ಜೆಟ್‌ ಏರ್‌ವೇಸ್‌ ಗಡಗಡ..! ಭಾರೀ ಸಂಕಷ್ಟ

By Web DeskFirst Published Jan 30, 2019, 8:25 AM IST
Highlights

ಖಾಸಗಿ ವಿಮಾನ ಯಾನ ಸೇವೆ ಒದಗಿಸುತ್ತಿರುವ ಜೆಟ್ ಏರ್ ವೇಸ್ ವಿಮಾನ ಸೇವೆಯೂ ಇದೀಗ ಗಡಗುಟ್ಟುತ್ತಿದೆ. ಇದಕ್ಕೆ ಕಾರಣ ಸಂಸ್ಥೆ ಸಾಲದ ಸುಳಿಯಲ್ಲಿ ಸಿಲುಕಿರುವುದು.

ಮುಂಬೈ: ಸಾಲದ ಸುಳಿಯಲ್ಲಿ ಸಿಕ್ಕಿರುವ ಖಾಸಗಿ ಸ್ವಾಮ್ಯದ ಜೆಟ್‌ ಏರ್‌ವೇಸ್‌ನ ಹಣಕಾಸು ಸ್ಥಿತಿ ಮತ್ತಷ್ಟುವಿಷಮಗೊಂಡಿದೆ. ವಿಮಾನಗಳ ಲೀಸ್‌ ಹಣ ಪಾವತಿ ಮಾಡದ ಹಿನ್ನೆಲೆಯಲ್ಲಿ ಮೂರು ಬೋಯಿಂಗ್‌ 737 ವಿಮಾನಗಳ ಹಾರಾಟವನ್ನು ಜೆಟ್‌ ಏರ್‌ವೇಸ್‌ ಮಂಗಳವಾರ ರದ್ದುಪಡಿಸಿದೆ. ಹೀಗಾಗಿ ಈ ವಿಮಾನಗಳು ನಡೆಸಬೇಕಿದ್ದ 20ಕ್ಕೂ ಹೆಚ್ಚು ಸಂಚಾರ ರದ್ದಾಗಿದ್ದು, ಪ್ರಯಾಣಿಕರು ಸಂಕಷ್ಟಎದುರಿಸಬೇಕಾಗಿ ಬಂದಿದೆ. ಇದರೊಂದಿಗೆ ಕಳೆದ 2 ದಿನಗಳಲ್ಲಿ ಜೆಟ್‌ ಏರ್‌ವೇಸ್‌ ಒಟ್ಟು 6 ವಿಮಾನಗಳ ಹಾರಾಟ ಸ್ಥಗಿತಗೊಳಿಸಿದಂತೆ ಆಗಿದೆ.

ವಿಜಯ್‌ ಮಲ್ಯ ಒಡೆತನದ ಕಿಂಗ್‌ಫಿಶರ್‌ ಏರ್‌ಲೈನ್ಸ್‌ ಕೂಡಾ ಇದೇ ರೀತಿ ಸಾಲದ ಸುಳಿಗೆ ಸಿಕ್ಕಿ ಮುಚ್ಚಿದ ಬೆನ್ನಲ್ಲೇ, ಮತ್ತೊಂದು ಖಾಸಗಿ ವಿಮಾನಯಾನ ಕಂಪನಿ ಕೂಡಾ ಅದೇ ದಾರಿ ಹಿಡಿದಿರುವುದು, ಜೆಟ್‌ಗೆ ಸಾಲ ನೀಡಿರುವ ಎಸ್‌ಬಿಐ ನೇತೃತ್ವದ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳನ್ನು ಆತಂಕದ ಮಡುವಿಗೆ ತಳ್ಳಿದೆ.

ಸಾಲದ ಸುಳಿ: ಕಚ್ಚಾತೈಲ ಬೆಲ ಏರಿಕೆ, ಮಾರುಕಟ್ಟೆಯಲ್ಲಿನ ಪೈಪೋಟಿಯ ಕಾರಣ, ನರೇಶ್‌ ಗೋಯಲ್‌ ಒಡೆತನದ ಜೆಟ್‌ ಏರ್‌ವೇಸ್‌ ಈಗಾಗಲೇ 8000 ಕೋಟಿ ರು.ಗೂ ಹೆಚ್ಚಿನ ಸಾಲದ ಸುಳಿಯಲ್ಲಿ ಸಿಕ್ಕಿದೆ. ಕಂಪನಿಯಲ್ಲಿ ಹೆಚ್ಚಿನ ಬಂಡವಾಳ ಹೂಡಲು, ಪಾಲುದಾರನಾದ ಎತಿಹಾದ್‌ ಏರ್‌ವೇಸ್‌ ಸಿದ್ಧವಿದೆಯಾದರೂ, ಅದು ಕೆಲವೊಂದು ಷರತ್ತುಗಳನ್ನು ಒಡ್ಡಿದೆ. ಆ ಪೈಕಿ, ನರೇಶ್‌ ಗೋಯಲ್‌, ಕಂಪನಿಯ ಮಾಲೀಕತ್ವ ಬಿಡಬೇಕೆಂಬುದು ಪ್ರಮುಖವಾದದು. ಆದರೆ ಇದಕ್ಕೆ ನರೇಶ್‌ ಗೋಯಲ್‌ ಒಪ್ಪುತ್ತಿಲ್ಲ. ಹೀಗಾಗಿ ಸಿಬ್ಬಂದಿಗೆ ಮಾಸಿಕ ವೇತನ ನೀಡದ ಪರಿಸ್ಥಿತಿಯನ್ನು ಹಲವು ತಿಂಗಳಿನಿಂದ ಎದುರಿಸುತ್ತಿರುವ ಜೆಟ್‌ ಏರ್‌ವೇಸ್‌ ಇದೀಗ, ಲೀಸ್‌ ಹಣವನ್ನೂ ಪಾವತಿ ಮಾಡದ ಸ್ಥಿತಿಗೆ ತಲುಪಿದೆ.

ಈ ನಡುವೆ ಕಂಪನಿಯ ಸಾಲವನ್ನೇ ಷೇರುಪಾಲಾಗಿ ಪರವರ್ತಿಸಲು ನಿರ್ಧರಿಸಿರುವ ಆಡಳಿತ ಮಂಡಳಿ, ಈ ಕುರಿತು ಒಪ್ಪಿಗೆ ಪಡೆಯಲು ಫೆ.21ಕ್ಕೆ ವಿಶೇಷ ಸಾಮಾನ್ಯ ಅಧಿವೇಶವನ್ನು ಕರೆದಿದೆ.

ಸದ್ಯ ಜೆಟ್‌ ಏರ್‌ವೇಸ್‌ನಲ್ಲಿ ನರೇಶ್‌ ಗೋಯಲ್‌ ಮತ್ತು ಅವರ ಕುಟುಂಬ ಶೇ.51ರಷ್ಟು ಪಾಲು ಹೊಂದಿದೆ. ದುಬೈ ಮೂಲದ ಎತಿಹಾದ್‌ ಶೇ.24ರಷ್ಟು ಪಾಲು ಹೊಂದಿದೆ. ಒಂದು ವೇಳೆ ಸಾಲವನ್ನೇ ಬಂಡವಾಳವಾಗಿ ಪರಿವರ್ತಿಸಲು ಸಾಮಾನ್ಯ ಸಭೆ ಒಪ್ಪಿದರೆ, ಗೋಯಲ್‌ ಪಾಲು ಶೇ.20ಕ್ಕಿಂತ ಕೆಳಗಿಳಿಯಲಿದೆ, ಎತಿಹಾದ್‌ ಪಾಲು ಶೇ.40 ದಾಟಲಿದೆ. ಇನ್ನು ಎಸ್‌ಬಿಐ ನೇತೃತ್ವದ ಬ್ಯಾಂಕ್‌ಗಳು ಶೇ.30ರಷ್ಟು ಪಾಲು ಹೊಂದಲಿವೆ.

click me!