
ಬೆಂಗಳೂರು(ಅ.16): ಸಾಲಬಾಧೆಯಿಂದ ಬೇಸತ್ತ ರೈತರೊಬ್ಬರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹೆಸರಿಗೆ ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ನಾಗಣಾಪುರ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಈರಪ್ಪ ಗುರಪ್ಪ ಅಂಗಡಿ(57) ಆತ್ಮಹತ್ಯೆ ಮಾಡಿಕೊಂಡ ರೈತ. ಭಾನುವಾರ ತಮ್ಮ ಜಮೀನಿನಲ್ಲೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಶರ್ಟ್ ಜೇಬಿನಲ್ಲಿ ಪ್ರಧಾನಮಂತ್ರಿಗಳ ಹೆಸರು, ಕಚೇರಿ ವಿಳಾಸಕ್ಕೆ ಬರೆದಿರುವ ಪತ್ರ ದೊರೆತಿದ್ದು, ಅದನ್ನು ಪ್ರಧಾನಿಗಳಿಗೆ ಕಳುಹಿಸಿರುವ ಬಗ್ಗೆ ನಿಖರ ಮಾಹಿತಿ ದೊರೆತಿಲ್ಲ.
ಪತ್ರದಲ್ಲೇನಿದೆ?:
‘ನಾನು 2015ರ ಡಿ.೫ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ನನ್ನ ಸಾಲದ ಮೇಲಿನ ಬಡ್ಡಿಯನ್ನಾದರೂ ಮನ್ನಾ ಮಾಡಿಸಿ ಎಂದು ಕೋರಿದ್ದೆ. ಜಿಲ್ಲಾಧಿಕಾರಿ, ಬ್ಯಾಂಕ್ ಮ್ಯಾನೇಜರ್ ಅವರಿಗೂ ಪತ್ರ ಬರೆದಿದ್ದೆ. ಆದರೆ, ಎಲ್ಲ ಕಚೇರಿ ಗಳಲ್ಲೂ ತಿರುಗಾಡಿಸಿ ಬಳಿಕ ಬಡ್ಡಿಮನ್ನಾ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ನನ್ನ ಜಮೀನಿನ ಉತಾರದ ಮೇಲೂ ಬ್ಯಾಂಕ್ ಸಾಲದ ಬೋಜಾ ಕೂಡಿಸಲಾಗಿದೆ. ಈ ಬಗ್ಗೆ ಪರಿಶೀಲಿಸಿ ದಯವಿಟ್ಟು ನ್ಯಾಯ ಒದಗಿಸಿಕೊಡಬೇಕು ಎಂದು ರೈತ ಪತ್ರದಲ್ಲಿ ತಿಳಿಸಿದ್ದಾನೆ.
ಮತ್ತೊಬ್ಬ ರೈತ ಆತ್ಮಹತ್ಯೆ:
ಕಲಬುರಗಿ ಜಿಲ್ಲೆಯ ಪಾಣೆಗಾಂವ್ ಗ್ರಾಮದಲ್ಲಿ ಭಾನುವಾರ ಮತ್ತೊಬ್ಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗ್ರಾಮದ ರೇವಣಸಿದ್ದಪ್ಪ(37) ಮೃತ ರೈತ. ಇವರು 6 ಲಕ್ಷ ಸಾಲ ಮಾಡಿದ್ದು, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಸಾಲದ ಶೂಲಕ್ಕೆ ಬಲಿಯಾದ ರೈತರ ಸಂಖ್ಯೆ 464ಕ್ಕೆ ಏರಿದ್ದು, ರಾಜ್ಯಸರ್ಕಾರ ಸಾಲಮನ್ನಾ ಮಾಡಿದ ಬಳಿಕ 157 ಮಂದಿ ಜೀವಕಳೆದುಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.