
ಬೆಂಗಳೂರು : ಪ್ರತಿನಿತ್ಯ ಡೀಸೆಲ್ ದರ ಏರಿಕೆಯಾಗುತ್ತಿರುವು ದರಿಂದ ಸಾರಿಗೆ ನಿಗಮಗಳಿಗೆ ಆರ್ಥಿಕ ಹೊರೆ ಹೆಚ್ಚಾಗುತ್ತಿದ್ದು, ಇದನ್ನು ಸರಿದೂಗಿಸುವ ಸಲುವಾಗಿ ಬಸ್ ಟಿಕೆಟ್ ದರವನ್ನು ಶೇ.8 ರಿಂದ 10 ರಷ್ಟು ಹೆಚ್ಚಿಸಲು ಗಂಭೀರ ಚಿಂತನೆ ನಡೆದಿದೆ.
ಕಳೆದ ಕೆಲ ದಿನ ಗಳಿಂದ ಡೀಸೆಲ್ ದರ ಗಗನಕ್ಕೇರುತ್ತಿದೆ. ಏಪ್ರಿಲ್ ಮಧ್ಯದಲ್ಲಿ ಪ್ರತಿ ಲೀಟರ್ ಡೀಸೆಲ್ ದರ 61.02 ರು. ಇತ್ತು. ಮೇ 27 ರಂದು ಪ್ರತಿ ಲೀಟರ್ ಡೀಸೆಲ್ ದರ 70.25 ರು.ಗೆ ಏರಿಕೆಯಾಗಿದೆ. ದಿನಕ್ಕೆ ಲಕ್ಷಾಂತರ ಲೀಟರ್ ಡೀಸೆಲ್ ಬಳಸುವ ಸಾರಿಗೆ ನಿಗಮಗಳು ಇದೀಗ ಡೀಸೆಲ್‌ಗೆ ಹೆಚ್ಚುವರಿ ಹಣ ಪಾವತಿಸುತ್ತಿವೆ.
ಮೊದಲೇ ನಷ್ಟದ ಸುಳಿಯಲ್ಲಿರುವ ನಿಗಮಗಳಿಗೆ ಈ ಡೀಸೆಲ್ ದರ ಏರಿಕೆ ಭಾರಿ ಹೊಡೆತ ನೀಡಿದೆ. ಈ ಹಿನ್ನೆಲೆಯಲ್ಲಿ ಟಿಕೆಟ್ ದರ ಏರಿಕೆ ಅನಿವಾರ್ಯವಾಗಿರುವುದರಿಂದ ನಾಲ್ಕು ನಿಗಮಗಳು ಚರ್ಚಿಸಿದ್ದು, ಪ್ರಸ್ತಾವನೆ ಸಿದ್ಧಪಡಿಸುತ್ತಿವೆ. ಟಿಕೆಟ್ ದರ ಶೇ.8 ರಿಂದ 10 ರಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಅಂದರೆ 100ಕ್ಕೆ 8 ರು.ನಿಂದ 10 ರು. ಹೆಚ್ಚಳವಾಗಬಹುದು. ಹೊಸ ಸಾರಿಗೆ ಸಚಿವರು ಬಂದ ಬಳಿಕ ಅವರೊಂದಿಗೆ ಚರ್ಚಿಸಿ, ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲು ತೀರ್ಮಾನಿಸಿರುವ ಬಗ್ಗೆ ಕೆಎಸ್‌ಆರ್‌ಟಿಸಿ ಮೂಲಗಳಿಂದ ತಿಳಿದು ಬಂದಿದೆ.
ತೈಲ ಕಂಪನಿಗಳು ಸಗಟು ಡೀಸೆಲ್ ದರವನ್ನೂ ಏರಿಸಿವೆ. ಇದರಿಂದ ನಿಗಮಗಳಿಗೆ ಪ್ರತಿನಿತ್ಯ 30.97 ಲಕ್ಷ ರು. ಹೆಚ್ಚುವರಿ ಆರ್ಥಿಕ ಹೊರೆ ಬೀಳುತ್ತಿದೆ. ಒಟ್ಟಾರೆ ತಿಂಗಳಿಗೆ 9.29 ಕೋಟಿ ರು. ಹೆಚ್ಚುವರಿ ವೆಚ್ಚ ಆಗುತ್ತಿದೆ. ದರ ಏರಿಕೆ ಮಾಡದಿದ್ದರೆ ಸಂಕಷ್ಟ ಖಚಿತ ಎಂದು ಕೆಎಸ್‌ಆರ್‌ಟಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಸರ್ಕಾರ ಒಪ್ಪುತ್ತಾ?: ಮೂರು ದಿನಗಳ ಹಿಂದೆಯಷ್ಟೇ ಅಸ್ತಿತ್ವಕ್ಕೆ ಬಂದಿರುವ ರಾಜ್ಯ ಸರ್ಕಾರ, ಯಾವ ತೀರ್ಮಾನ ಕೈಗೊಳ್ಳಲಿದೆ ಎಂಬುದು ಕುತೂಹಲಕ್ಕೆ ಎಡೆಮಾಡಿದೆ. ಟಿಕೆಟ್ ದರ ಏರಿಕೆ ಪ್ರಸ್ತಾವನೆ ಶೀಘ್ರದಲ್ಲೇ ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.