ಬಿಜೆಪಿ ಎಂಎಲ್'ಸಿಗಳ ಸಭೆಗೆ ಈಶ್ವರಪ್ಪಗಿಲ್ಲ ಆಹ್ವಾನ; ವಿಪಕ್ಷ ಸ್ಥಾನದಿಂದ ಈಶ್ವರಪ್ಪಗೆ ಕೊಕ್?

By Suvarna Web DeskFirst Published Jan 12, 2017, 7:22 AM IST
Highlights

ಬಿಎಸ್ ಯಡಿಯೂರಪ್ಪನವರು ರಾಯಣ್ಣ ಬ್ರಿಗೇಡ್ ವಿರುದ್ಧ ಮತ್ತೊಮ್ಮೆ ಕಠಿಣ ಶಬ್ದಗಳನ್ನು ಪ್ರಯೋಗಿಸಿದ್ದಾರೆ. ಬ್ರಿಗೇಡ್'ನ ಚಟುವಟಿಕೆಯಲ್ಲಿ ಪಾಲ್ಗೊಂಡವರಿಗೆ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು(ಜ. 12): ಬಿಎಸ್'ವೈ ವರ್ಸಸ್ ಈಶ್ವರಪ್ಪ ಸಮರ ನಿರ್ಣಾಯಕ ಹಂತ ಮುಟ್ಟುತ್ತಿದೆ. ಮಾಜಿ ಮೇಯರ್ ವೆಂಕಟೇಶ್'ಮೂರ್ತಿ ಅವರನ್ನು ಬಿಜೆಪಿಯಿಂದ ಅಮಾನತು ಮಾಡಿದ ಕ್ರಮವು ಈಶ್ವರಪ್ಪಗೆ ಯಾವುದೇ ಪರಿಣಾಮ ಬೀರದ ಹಿನ್ನೆಲೆಯಲ್ಲಿ ಈಗ ಬಿಎಸ್'ವೈ ಹೊಸ ತಂತ್ರಕ್ಕೆ ಮೊರೆಹೋಗಿದ್ದಾರೆ. ಈಶ್ವರಪ್ಪನವರನ್ನು ವಿಪಕ್ಷ ಸ್ಥಾನದಿಂದಲೇ ಇಳಿಸಲು ಬಿಎಸ್'ವೈ ಯೋಜನೆ ಹಾಕಿದ್ದಾರೆನ್ನಲಾಗಿದೆ. ಈ ಸುದ್ದಿಗೆ ಪೂರಕವೆಂಬಂತೆ, ಇಂದು ಸಂಜೆ ನಡೆಯಲಿರುವ ಬಿಜೆಪಿ ಎಂಎಲ್'ಸಿಗಳ ಸಭೆಗೆ ಕೆಎಸ್ ಈಶ್ವರಪ್ಪನವರಿಗೆ ಆಹ್ವಾನವನ್ನೇ ನೀಡಲಾಗಿಲ್ಲ. ಈಶ್ವರಪ್ಪ ಅನುಪಸ್ಥಿತಿಯಲ್ಲಿ ಬಿಎಸ್'ವೈ ಈ ಸಭೆ ಕರೆದಿದ್ದಾರೆ.

ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ಹೆಸರಿನಲ್ಲಿ ವಿಧಾನಪರಿಷತ್ ಸದಸ್ಯರ ಸಭೆಯನ್ನು ಅಧಿಕೃತವಾಗಿ ಕರೆಯಲಾಗಿದೆ. 25 ಬಿಜೆಪಿ ಎಂಎಲ್'ಸಿಗಳ ಪೈಕಿ ಈಶ್ವರಪ್ಪ ಹೊರತುಪಡಿಸಿ ಉಳಿದವರೆಲ್ಲರಿಗೂ ಸಭೆಗೆ ಆಹ್ವಾನ ನೀಡಲಾಗಿದೆ. ಇಂದು ಸಂಜೆ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆಯಲಿರುವ ಈ ಸಭೆಯಲ್ಲಿ ಈಶ್ವರಪ್ಪನವರನ್ನು ವಿಪಕ್ಷ ಸ್ಥಾನದಿಂದ ಕೆಳಗಿಳಿಸುವ ಕುರಿತು ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಬಿಜೆಪಿ ಮೂಲಗಳು ಹೇಳುತ್ತಿವೆ.

ಇದೇ ವೇಳೆ, ಬಿಎಸ್ ಯಡಿಯೂರಪ್ಪನವರು ರಾಯಣ್ಣ ಬ್ರಿಗೇಡ್ ವಿರುದ್ಧ ಮತ್ತೊಮ್ಮೆ ಕಠಿಣ ಶಬ್ದಗಳನ್ನು ಪ್ರಯೋಗಿಸಿದ್ದಾರೆ. ಬ್ರಿಗೇಡ್'ನ ಚಟುವಟಿಕೆಯಲ್ಲಿ ಪಾಲ್ಗೊಂಡವರಿಗೆ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಭಾರತೀಯ ಜನತಾ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾರೂ ಬ್ರಿಗೇಡ್'ನೊಂದಿಗೆ ಜೋಡಿಸಿಕೊಳ್ಳಬಾರದು ಎಂದು ಬಿಎಸ್'ವೈ ಆಗ್ರಹಿಸಿದ್ದಾರೆ. ಮೊನ್ನೆಯಷ್ಟೇ, ರಾಯಣ್ಣ ಬ್ರಿಗೇಡ್'ನ ಪ್ರಮುಖ ಭಾಗವಾಗಿರುವ ವೆಂಕಟೇಶ್'ಮೂರ್ತಿಯವರನ್ನು ಪಕ್ಷದಿಂದ ಅಮಾನತುಗೊಳಿಸಿ, ಈಶ್ವರಪ್ಪಗೆ ಪರೋಕ್ಷ ಎಚ್ಚರಿಕೆ ನೀಡಲಾಗಿತ್ತು.

click me!