ಕರಾವಳಿಗೆ ಮೊದಲ ಸಲ ಕೈತಪ್ಪಿತು ಸಚಿವ ಸ್ಥಾನ: 16 ಬಿಜೆಪಿ ಶಾಸಕರಿದ್ದರೂ ಒಬ್ಬರೂ ಮಂತ್ರಿ ಇಲ್ಲ

By Web DeskFirst Published Aug 21, 2019, 9:44 AM IST
Highlights

ಕರಾವಳಿಗೆ ಮೊದಲ ಸಲ ಕೈತಪ್ಪಿತು ಸಚಿವ ಸ್ಥಾನ| ದ.ಕ, ಉಡುಪಿ, ಉತ್ತರ ಕನ್ನಡಕ್ಕಿಲ್ಲ ಮಣೆ| 16 ಬಿಜೆಪಿ ಶಾಸಕರು ಇದ್ದರೂ ಒಬ್ಬರೂ ಮಂತ್ರಿಇಲ್ಲ

ಆತ್ಮಭೂಷಣ್

ಮಂಗಳೂರು[ಆ.21]: ಕಳೆದ ಮೂರು ದಶಕಗಳಿಂದಲೂ ಬಿಜೆಪಿ ಹಾಗೂ ಸಂಘ ಪರಿವಾರದ ಗಟ್ಟಿ ನೆಲವಾಗಿರುವ ಕರಾವಳಿ ಜಿಲ್ಲೆಗಳ ಯಾವೊಬ್ಬ ಶಾಸಕನಿಗೂ ಮುಖ್ಯಮಂತ್ರಿ ಬಿ. ಎಸ್.ಯಡಿಯೂರಪ್ಪ ಅವರ ಸಂಪುಟದಲ್ಲಿ ಸಚಿವ ಸ್ಥಾನ ಸಿಕ್ಕಿಲ್ಲ. ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಟ್ಟು 19 ಕ್ಷೇತ್ರ ಪೈಕಿ 16ರಲ್ಲಿ ಬಿಜೆಪಿ ಶಾಸಕರು ಇದ್ದಾರೆ. ಇವರಲ್ಲಿ ಯಾರಿಗೂ ಸಚಿವ ಸ್ಥಾನ ಸಿಕ್ಕಿಲ್ಲ. ಹೀಗಾಗಿದ್ದು ಇತಿಹಾಸದಲ್ಲಿ ಇದೇ ಮೊದಲು.

ಉತ್ತರ ಕನ್ನಡದ ಶಾಸಕ ಕಾಗೇರಿ ವಿಶ್ವೇಶ್ವರ ಹೆಗಡೆ ಸ್ಪೀಕರ್ ಆಗಿದ್ದಾರೆ. ಸಚಿವ ಸ್ಥಾನ ಲಭಿಸಿರುವ ಉಡುಪಿ ಜಿಲ್ಲೆಯ ಕೋಟ ಶ್ರೀನಿವಾಸ ಪೂಜಾರಿ ವಿಧಾನ ಪರಿಷತ್ ಸದಸ್ಯರು. ಹಾಗಾಗಿ ದಕ್ಕಿದ ಈ ಎರಡು ಸ್ಥಾನಗಳಿಗೇ ಕರಾವಳಿ ಜನತೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ.

ಬಿಎಸ್‌ವೈ ಸಚಿವ ಸಂಪುಟ ವಿಸ್ತರಣೆ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇತ್ತೀಚೆಗೆ ಒಂದೆರಡು ಅಸೆಂಬ್ಲಿ ಚುನಾವಣೆ ಹೊರತುಪಡಿಸಿದರೆ, ಬಳಿಕ ಬಿಜೆಪಿ ಪಾರಮ್ಯದ ಕ್ಷೇತ್ರಗಳೇ ಅಧಿಕ. ಅಂತಹ ಕರಾವಳಿ ಜಿಲ್ಲೆಯ ಶಾಸಕರು ಈಗ ಸಚಿವ ಸ್ಥಾನದಿಂದ ವಂಚಿತಗೊಳ್ಳುವಂತಾಗಿದೆ. 2018ರ ಅಸೆಂಬ್ಲಿ ಚುನಾವಣೆ ಯಲ್ಲಿ ದ.ಕ. ಜಿಲ್ಲೆಯ ಎಂಟು ಕ್ಷೇತ್ರಗಳ ಪೈಕಿ ಏಳರಲ್ಲಿ ಬಿಜೆಪಿ ಶಾಸಕರು ಗೆದ್ದಿದ್ದರು. ಉಡುಪಿಯ 5 ಕ್ಷೇತ್ರಗಳಲ್ಲೂ ಬಿಜೆಪಿಯೇ ಅಧಿಪತ್ಯ ಹೊಂದಿದೆ. ಇನ್ನು ಉತ್ತರ ಕನ್ನಡದಲ್ಲಿ ಆರು ಕ್ಷೇತ್ರಗಳಲ್ಲಿ ನಾಲ್ಕರಲ್ಲಿ ಬಿಜೆಪಿ ಗೆದ್ದಿತ್ತು.

ಸಚಿವ ಸ್ಥಾನ ವಂಚಿತ ಅಂಗಾರ: ದ.ಕ.ಜಿಲ್ಲೆಯ ಮೀಸಲು ಕ್ಷೇತ್ರ ಸುಳ್ಯದಲ್ಲಿ ಆರು ಬಾರಿ ಶಾಸಕರಾದ ಅಂಗಾರ ಅವರಿಗೆ ಈ ಬಾರಿ ಸಚಿವ ಸ್ಥಾನ ಖಚಿತ ಎನ್ನುವ ಮಾತು ಕೇಳಿಬರುತ್ತಿತ್ತು. ಆದರೆ ಅವಕಾಶ ವಂಚಿತರಾಗಿದ್ದಾರೆ.

click me!