ಕಾಂಗ್ರೆಸ್ ಮುಖಂಡ ಚಿದಂಬರಂ ಎದುರಾಯ್ತು ಸಂಕಷ್ಟ

By Web DeskFirst Published Oct 26, 2018, 7:25 AM IST
Highlights

ಕಾಂಗ್ರೆಸ್ಸಿನ ಪ್ರಭಾವಿ ನಾಯಕ ಹಾಗೂ ದೇಶದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರ ಪುತ್ರನ ನಿದ್ರೆಗೆಡಿಸಿದ್ದ ಜಾರಿ ನಿರ್ದೇಶನಾಲಯ ಇದೀಗ ಏರ್‌ಸೆಲ್‌- ಮ್ಯಾಕ್ಸಿಸ್‌ ಹಗರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಆರೋಪ ಪಟ್ಟಿಸಲ್ಲಿಕೆ ಮಾಡಿದೆ.

ನವದೆಹಲಿ :  ಕಾಂಗ್ರೆಸ್ಸಿನ ಪ್ರಭಾವಿ ನಾಯಕ ಹಾಗೂ ದೇಶದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರ ಪುತ್ರನ ನಿದ್ರೆಗೆಡಿಸಿದ್ದ ಜಾರಿ ನಿರ್ದೇಶನಾಲಯ ಇದೀಗ ಏರ್‌ಸೆಲ್‌- ಮ್ಯಾಕ್ಸಿಸ್‌ ಹಗರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಆರೋಪಪಟ್ಟಿಸಲ್ಲಿಕೆ ಮಾಡಿದೆ. ಅದರಲ್ಲಿ ಚಿದಂಬರಂ ಅವರನ್ನೇ ಮೊದಲ ಆರೋಪಿಯನ್ನಾಗಿಸಿದೆ. ಏರ್‌ಸೆಲ್‌-ಮ್ಯಾಕ್ಸಿಸ್‌ ಕಂಪನಿಗೆ ಸಂಬಂಧಿಸಿದ ಹೂಡಿಕೆ ಪ್ರಸ್ತಾವಗಳಿಗೆ ನಿಯಮ ಮೀರಿ ಅನುಮತಿ ನೀಡುವ ಮೂಲಕ ವಿದೇಶಿ ಹೂಡಿಕೆದಾರರ ಜತೆ ಚಿದು ಸಂಚಿನಲ್ಲಿ ಶಾಮೀಲಾಗಿದ್ದಾರೆ ಎಂಬ ಗಂಭೀರ ಆರೋಪವನ್ನು ಅದು ಮಾಡಿದೆ.

ವಿಶೇಷ ನ್ಯಾಯಾಧೀಶ ಒ.ಪಿ. ಸೈನಿ ಅವರ ಎದುರು ನ.26ರಂದು ಈ ಆರೋಪ ಪಟ್ಟಿಅವಗಾಹನೆಗೆ ಬರಲಿದೆ. ‘ಏರ್‌ಸೆಲ್‌- ಮ್ಯಾಕ್ಸಿಸ್‌’ ಟೆಲಿಕಾಂ ಕಂಪನಿಗಳ ನಡುವಿನ ಒಪ್ಪಂದ ಹಗರಣ ಸಂಬಂಧ ಮೊದಲ ಆರೋಪಪಟ್ಟಿಯಲ್ಲಿ ಚಿದಂಬರಂ ಅವರ ಪುತ್ರ ಕಾರ್ತಿ ಹೆಸರನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಪ್ರಮುಖವಾಗಿ ಹೆಸರಿಸಿತ್ತು. 2ನೇ ಆರೋಪಪಟ್ಟಿಯಲ್ಲಿ ಚಿದಂಬರಂ ಹೆಸರು ಇರುವುದು ಕಾಂಗ್ರೆಸ್ಸಿಗೆ ಮುಜುಗರ ತಂದಿದೆ.

ಆದರೆ, ತಮ್ಮ ಮೇಲಿನ ಆರೋಪಗಳನ್ನು ಚಿದಂಬರಂ ನಿರಾಕರಿಸಿದ್ದು, ‘ಇದರ ವಿರುದ್ಧ ನ್ಯಾಯಾಲಯದಲ್ಲೇ ಹೋರಾಡುವೆ’ ಎಂಬ ಒಂದು ಸಾಲಿನ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಆರೋಪಪಟ್ಟಿಯಲ್ಲಿ ಏನಿದೆ?:

2006ರಲ್ಲಿದ್ದ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನೀತಿ ಹಾಗೂ ನಿಯಮಗಳ ಪ್ರಕಾರ, ಅಂದಿನ ಹಣಕಾಸು ಸಚಿವ ಚಿದಂಬರಂ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ವಿದೇಶಿ ಹೂಡಿಕೆ ಉತ್ತೇಜನಾ ಮಂಡಳಿಯು (ಎಫ್‌ಐಇಬಿ), 600 ಕೋಟಿ ರು.ವರೆಗಿನ ವಿದೇಶಿ ಹೂಡಿಕೆ ಪ್ರಸ್ತಾವಗಳಿಗಷ್ಟೇ ಅನುಮತಿ ನೀಡಬಹುದಾಗಿತ್ತು. ಅದಕ್ಕಿಂತ ಹೆಚ್ಚಾದ ಪ್ರಸ್ತಾವಗಳನ್ನು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಅವಗಾಹನೆಗೆ ರವಾನಿಸಬೇಕಿತ್ತು.

ಆದರೆ ಎಫ್‌ಐಇಬಿ ನೇತೃತ್ವ ವಹಿಸಿದ್ದ ಚಿದಂಬರಂ ಅವರು ಮಾರಿಷಸ್‌ ಮೂಲದ ಗ್ಲೋಬಲ್‌ ಕಮ್ಯುನಿಕೇಷನ್ಸ್‌ ಆ್ಯಂಡ್‌ ಸರ್ವೀಸಸ್ ಹೋಲ್ಡಿಂಗ್ಸ್‌ ಕಂಪನಿಯ ಹೂಡಿಕೆ ಮೊತ್ತ 600 ಕೋಟಿ ರು.ಗಿಂತ ಅಧಿಕವಾಗಿದ್ದರೂ (3560 ಕೋಟಿ ರುಪಾಯಿ), ತಾವೇ ಅನುಮತಿ ನೀಡಿದ್ದರು. ಸಂಪುಟ ಸಮಿತಿಗೆ ನಿರ್ಧಾರದ ಹೊಣೆ ನೀಡಿರಲಿಲ್ಲ. ಏರ್‌ಸೆಲ್‌-ಮ್ಯಾಕ್ಸಿಸ್‌ ಒಪ್ಪಂದಕ್ಕೆ ಸಂಬಂಧಿಸಿದಂತೆ ಈ ಬಂಡವಾಳಕ್ಕೆ ಅನುಮತಿಸಲಾಗಿತ್ತು. ಇದಕ್ಕೆ ಪ್ರತಿಯಾಗಿ 1.16 ಕೋಟಿ ರು. ಹಣವು ಅಕ್ರಮವಾಗಿ ಚಿದು ಪುತ್ರ ಕಾರ್ತಿ ಚಿದಂಬರಂ ಪುತ್ರನ ಕಂಪನಿಗೆ ‘ಪ್ರತಿಫಲ’ದ ರೂಪದಲ್ಲಿ ಸಂದಾಯವಾಗಿತ್ತು. ಹೀಗಾಗಿ ಇದೊಂದು ರೀತಿಯ ‘ಕೊಡುಕೊಳ್ಳುವಿಕೆ ಪ್ರಕರಣ’ ಎಂಬ ಮಾಹಿತಿ ಚಾಜ್‌ರ್‍ಶೀಟ್‌ನಲ್ಲಿದೆ.

ತನ್ನ ಮೊದಲ ಚಾಜ್‌ರ್‍ಶೀಟ್‌ನಲ್ಲಿ ಚಿದಂಬರಂ ಪುತ್ರನನ್ನು ಹೆಸರಿಸಿದ್ದ ಇ.ಡಿ., ಈಗ ಇದಕ್ಕೆ ಪೂರಕವಾಗಿ ಈ ಸಂಚಿನಲ್ಲಿ ಚಿದಂಬರಂ ಕೂಡ ಭಾಗಿಯಾಗಿದ್ದಾರೆ ಎಂದು ಈಗ ಆರೋಪಿಸಿದೆ. ಇದಕ್ಕೆ ಸಾಕ್ಷಿಯಾಗಿ ಚಿದಂಬರಂ ನೀಡಿದ ಅನುಮತಿಗಳಿಗೂ ಕಾರ್ತಿ ಚಿದಂಬರಂ ಅವರ ಕಂಪನಿಗೆ ಬಂದ ಹೂಡಿಕೆಗೂ ಸಂಬಂಧವಿದೆ ಎಂದು ಸಾಬೀತು ಮಾಡುವ ಇ-ಮೇಲ್‌ ಸಂವಹನಗಳನ್ನೂ ಒದಗಿಸಿದೆ.

ಏನಿದು ಪ್ರಕರಣ?

ಭಾರತದ ಟೆಲಿಕಾಂ ಕಂಪನಿ ಏರ್‌ಸೆಲ್‌ನಲ್ಲಿ ಹೂಡಿಕೆ ಮಾಡುವುದಾಗಿ ಮಲೇಷ್ಯಾದ ಮ್ಯಾಕ್ಸಿಸ್‌ ಕಂಪನಿ ಪ್ರಸ್ತಾಪವಿಟ್ಟಿತ್ತು. ಸುಮಾರು 3560 ಕೋಟಿ ರು. ವಿದೇಶಿ ಹೂಡಿಕೆಯ ಪ್ರಸ್ತಾಪವದು. 2006ರಲ್ಲಿ ವಿತ್ತ ಸಚಿವರಾಗಿದ್ದ ಪಿ.ಚಿದಂಬರಂ ಈ ಡೀಲ್‌ಗೆ ಅನುಮತಿ ನೀಡಿದ್ದರು. ಆಗಿನ ವಿದೇಶಿ ಹೂಡಿಕೆ ನಿಯಮಗಳ ಪ್ರಕಾರ 600 ಕೋಟಿ ರು.ಗಿಂತ ಹೆಚ್ಚಿನ ಹೂಡಿಕೆಗೆ ಸಂಪುಟದ ಒಪ್ಪಿಗೆ ಬೇಕಿತ್ತು. ಈ ನಿಯಮ ಪಾಲನೆಯಾಗಿಲ್ಲ. ಅಲ್ಲದೆ, ಈ ಹೂಡಿಕೆಗೆ ಅನುಮತಿ ನೀಡಿದ್ದಕ್ಕೆ ಪ್ರತಿಯಾಗಿ ಚಿದಂಬರಂ ಪುತ್ರ ಕಾರ್ತಿ ಅವರ ಕಂಪನಿಗೆ 1.16 ಕೋಟಿ ರು.ನಷ್ಟುಅಕ್ರಮವಾಗಿ ಪ್ರತಿಫಲ (ಕಿಕ್‌ಬ್ಯಾಕ್‌) ಸಂದಾಯವಾಗಿತ್ತು ಎಂಬ ಆರೋಪವಿದೆ. ಒಟ್ಟಾರೆ ಅಕ್ರಮ ವ್ಯವಹಾರ ಸಂಚಿನಲ್ಲಿ ಪಾಲ್ಗೊಂಡ ಆಪಾದನೆ ಮೇರೆಗೆ ಚಿದಂಬರಂ ಅವರನ್ನು ಮೊದಲನೇ ಆರೋಪಿಯಾಗಿ ಉಲ್ಲೇಖಿಸಿ ಜಾರಿ ನಿರ್ದೇಶನಾಲಯ ಆರೋಪಪಟ್ಟಿಸಲ್ಲಿಸಿದೆ.

ಸಾಬೀತಾದರೆ  7 ವರ್ಷ ಜೈಲು

ಚಿದಂಬರಂ ಅಲ್ಲದೇ, ಕಾರ್ತಿ ಚಿದಂಬರಂ ಅವರ ಲೆಕ್ಕಪರಿಶೋಧಕ ಎಸ್‌. ಭಾಸ್ಕರರಾಮನ್‌, ಏರ್‌ಸೆಲ್‌ ಮಾಜಿ ಸಿಇಒ ವಿ. ಶ್ರೀನಿವಾಸನ್‌, ಮ್ಯಾಕ್ಸಿಸ್‌ ಕಂಪನಿಯ ಪಾಲುದಾರನಾಗಿದ್ದ ಆಗಸ್ಟಸ್‌  ಮಾರ್ಷಲ್‌ ಕಂಪನಿ,  ಏಷ್ಯಾ ನೆಟ್‌ ವರ್ಕ್ಸ್‌ ಲಿ., ಏರ್‌ಸೆಲ್‌ ಟೆಲಿವೆಂಚರ್ಸ್‌, ಮ್ಯಾಕ್ಸಿಸ್‌ ಮೊಬೈಲ್‌ ಸರ್ವೀಸ್, ಬುಮಿ ಅರ್ಮಡಾ ಬೆರ್ಹಾಡ್‌, ಬುಮಿ ಅರ್ಮಡಾ ನೇವಿಗೇಶನ್‌ ಕಂಪನಿಗಳ ವಿರುದ್ಧವೂ ಆರೋಪ ಪಟ್ಟಿ ದಾಖಲಿಸಲಾಗಿದೆ. ಒಟ್ಟು 9 ವ್ಯಕ್ತಿಗಳು/ಕಂಪನಿಗಳ ವಿರುದ್ಧ ಇ.ಡಿ. ಆರೋಪ ಹೊರಿಸಿದೆ. ಎಲ್ಲ 9 ವ್ಯಕ್ತಿಗಳು/ಕಂಪನಿಗಳ ಮೇಲೆ ಅಕ್ರಮ ಹಣ ವರ್ಗಾವಣೆ ಕಾಯ್ದೆಯ 3 ಮತ್ತು 4ನೇ ಪರಿಚ್ಛೇದದ ಅನ್ವಯ ಆರೋಪ ಪಟ್ಟಿ  ಸಲ್ಲಿಸಲಾಗಿದ್ದು, ಆಪಾದನೆಗಳು ಸಾಬೀತಾದರೆ ದಂಡದ ಜತೆ ಗರಿಷ್ಠ 7 ವರ್ಷ ಜೈಲುಶಿಕ್ಷೆ ವಿಧಿಸಲಾಗುತ್ತದೆ.

click me!