಾಮಯ್ಯ ಸರ್ಕಾರದ ಅಧಿಕೃತ ಆದೇಶಕ್ಕೆ ಸಹಿ ಹಾಕಿದ್ದಾರೆ.
ಸರ್ಕಾರಿ ನೌಕರರಿಗೆ ಬಂಪರ್: ಸರ್ಕಾರಿ ನೌಕರರ ವೇತನ 2017 ರ ಜುಲೈ ಒಂದರಿಂದ ಪೂರ್ವಾನ್ವಯವಾಗುವಂತೆ ಶೇ.30 ರಷ್ಟು ಹೆಚ್ಚಳವಾಗಲಿದೆ. ಇದರಿಂದ ಒಟ್ಟು 5.20 ಲಕ್ಷ ನೌಕರರಿಗೆ
ಪ್ರಯೋಜನವಾಗಲಿದೆ. ವೇತನ ಹೆಚ್ಚಳ ಶಿಫಾರಸು ರಾಜ್ಯದಲ್ಲಿನ ಅನುದಾನಿತ ಶಿಕ್ಷಣ ಸಂಸ್ಥೆಗಳ, ಸ್ಥಳೀಯ ಸಂಸ್ಥೆಗಳ, ಪದವಿ ಶಿಕ್ಷಣ ವಿದ್ಯಾಲಯ ಹಾಗೂ ವಿವಿಗಳಲ್ಲಿನ ಸುಮಾರು
73,000 ಬೋಧಕೇತರ ಸಿಬ್ಬಂದಿಗೂ ಅನ್ವಯವಾಗಲಿದೆ.
ಕನಿಷ್ಠ ವೇತನ 17, 000 ರು. ಮತ್ತು ಗರಿಷ್ಠ ವೇತನ ರು. 1,50, 600 ನಿಗದಿಪಡಿಸುವಂತೆಯೂ ವರದಿಯಲ್ಲಿ ಹೇಳಲಾಗಿದೆ. 8,500 ರು. ಕನಿಷ್ಠ ಪಿಂಚಣಿ ಮತ್ತು 75,300 ರು. ಗರಿಷ್ಠ ಪಿಂಚಣಿಗೂ ಶಿಫಾರಸು ಮಾಡಲಾಗಿದೆ. ಇದರಿಂದಾಗಿ ಈವರೆಗೆ ಡಿ ಗ್ರೂಪ್ ನೌಕರರಿಗೆ ಇದ್ದ ಆರಂಭಿಕ ಕನಿಷ್ಠ ಮೂಲವೇತನ 9,600 ರು. ಇನ್ನುಮುಂದೆ 17,000 ರು.ಗಳಿಗೆ ಏರಿಕೆಯಾಗಲಿದೆ. ಶೇ 45.25 ರಷ್ಟಿದ್ದ ತುಟ್ಟಿಭತ್ಯೆ ಮೂಲವೇತನದಲ್ಲಿ ವಿಲೀನವಾಗಲಿದೆ. ಜತೆಗೆ ಶೇ.30 ರ ಫಿಟ್‌ಮೆಂಟ್ ನೌಕರರಿಗೆ ಸಿಗಲಿದೆ. ಪರಿಷ್ಕೃತ ದರವನ್ನು ಈ ವರ್ಷ ಏಪ್ರಿಲ್ 1 ರಿಂದಲೇ ಪಾವತಿಸಬೇಕಾಗುತ್ತದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ 10, 508 ಕೋಟಿ ಹೆಚ್ಚುವರಿ ಹೊರೆಯಾಗಲಿದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.