ಸಿಎಂಗೆ ಪತ್ರ ಬರೆದಿಟ್ಟು ಕುಟುಂಬ ಸದಸ್ಯರ ಸಾಮೂಹಿಕ ಆತ್ಮಹತ್ಯೆ

By Web DeskFirst Published Sep 23, 2018, 7:36 AM IST
Highlights

ಒಂದೇ ರೈತ ಕುಟುಂಬದ ನಾಲ್ವರು ಸದಸ್ಯರು ಮುಖ್ಯಮಂತ್ರಿಗೆ ಪತ್ರ ಬರೆದಿಟ್ಟು ಸಾಮೂಹಿಕ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಮಂಡ್ಯ ಜಿಲ್ಲೆಯ ಮೇಲುಕೋಟೆ ತಾಲೂಕಿನಲ್ಲಿ ಶನಿವಾರ ನಡೆದಿದೆ. 

ಮಂಡ್ಯ/ಮೇಲುಕೋಟೆ :  ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಬ್ಯಾಂಕ್‌, ಖಾಸಗಿ, ಲೇವಾದೇವಿಗಾರರ ಸಾಲಗಳೂ ಸೇರಿದಂತೆ ರೈತರ ಎಲ್ಲಾ ಸಾಲಮನ್ನಾ ಭರವಸೆ ನೀಡಿದ್ದರೂ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಮುಂದುವರಿದಿದೆ.

ಖಾಸಗಿಯಾಗಿ ಸಾಲ ನೀಡಿದವರ ಕಾಟ ತಾಳಲಾರದೆ ಒಂದೇ ರೈತ ಕುಟುಂಬದ ನಾಲ್ವರು ಸದಸ್ಯರು ಮುಖ್ಯಮಂತ್ರಿಗೆ ಪತ್ರ ಬರೆದಿಟ್ಟು ಸಾಮೂಹಿಕ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಮಂಡ್ಯ ಜಿಲ್ಲೆಯ ಮೇಲುಕೋಟೆ ತಾಲೂಕಿನಲ್ಲಿ ಶನಿವಾರ ನಡೆದಿದೆ. ಇದೇವೇಳೆ ನಮ್ಮ ಸಾವಿಗೆ ವ್ಯವಸಾಯವೇ ಕಾರಣವಾಗಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಸಾಲದಿಂದ ಋುಣಮುಕ್ತರನ್ನಾಗಿ ಮಾಡುವಂತೆ ಮನವಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ ಎಂದು ರೈತ ಕುಟುಂಬ ಬರೆದಿರುವ ಡೆತ್‌ನೋಟ್‌ ಇದೀಗ ವೈರಲ್‌ ಆಗಿದೆ.

ಸುಂಕಾತೊಣ್ಣೂರು ಗ್ರಾಮದ ರೈತ ಎಸ್‌.ಕೆ.ನಂದೀಶ್‌(40), ಪತ್ನಿ ಕೋಮಲ(32), ಪುತ್ರಿ ಚಂದನ(13), ಪುತ್ರ ಮನೋಜ್(11) ಶುಕ್ರವಾರ ರಾತ್ರಿ 9 ಗಂಟೆಯ ವೇಳೆಗೆ ಜಮೀನಿನ ಬಳಿ ತೆರಳಿ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿವರು. ಜಮೀನಿನ ಪಕ್ಕದಲ್ಲೇ ಮನೆ ಕಟ್ಟಿಕೊಂಡಿದ್ದ ನಂದೀಶ್‌ ಅವರ ಪುತ್ರಿ ಚಂದನ 7ನೇ ತರಗತಿ ಹಾಗೂ ಮನೋಜ್‌ 6ನೇ ತರಗತಿಯಲ್ಲಿ ಓದುತ್ತಿದ್ದರು.

3 ಎಕರೆ ಜಮೀನಿನಲ್ಲಿ ಕಬ್ಬು ಮತ್ತು ರೇಶ್ಮೆ ಕೃಷಿ ಮಾಡುತ್ತಿದ್ದ ನಂದೀಶ್‌ ಅವರು ಕೃಷಿಗೆಂದು ಸುಂಕಾತೊಣ್ಣೂರು ಕಾವೇರಿ ಗ್ರಾಮೀಣ ಬ್ಯಾಂಕಿನಲ್ಲಿ 4.50 ಲಕ್ಷ ರು, ಖಾಸಗಿಯಾಗಿ .6 ಲಕ್ಷ ಕೈಸಾಲ ಸೇರಿದಂತೆ .10 ಲಕ್ಷ ಸಾಲ ಮಾಡಿದ್ದರು. ಅಷ್ಟೇ ಅಲ್ಲದೇ ವಿಜಯಬ್ಯಾಂಕ್‌ನ ಚಿಕ್ಕಾಡೆ ಶಾಖೆಯಲ್ಲೂ ಕುಟುಂಬದ ಚಿನ್ನಾಭರಣ ಅಡಮಾನವಿಟ್ಟು ಸಾಲ ಮಾಡಿ ಕೊಂಡಿದ್ದರು.

ಸಾಲದ ಋುಣ ಪರಿಹಾರಕ್ಕಾಗಿ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೂ ಎರಡು ಭಾರಿ ಮನವಿ ಮಾಡಿ ಬಂದಿದ್ದರು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ತೀವ್ರವಾಗಿ ಮನನೊಂದಿದ್ದ ನಂದೀಶ್‌ ಅವರಿಗೆ ಸಾಲಕಾಟ ಹೆಚ್ಚಾದ ಕಾರಣ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿರಬಹುದು ಎಂದು ಅವರ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಮೇಲುಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಡೆತ್‌ನೋಟ್‌ ಒಕ್ಕಣೆ ಹೀಗಿದೆ

ನಾವೆಲ್ಲವೂ ಆತ್ಮ ಹತ್ಯೆ ಮಾಡಿಕೊಳ್ಳಲು ಕೃಷಿ ಜೀವನವೇ ಕಾರಣವಾಗಿದೆ. ನಮ್ಮ ಸಾವಿಗೆ ವ್ಯವಸಾಯವೇ ಕಾರಣ. ಬೇರೆ ಯಾರೂ ಕಾರಣವಲ್ಲ. ಸಾಲಬಾಧೆಯಿಂದ ಬೇಸತ್ತಿದ್ದು, ನೆರವಿಗೆ ಬರುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಮನವಿ ಮಾಡಲಾಗಿತ್ತು. ಸಕಾಲಕ್ಕೆ ಸರ್ಕಾರದ ನೆರವು ದೊರೆತಿದ್ದರೆ ನಾವು ಹೇಡಿಗಳಂತೆ ಸಾಯುತ್ತಿರಲಿಲ್ಲ. ಆದರೆ ಸತತ ಪ್ರಯತ್ನದ ನಂತರ ಸಾಲಬಾಧೆ ಪರಿಹರಿಸಿಕೊಳ್ಳಲು ಸಾಧ್ಯವಾಗದ ಕಾರಣ ಕೊನೆಯ ನಿರ್ಧಾರ ಕೈಗೊಂಡಿದ್ದೇವೆ. ನಮ್ಮೆಲ್ಲರ ಶವಗಳನ್ನು ಯಾರೂ ಮುಟ್ಟದ ಹಾಗೆ ಕಾರ್ಪೊರೇಷನ್‌ಗೆ ಒಪ್ಪಿಸಿ ಬಿಡಿ ಪ್ಲೀಸ್‌. ಇದು ನಮ್ಮ ಕೊನೆಯಾಸೆ.

- ಎಸ್‌.ಕೆ.ನಂದೀಶ್‌, ಕೋಮಲ, ಚಂದನ, ಮನೋಜ್‌

ಸ್ವಲ್ಪ ಸಮಯಾವಕಾಶ ಕೊಡಿ ಎಂದು ಕೇಳಿದ್ದೆ: ಎಚ್‌ಡಿಕೆ

ಶೃಂಗೇರಿ: ಮೇಲುಕೋಟೆಯಲ್ಲಿ ಒಂದೇ ರೈತ ಕುಟುಂಬದ ನಾಲ್ವರು ಸಾಮೂಹಿಕ ಆತ್ಮಹತ್ಯೆಗೆ ಶರಣಾಗಿರುವ ಘಟನೆಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಿಷಾದ ವ್ಯಕ್ತಪಡಿಸಿದ್ದಾರೆ. ಅವರದ್ದು ಕೌಟುಂಬಿಕ ಸಮಸ್ಯೆಯಾಗಿದ್ದು ಈ ರೀತಿ ನಿರ್ಧಾರ ತೆಗೆದುಕೊಳ್ಳಬಾರದಿತ್ತು. ಅವರು ಒಮ್ಮೆ ನನ್ನ ಬಳಿ ಬಂದಿದ್ದರು. ಈಗತಾನೇ ಸಿಎಂ ಆಗಿದ್ದೇನೆ. ಏನೇ ಸಮಸ್ಯೆ ಇದ್ದರೂ ಬಗೆಹರಿಸುತ್ತೇನೆ. ಸ್ವಲ್ವ ಸಮಯಾವಕಾಶ ಕೊಡಿ ಎಂದು ಹೇಳಿ ಕಳುಹಿಸಿದ್ದೆ. ಆದರೆ ಆತ ದುಡುಕಿದ್ದಾನೆ ಎಂದು ತಿಳಿಸಿದ್ದಾರೆ. ಶನಿವಾರ ಶೃಂಗೇರಿ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಕರಣದ ಬಗ್ಗೆ ಶಾಸಕ ಪುಟ್ಟರಾಜು ಅವರಿಂದ ಈಗಾಗಲೇ ಮಾಹಿತಿ ಪಡೆದಿದ್ದೇನೆ. ಶಾರದಾಂಬೆಯ ಸನ್ನಿಧಿಯಲ್ಲಿ ನಿಂತು ಹೇಳ್ತಾ ಇದ್ದೇನೆ. ರೈತರು ಯಾವುದೇ ಸಮಸ್ಯೆ ಇದ್ದರೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ. ಈ ರೀತಿ ಆತ್ಮಹತ್ಯೆ ಮಾಡುವ ಮೂಲಕ ನನ್ನ ಮನಸ್ಸಿಗೆ ನೋವು ಮಾಡಬೇಡಿ ಎಂದರು.

ಸಂಬಂಧಿಕರಿಂದ ಪ್ರತಿಭಟನೆ

ಸಾಮೂಹಿಕ ಆತ್ಮಹತ್ಯೆಗೆ ಶರಣಾದ ನಾಲ್ವರ ಕುಟುಂಬದವರಿಗೆ ಸ್ಥಳದಲ್ಲೇ ಪರಿಹಾರದ ಚೆಕ್‌ ನೀಡುವಂತೆ ಒತ್ತಾಯಿಸಿ ಕುಟುಂಬಸ್ಥರು, ಸಂಬಂಧಿಕರು ಪ್ರತಿಭಟನೆ ನಡೆಸಿದರು. ತಾಲೂಕು ಆಸ್ಪತ್ರೆಯ ಮುಂಭಾಗದ ಡಾ.ರಾಜಕುಮಾರ್‌ವೃತ್ತದಲ್ಲಿ ಶ್ರೀರಂಗಪಟ್ಟಣ-ಜೇವರ್ಗಿ ಮುಖ್ಯರಸ್ತೆಯಲ್ಲಿ ವಾಹನಗಳನ್ನು ತಡೆದು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಲಾಯಿತು. ತಹಸೀಲ್ದಾರ್‌ ಭರವಸೆ ನೀಡಿದ ನಂತರ ಪ್ರತಿಭಟನೆ ವಾಪಸು ಪಡೆಯಲಾಯಿತು.

click me!