
ಕೋಲ್ಕತ್ತಾ: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಕಾರ್ಯಕ್ರಮಕ್ಕೆ ಸರ್ಕಾರಿ ಒಡೆತನದ ಸಭಾಂಗಣವನ್ನು ನೀಡಲು ಪಶ್ಚಿಮ ಬಂಗಾಳ ಸರ್ಕಾರ ಅನುಮತಿ ನಿರಾಕರಿಸಿದೆಯೆಂದು ಸರ್ಕಾರೇತರ ಸಂಸ್ಥೆಯೊಂದು ಆರೋಪಿಸಿದೆ.
ಮುಂಬರುವ ಅಕ್ಟೋಬರ್ 3ರಂದು ಕೋಲ್ಕತ್ತಾದ ಪ್ರಮುಖ ಸಭಾಂಗಣವಾದ ಮಹಾಜಾತಿ ಸದನದಲ್ಲಿ ಕಾರ್ಯಕ್ರಮ ನಡೆಸಲು ಸಿಸ್ಟರ್ ನಿವೇದಿತಾ ಮಿಶನ್ ಟ್ರಸ್ಟ್ ಅನುಮತಿಯನ್ನು ಪಡೆದಿತ್ತು. ಆದರೆ ಈಗ ನವೀಕರಣದ ಕಾರಣವನ್ನು ಮುಂದಿಟ್ಟುಕೊಂಡು ಅಧಿಕಾರಿಗಳು ಅನುಮತಿಯನ್ನು ರದ್ದುಪಡಿಸಿದ್ದಾರೆಂದು ಹೇಳಲಾಗಿದೆ.
ಭಾರತೀಯ ರಾಷ್ಟ್ರೀಯತೆ ಚಳುವಳಿಯಲ್ಲಿ ಸಿಸ್ಟರ್ ನಿವೇದಿತಾ ಅವರ ಪಾತ್ರದ ಬಗ್ಗೆ ಚರ್ಚಾಗೋಷ್ಠಿಯು ಕಾರ್ಯಕ್ರಮದ ಭಾಗವಾಗಿತ್ತು. ಮೋಹನ್ ಭಾಗವತ್ ಅಲ್ಲದೇ ಪ. ಬಂಗಾಳ ರಾಜ್ಯಪಾಲ ಕೇಸರಿ ನಾಥ್ ತ್ರಿಪಾಠಿ ಕೂಡಾ ಭಾಗವಹಿಸುವವರಿದ್ದರು.
ಸಭಾಂಗಣಕ್ಕೆ ಮುಂಗಡ ಹಣ ಪಾವತಿಸಿ ಅನುಮತಿಯನ್ನು ಪಡೆಯಲಾಗಿತ್ತು. ಆದರೆ ಕೆಲದಿನದ ಬಳಿಕ ಪೊಲೀಸರಿಂದ ನಿರಪೇಕ್ಷಣಾ ಪ್ರಮಾಣ ಪತ್ರ ತರುವಂತೆ ಸೂಚಿಸಿದರು. ನಾವು ಎರಡು ದಿನಗಳ ಸಮಯಾವಕಾಶ ಕೋರಿದ್ದೆವು, ಆದರೆ ಏಕಾಏಕಿ ನವೀಕರಣದ ಕೆಲಸ ಬಾಕಿಯಿದೆಯೆಂದು ಅನುಮತಿಯನ್ನು ರದ್ದುಪಡಿಸಿದ್ದಾರೆ ಎಂದು ಟ್ರಸ್ಟ್’ನ ಕಾರ್ಯದರ್ಶಿ ರಂತಿದೇವ್ ಸೇನ್’ಗುಪ್ತ ಹೇಳಿದ್ದಾರೆ.
ಈ ಕ್ರಮದ ಹಿಂದೆ ಏನೋ ಷಡ್ಯಂತ್ರವಿದೆ. ರಾಷ್ಟ್ರೀಯತೆ ಚಳುವಳಿಗೆ ಸಂಬಂಧಿಸಿರುವುದರಿಂದ ನಾವು ಮೋಹನ್ ಭಾಗವತ್ ಅವರನ್ನು ಆಹ್ವಾನಿಸಿದ್ದೆವು. ಆದರೆ ಇದೇ ವಿವಾದವಾಗಲಿದೆ ಎಂದು ನಾವು ಭಾವಿಸಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಆದರೆ ಈ ಆರೋಪಗಳನ್ನು ಅಧಿಕಾರಗಳು ಅಲ್ಲಗಳೆದಿದ್ದಾರೆ. ಈ ಆರೋಪಗಳಲ್ಲಿ ಹುರುಳಿಲ್ಲ. ನಾವು ಕೇವಲ ಈ ಟ್ರಸ್ಟ್’ನ ಅನುಮತಿಯನ್ನು ರದ್ದುಪಡಿಸಿಲ್ಲ, ಅಕ್ಟೋಬರ್’ನಲ್ಲಿ ಇತರ ಸಂಘಸಂಸ್ಥೆ ಕಾರ್ಯಕ್ರಮಗಳನ್ನು ಕೂಡಾ ರದ್ದುಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಭಾಂಗಣದಲ್ಲಿ ವೇದಿಕೆ, ಹವಾನಿಯಂತ್ರಿತ ವ್ಯವಸ್ಥೆ ಹಾಗೂ ಧ್ವನಿವರ್ಧಕಗಳನ್ನು ತುರ್ತಾಗಿ ಮೇಲ್ದರ್ಜೆಗೇರಿಸುವ ಅನಿವಾರ್ಯತೆ ಇದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.