ಕೊನೆಗೂ 11,000 ಪೌರ ಕಾರ್ಮಿಕರು ಕಾಯಂ

By Suvarna Web DeskFirst Published Jun 24, 2017, 1:56 PM IST
Highlights

ನಾನೊಬ್ಬ

ಪೌರ ಕಾರ್ಮಿಕನ ಮಗ ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ. ಅದರಲ್ಲೂ ಪೌರ ಕಾರ್ಮಿಕರ ಮಗನಾಗಿ ಪೌರಕಾರ್ಮಿಕರ ಸಂಘದ ಅಧ್ಯಕ್ಷನಾಗಿ ಹೋರಾಡಿದ್ದೇನೆ. ಈಗ ಅವರ ಸೇವೆ ಕಾಯಂ ಮಾಡಿಸಿದ್ದೇನೆ. ಇದರಲ್ಲಿ ಎಲ್ಲರಿಗಿಂತ ಹೆಚ್ಚಿನ ಖುಷಿ ನನಗಾಗಿದೆ. ನನ್ನ 40 ವರ್ಷಗಳಿಂದ ಹೋರಾಟಕ್ಕೆ ಈಗ ಫಲ ಸಿಕ್ಕಿದೆ.
ಎಚ್‌.ಆಂಜನೇಯ ಸಮಾಜ ಕಲ್ಯಾಣ ಸಚಿವ

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಮಹಾನಗರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗುತ್ತಿಗೆ ಆಧಾರಿತ 11,000 ಪೌರ ಕಾರ್ಮಿ ಕರನ್ನು ಕಾಯಂ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅನೇಕ ವರ್ಷಗಳಿಂದ ಗುತ್ತಿಗೆ ಪೌರ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದು, ಅವರನ್ನು ಹಂತಹಂತವಾಗಿ ಕಾಯಂ ಮಾಡಲು ಸರ್ಕಾರ ತೀರ್ಮಾನಿಸಿದೆ. ಈ ಮೂಲಕ ಪೌರ ಕಾರ್ಮಿಕರ ದಶಕಗಳ ಹಿಂದಿನ ಬೇಡಿಕೆ ಈಡೇರಿಕೆಗೆ ಕಾಲ ಕೂಡಿ ಬಂದಂತಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 20,000ಕ್ಕೂ ಹೆಚ್ಚಿನ ಗುತ್ತಿಗೆ ಪೌರ ಕಾರ್ಮಿಕರಿದ್ದು, 5,000 ಹುದ್ದೆಗಳು ಖಾಲಿ ಇವೆ. ಇದೇ ರೀತಿ ರಾಜ್ಯದ ಇತರ ನಗರಗಳಲ್ಲಿ 10 ಸಾವಿರಕ್ಕೂ ಹೆಚ್ಚಿನ ಗುತ್ತಿಗೆ ಕಾರ್ಮಿಕರಿದ್ದಾರೆ. ಅಲ್ಲಿಯೂ 6,000 ಹುದ್ದೆಗಳು ಖಾಲಿಯಾಗಿವೆ. ಸರ್ಕಾರ ಈಗ ಗುತ್ತಿಗೆ ಕಾರ್ಮಿಕರನ್ನು ಕಾಯಂ ಮಾಡುವ ಮೂಲಕ ಖಾಲಿ ಇರುವ 11,000 ಹುದ್ದೆಗಳನ್ನು ಭರ್ತಿ ಮಾಡಲಿದೆ. ಆನಂತರ ಉಳಿದ ಗುತ್ತಿಗೆ ಕಾರ್ಮಿಕರನ್ನೂ ಕಾಯಂ ಮಾಡುವ ಮೂಲಕ ಅಗತ್ಯಕ್ಕೆ ತಕ್ಕಂತೆ ನೇಮಕ ಮಾಡಿಕೊಳ್ಳಲಾ ಗುತ್ತದೆ. ಸೇವೆ ಕಾಯಂಗೆ ಆಗ್ರಹಿಸಿ ಗುತ್ತಿಗೆ ಪೌರ ಕಾರ್ಮಿಕರು ಕಳೆದ 10 ದಿನಗಳಿಂದ ಹೋರಾಟ ನಡೆಸುತ್ತಿದ್ದರು. ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಪ್ರತಿಭಟನಾಕಾರರನ್ನು ಭೇಟಿ ಮಾಡಿ ಕಾಯಂ ಮಾಡುವ ಭರವಸೆ ನೀಡಿದ್ದರಿಂದ ಪ್ರತಿಭಟನೆ ಅಂತ್ಯವಾಗಿತ್ತು.

ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಚಿವರಾದ ಆಂಜನೇಯ, ಕೆ.ಜೆ.ಜಾರ್ಜ್, ರೋಷನ್‌ ಬೇಗ, ಈಶ್ವರ್‌ ಖಂಡ್ರೆ ಹಾಗೂ ಅಧಿಕಾರಿಗಳ ಸಭೆ ಶುಕ್ರವಾರ ವಿಧಾನಸೌಧದಲ್ಲಿ ನಡೆಯಿತು. ಸಭೆಯಲ್ಲಿ ಪೌರ ಕಾರ್ಮಿಕರ ಸೇವೆ ಕಾಯಂ ಮಾಡುವ ಬಗ್ಗೆ ಸುದೀರ್ಘ ಚರ್ಚೆ ನಡೆಸಿ ಅಂತಿಮವಾಗಿ ಆರಂಭಿಕ 11 ಸಾವಿರ ಮಂದಿ ಕಾಯಂ ಮಾಡಲು ತೀರ್ಮಾನಿಸಲಾಯಿತು.

ಮುಖ್ಯಮಂತ್ರಿ ಹೇಳಿದ್ದೇನು?: ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಪೌರ ಕಾರ್ಮಿಕರ ಸೇವೆ ಕಾಯಂ ಮಾಡಲು ತೀರ್ಮಾನಿಸಲಾ ಗಿದೆ. ಸದ್ಯಕ್ಕೆ 11 ಸಾವಿರ ಕಾರ್ಮಿಕರನ್ನು ಕಾಯಂ ಮಾಡಿಕೊಳ್ಳಲಾಗುವುದು. ನಂತರ ಹಂತಹಂತವಾಗಿ ಕಾಯಂ ಪ್ರಕ್ರಿಯೆ ನಡೆಸಲಾಗುವುದು ಎಂದರು.

ಪೌರಕಾರ್ಮಿಕರ ಸಮಸ್ಯೆ ಹಿನ್ನೆಲೆ: ರಾಜ್ಯದಲ್ಲಿ ಪೌರ ಕಾರ್ಮಿಕರ ನೇಮಕ ನಡೆದು ದಶಕಗಳೇ ಆಗಿತ್ತು. 2010ರಲ್ಲಿ ಬಿಬಿಎಂಪಿ 4,000 ಹುದ್ದೆ ಭರ್ತಿಗೆ ಆದೇಶ ಹೊರಡಿಸಿತ್ತು. ಆದರೆ ಆಗಿರಲಿಲ್ಲ. 2014ರಲ್ಲಿ ನೇರ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿತ್ತು. ಆದರೂ ಆಗಿರಲಿಲ್ಲ. 2015ರಲ್ಲಿ ಈ ಬಗ್ಗೆ ಹೈಕೋರ್ಟ್‌ ಆದೇಶ ನೀಡಿ ಗುತ್ತಿಗೆ ಪೌರಕಾರ್ಮಿಕರ ಕಾಯಂಗೆ ಸೂಚಿಸಿತ್ತು. ಇದನ್ನಾಧರಿಸಿ ಇರುವ ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸಲು ಸಚಿವ ಸಂಪುಟ ನಿರ್ಧರಿಸಿತ್ತು. ಆದರೆ ಆಗಿರಲಿಲ್ಲ.

click me!