
ವಿಜಯಪುರ: ತಮ್ಮ ಸರ್ಕಾರ ರೈತರ ಸಾಲ ಮನ್ನಾ ಮಾಡಬೇಕಾಗಿದ್ದರಿಂದ ನೀರಾವರಿಗೆ ಈ ಹಿಂದಿನ ಸರ್ಕಾರ ನೀಡಿದಷ್ಟು ಅನುದಾನ ಸಿಗುವುದು ಕಷ್ಟ. ಪ್ರಸಕ್ತ ಆರ್ಥಿಕ ವರ್ಷದ ಹಣಕಾಸು ಸ್ಥಿತಿಗತಿ ಆಧರಿಸಿ ನೀರಾವರಿ ಇಲಾಖೆಗೆ ಅನುದಾನ ಲಭ್ಯವಾಗಲಿದೆ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಹೇಳಿದ್ದಾರೆ.
ನೀರಾವರಿಗೆ 1.5 ಲಕ್ಷ ಕೋಟಿ ರು. ನೀಡುವುದಾಗಿ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ -ಜೆಡಿಎಸ್ ಭರವಸೆ ನೀಡಿದ್ದವು. ಈ ಹಿನ್ನೆಲೆಯಲ್ಲಿ ಡಿಕೆಶಿ ಹೇಳಿಕೆಗೆ ಮಹತ್ವ ಬಂದಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯ ಮುಳವಾಡ ಏತ ನೀರಾವರಿ ಯೋಜನೆಯ ಪರಿಶೀಲನೆಯ ಸಂದರ್ಭದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ರೈತರ ಸಾಲ ಮನ್ನಾ, ನೀರಾವರಿಗೆ ಜಮೀನು ಕಳೆದುಕೊಂಡ ರೈತರಿಗೆ ಏಕರೂಪದ ಪರಿಹಾರ, ಹೊಸ ಭೂ ಕಾಯ್ದೆ ಪ್ರಕಾರ ಬೆಲೆ ನಿಗದಿ ಸೇರಿದಂತೆ ಸರ್ಕಾರದ ಮುಂದೆ ಸಾಕಷ್ಟು ಸವಾಲುಗಳಿವೆ. ಹೀಗಾಗಿ ಯಾವುದನ್ನೂ ಭರವಸೆ ನೀಡಲಾರೆ. ಮುಳವಾಡ ಏತ ನೀರಾವರಿ ಯೋಜನೆಗೆ ಅಂದಾಜು 4600 ಕೋಟಿ ರು. ಖರ್ಚು ಮಾಡಿ, ಅನುಷ್ಠಾನಗೊಳಿಸಲಾಗುತ್ತಿದ್ದು, 2,27, 966 ಹೆಕ್ಟೇರ್ ಜಮೀನು ನೀರಾವರಿಗೆ ಒಳಪಡಲಿದೆ ಎಂದರು.
ಪುನರ್‌ವಸತಿ ಕಾರ್ಯ ಬಗ್ಗೆ ಅತೃಪ್ತಿ: ಇದೇ ವೇಳೆ ಕೃಷ್ಣಾ ಮೇಲ್ದಂಡೆ ಯೋಜನೆಗೆ ಭೂಮಿ ಕಳೆದುಕೊಂಡ ರೈತರಿಗೆ ಪುನರ್ವಸತಿ ಕಾರ್ಯ ಸಮರ್ಪಕವಾಗಿ ಆಗಿಲ್ಲ ಎಂದು ಡಿ.ಕೆ.ಶಿವಕುಮಾರ್ ಅತೃಪ್ತಿ ವ್ಯಕ್ತಪಡಿಸಿದರು. ಈ ಸಂಬಂಧ ಸದ್ಯದಲ್ಲೇ ತಂಡ ಕಳುಹಿಸಿ ಪುನರ್ವಸತಿ ಕೇಂದ್ರಗಳ ಸ್ಥಿತಿಗತಿ ಅಧ್ಯಯನ ನಡೆಸಲಾಗುವುದು. ಪುನರ್ವಸತಿ ಕೇಂದ್ರ ಗಳಲ್ಲಿರುವ ಮಕ್ಕಳ ವಿದ್ಯಾಭ್ಯಾಸ, ಜೀವನ ಮಟ್ಟ ಬಗ್ಗೆಯೂ ಅಧ್ಯಯನ ಮಾಡಿ 2 ತಿಂಗಳಲ್ಲಿ ವರದಿ ಸಲ್ಲಿಸಲು ತಂಡಕ್ಕೆ ಸೂಚಿಸಲಾಗುವುದು ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.