
ನವದೆಹಲಿ(ಮೇ 17): ತಿಹಾರ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂಪ್ರಕಾಶ್ ಚೌತಾಲ 12ನೇ ತರಗತಿ ಪರೀಕ್ಷೆಯಲ್ಲಿ ಫಸ್ಟ್ ಕ್ಲಾಸ್'ನಲ್ಲಿ ಪಾಸಾಗಿದ್ದಾರೆ. 82 ವರ್ಷದ ಚೌಟಾಲಾ ಅವರು ಜೈಲಿ ಆವರಣದಲ್ಲೇ ಏಪ್ರಿಲ್ 23ರಂದು ಪರೀಕ್ಷೆ ಬರೆದಿದ್ದರು. ನ್ಯಾಷನಲ್ ಇನ್ಸ್'ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (ಎನ್'ಐಒಎಸ್) ಈ ಪರೀಕ್ಷೆ ಆಯೋಜಿಸಿತ್ತು. ಮೊಮ್ಮಗನ ಮದುವೆಗೆಂದು ಪೆರೋಲ್ ಮೇಲೆ ಹೊರಬಂದಿದ್ದ ಓಂಪ್ರಕಾಶ್ ಚೌಟಾಲಾ ಅವರು ಪರೀಕ್ಷೆಗೋಸ್ಕರ ಪೆರೋಲ್ ಅವಧಿಗಿಂತ ಮುನ್ನವೇ ಜೈಲಿಗೆ ಆಗಮಿಸಿ ಪರೀಕ್ಷೆ ಬರೆದಿದ್ದರು. ಮೇ 5ರವರೆಗೆ ಅವರ ಪೆರೋಲ್ ಅವಧಿ ಇತ್ತು.
ಮಾಜಿ ಹರಿಯಾಣ ಸಿಎಂ ಚೌಟಾಲಾ ಅವರು 'ಎ' ಗ್ರೇಡ್'ನಲ್ಲಿ ಪರೀಕ್ಷೆ ತೇರ್ಗಡೆಯಾಗಿರುವ ವಿಚಾರವನ್ನು ಅವರ ಕಿರಿಯ ಮಗ ಅಭಯ್ ಸಿಂಗ್ ಚೌಟಾಲಾ ಅವರೇ ಬಹಿರಂಗಪಡಿಸಿದ್ದಾರೆ.
ಶಿಕ್ಷಕರ ನೇಮಕಾತಿ ಅವ್ಯವಹಾರ ಪ್ರಕರಣದಲ್ಲಿ ದೋಷಿಯಾಗಿರುವ ಓಂಪ್ರಕಾಶ್ ಚೌಟಾಲಾ ಅವರು 10 ವರ್ಷ ಜೈಲುಶಿಕ್ಷೆ ಪಡೆದಿದ್ದು ಸದ್ಯಕ್ಕೆ ತಿಹಾರ್ ಜೈಲಿನಲ್ಲಿದ್ದಾರೆ. ಜೈಲಿನ ಸಮಯವನ್ನು ಸದುಪಯೋಗಿಸಿಕೊಳ್ಳುತ್ತಿರುವ ಓಂಪ್ರಕಾಶ್ ಅವರು ದಿನವೂ ಜೈಲಿನ ಲೈಬ್ರರಿಯಲ್ಲಿ ಓದುವ ಅಭ್ಯಾಸ ರೂಢಿಸಿಕೊಂಡಿದ್ದಾರಂತೆ. ಸದ್ಯ 12ನೇ ತರಗತಿ ಪಾಸಾಗಿರುವ ಅವರು ಪದವಿಯನ್ನೂ ಪೂರ್ಣಗೊಳಿಸಲು ನಿರ್ಧರಿಸಿದ್ದಾರೆ. ಅವರು ಪಠ್ಯಪುಸ್ತಕವಷ್ಟೇ ಅಲ್ಲ, ವಿಶ್ವದ ಶ್ರೇಷ್ಠ ರಾಜಕಾರಣಿಗಳ ಚರಿತ್ರೆ ಸೇರಿದಂತೆ ಹಲವು ಪುಸ್ತಕಗಳನ್ನು ಓದುತ್ತಿದ್ದಾರೆ. ದಿನಪತ್ರಿಕೆಗಳನ್ನು ಅವರು ತಪ್ಪದೇ ಓದುತ್ತಾರೆ ಎಂದು ಚೌಟಾಲಾ ಅವರ ಆಪ್ತ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಆರ್.ಎಸ್.ಚೌಧರಿ ಹೇಳುತ್ತಾರೆ.
ಶಿಕ್ಷಕರ ನೇಮಕಾತಿ ಅವ್ಯವಹಾರ ಪ್ರಕರಣದಲ್ಲಿ ಓಂಪ್ರಕಾಶ್ ಮತ್ತು ಅವರ ಮಗ ಅಜಯ್ ಚೌಟಾಲಾ ಸೇರಿದಂತೆ ಒಟ್ಟು 55 ಜನರು ತಪ್ಪಿತಸ್ಥರೆಂದು 2015ರಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿ ಶಿಕ್ಷೆ ವಿಧಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.