
ಮೋಹನ್ ಹಂಡ್ರಂಗಿ
ಬೆಂಗಳೂರು : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಎಲ್) ದಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ವು ವಿವಿಧ ಊರುಗಳಿಗೆ ಓಡಿಸುತ್ತಿರುವ ‘ಫ್ಲೈ ಬಸ್’ಗಳು ನಿರೀಕ್ಷೆಗೂ ಮೀರಿದ ಲಾಭ ತಂದುಕೊಡುತ್ತಿದ್ದು, ಉತ್ಸಾಹದಲ್ಲಿರುವ ನಿಗಮವು ಇನ್ನೂ ಹಲವು ನಗರಗಳಿಗೆ ಈ ಫ್ಲೈಬಸ್‌ಗಳನ್ನು ವಿಸ್ತರಿಸಲು ನಿರ್ಧರಿಸಿದೆ.
ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರನ್ನು ಗುರಿ ಯಾಗಿಸಿಕೊಂಡು ಕೆಎಸ್‌ಆರ್‌ಟಿಸಿಯು 2013ರ ಆಗಸ್ಟ್‌ನಲ್ಲಿ ಕೆಐಎಎಲ್-ಮೈಸೂರು ಮಾರ್ಗದಲ್ಲಿ ಫ್ಲೈ ಬಸ್ ಸೇವೆ ಆರಂಭಿಸಿತು. ಮೊದಲು ನಷ್ಟವಾದರೂ ಬಳಿಕ ಲಾಭ ಬರತೊಡಗಿತು. ಇದೀಗ ಈ ಬಸ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಪ್ರಸ್ತುತ ಮೈಸೂರಿಗೆ 7, ಮಡಿಕೇರಿಗೆ 2, ಕುಂದಾಪುರ ಮತ್ತು ಕೊಯಮತ್ತೂರು ಮಾರ್ಗದಲ್ಲಿ ತಲಾ 1ರಂತೆ ಒಟ್ಟು 11 ಫ್ಲೈ ಬಸ್ ಓಡಿಸಲಾಗುತ್ತಿದೆ. ಇದೀಗ ಕೆಐಎಎಲ್‌ನಿಂದ ತಿರುಪತಿ ಮತ್ತು ಕ್ಯಾಲಿಕಟ್ ಮಾರ್ಗದಲ್ಲಿ ಫ್ಲೈ ಬಸ್ ಸೇವೆಗೆ ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿಯು ಈ ಎರಡೂ ಮಾರ್ಗಗಳಲ್ಲಿ ಸೇವೆ ಆರಂಭಿಸಲು ಯೋಜನೆ ರೂಪಿಸಿದೆ.
ಪ್ರತಿ ಕಿ.ಮೀ.ಗೆ 35 ರು. ಲಾಭ: ನಿಗಮವು ಫ್ಲೈ ಬಸ್ ಸೇವೆಗೆ ಪ್ರತಿ ಕಿ.ಮೀ.ಗೆ 42.93 ರು. ವೆಚ್ಚ ಮಾಡುತ್ತಿದೆ. ಪ್ರಸ್ತುತ ಕೆಐಎಎಲ್-ಮೈಸೂರು ಮಾರ್ಗದಲ್ಲಿ ಪ್ರತಿ ಕಿ.ಮೀ. ಗೆ 77.91 ರು. ಆದಾಯ ಬರುತ್ತಿದೆ. ಅಂದರೆ, ವೆಚ್ಚ ಕಳೆದು ನಿಗಮಕ್ಕೆ ಪ್ರತಿ ಕಿ.ಮೀ.ಗೆ 34.98 ರು. ಲಾಭ ಬರುತ್ತಿದೆ. ಪ್ರಸ್ತುತ ಈ ಮಾರ್ಗದಲ್ಲಿ ಏಳು ಫ್ಲೈ ಬಸ್‌ಗಳು ಸಂಚರಿಸುತ್ತಿದ್ದು, 2017 ಏಪ್ರಿಲ್‌ನಿಂದ 2018ರ ಜನವರಿವರೆಗೆ 1,93,234 ಜನ ಪ್ರಯಾಣಿಸಿದ್ದಾರೆ.
ಅದರಿಂದ 13.83 ಕೋಟಿ ರು. ಆದಾಯ ಬಂದಿದೆ. ದೇಶದಲ್ಲಿಯೇ ಮಾದರಿಯಾದ ಫ್ಲೈ ಬಸ್ ಸೇವೆ ಆರಂಭವಾಗಿ ಐದನೇ ವರ್ಷಕ್ಕೆ ಕಾಲಿರಿಸಿದ್ದು, ವರ್ಷದಿಂದ ವರ್ಷಕ್ಕೆ ಆದಾಯ ಏರಿಕೆಯಾಗುತ್ತಿದೆ. ಈ ಬಸ್‌ಗಳು ಐಷಾರಾಮಿ ಬಸ್‌ಗಳಾಗಿದ್ದು, ಆರಾಮದಾಯಕ ಆಸನ, ವೈಫೈ ವ್ಯವಸ್ಥೆ, ಟಿ.ವಿ, ಅತ್ಯಾಧುನಿಕ ಶೌಚಾಲಯ ಇನ್ನಿತರ ಸೌಲಭ್ಯಗಳನ್ನು ಒಳಗೊಂಡಿದೆ. ದೇಶ-ವಿದೇಶಗಳಿಂದ ಕೆಐಎಎಲ್‌ಗೆ ಬರುವ ಪ್ರಯಾಣಿಕರು ಈ ಬಸ್‌ಗಳಲ್ಲಿ ಸುಖದ ಪ್ರಯಾಣ ಮಾಡು ತ್ತಾರೆ. ಖಾಸಗಿ ಟ್ಯಾಕ್ಸಿಗಳ ಪೈಪೋಟಿ ನಡುವೆಯೂ ಯಶಸ್ವಿಯಾಗಿ ಫ್ಲೈ ಬಸ್ ಸೇವೆ ಮುಂದುವರಿಸಲಾಗಿದೆ. ಕೆಐಎಎಲ್ ನಿಂದ ರಾಜ್ಯದ ಶಿವಮೊಗ್ಗ ಸೇರಿದಂತೆ ನೆರೆ ರಾಜ್ಯಗಳ ವಿವಿಧ ನಗರಗಳಿಗೆ ಫ್ಲೈ ಬಸ್ ಸೇವೆ ಆರಂಭಿಸುವಂತೆ ಬೇಡಿಕೆಯಿದೆ.
ಮುಂದಿನ ದಿನಗಳಲ್ಲಿ ಪರಿಶೀಲಿಸಿ ಸೇವೆ ನೀಡುವುದಾಗಿ ನಿಗಮದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ನಿಗಮವು ಫ್ಲೈ ಬಸ್ ಸೇವೆ ಆರಂಭಿಸುವುದಕ್ಕೂ ಮುನ್ನ ಖಾಸಗಿ ಸಂಸ್ಥೆಯಿಂದ ಸರ್ವೆ ಮಾಡಿಸಿತ್ತು. ಕೆಐಎಎಲ್‌ನಿಂದ ಪ್ರಯಾಣಿಕರು ಊರುಗಳಿಗೆ ತೆರಳಲು ಸೂಕ್ತ ಸಾರಿಗೆ ವ್ಯವಸ್ಥೆ ಇರಲಿಲ್ಲ.
ಮೈಸೂರು ಕಡೆಗೆ ಹೋಗುವವರು ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ, ಕುಂದಾಪುರ ಕಡೆಗೆ ಹೋಗುವವರು ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಬಂದೇ ಹೋಗಬೇಕಿತ್ತು. ಇದರಿಂದ ಪ್ರಯಾಣಿಕರಿಗೆ ಕಿರಿಕಿರಿ ಜೊತೆಗೆ ಸಮಯ ವ್ಯಯವಾಗುತ್ತಿತ್ತು. ಹಾಗಾಗಿ ಕೆಐಎಎಲ್‌ನಿಂದ ನೇರ ಸಂಪರ್ಕ ಕಲ್ಪಿಸಿದರೆ ಅನುಕೂಲವಾಗುವ ಹಿನ್ನೆಲೆಯಲ್ಲಿ ವಿವಿಧ ಹಂತಗಳಲ್ಲಿ ಫ್ಲೈ ಬಸ್ ಸೇವೆ ಆರಂಭಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.