
ನವದೆಹಲಿ (ಎ.01): ಉತ್ತರ ಪ್ರದೇಶ ಚುನಾವಣೆ ಫಲಿತಾಂಶ ಬಳಿಕ ಇಲೆಕ್ಟ್ರಾನಿಕ್ ವೋಟಿಂಗ್ ಮಶೀನ್ (ಇವಿಎಂ)ಗಳ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ, ಮಧ್ಯಪ್ರದೇಶದಲ್ಲಿ ಪ್ರಾತ್ಯಕ್ಷಿಕೆ ನಡೆಸುವ ಸಂದರ್ಭದಲ್ಲಿ ಇವಿಎಂವೊಂದರಲ್ಲಿ ಗಂಭೀರವಾದ ದೋಷ ಕಂಡುಬಂದಿದ್ದು, ಚುನಾವಣಾ ಆಯೋಗವು ತನಿಖೆಯನ್ನು ಆದೇಶಿಸಿದೆ.
ಮಧ್ಯ ಪ್ರದೇಶದ ಭೀಂಡ್ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದ್ದು, ಪೂರ್ವಸಿದ್ಧತೆಯಾಗಿ ಚುನಾವಣಾ ಅಧಿಕಾರಿಗಳು ಪತ್ರಕರ್ತರ ಸಮ್ಮುಖದಲ್ಲಿ ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಂಡಿತ್ತು. ಈ ಸಂದರ್ಭದಲ್ಲಿ ಇವಿಎಂ ಜತೆಗೆ ಮತದಾರರಿಗೆ ದೃಢೀಕರಣಕ್ಕಾಗಿ ವೋಟರ್ ವೆರಿಫೇಯೇಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿಪಿಏಟಿ) ವ್ಯವಸ್ಥೆಯನ್ನು ಮಾಡಲಾಗಿತ್ತು. ಆದರೆ, ಮತದಾರರರು ಯಾವುದೇ ಪಕ್ಷದ ಎದುರಿರುವ ಗುಂಡಿಯನ್ನು ಒತ್ತಿದಾಗ ಅದು ಬಿಜೆಪಿಗೆ ಖಾತೆಗೆ ದಾಖಲಾಗುತ್ತಿದ್ದುದು ವಿವಿಪಿಏಟಿಯಿಂದ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಈ ದೋಷ ಬೆಳಕಿಗೆ ಬಂದ ಕೂಡಲೇ, ಚುನಾವಣಾ ಅಧಿಕಾರಿಗಳು ಅದನ್ನು ವರದಿ ಮಾಡದಂತೆ ಪತ್ರಕರ್ತರಿಗೆ ತಾಕೀತು ಮಾಡಿ, ಪೊಲೀಸ್ ಕಸ್ಟಡಿಗೆ ಒಪ್ಪಿಸುವುದಾಗಿ ಬೆದರಿಕೆವೊಡ್ಡಿದ್ದಾರೆಂಬ ಆರೋಪವೂ ಕೇಳಿ ಬಂದಿದೆ.
ಅದಾಗ್ಯೂ ಸ್ಥಳೀಯ ಮಾಧ್ಯಮಗಳು ಲೋಪವನ್ನು ವರದಿ ಮಾಡಿದ್ದು, ಚುನಾವಣಾ ಆಯೋಗವು ಜಿಲ್ಲಾ ಚುನಾವಣಾ ಅಧಿಕಾರಿಗಳಿಂದ ವರದಿಯನ್ನು ಕೇಳಿದ್ದಾರೆ.
ಉತ್ತರ ಪ್ರದೇಶ ಚುನಾವಣೆ ಬಳಿಕ ಇವಿಎಂ ಯಂತ್ರಗಳ ಬಗ್ಗೆ ವ್ಯಾಪಕವಾಗಿ ಚರ್ಚೆಯಾಗುತ್ತಿದ್ದು, ರಾಜಕೀಯ ಪಕ್ಷಗಳು ಇವಿಎಂ ಬಳಕೆಗೆ ಆಕ್ಷೇಪ ವ್ಯಕ್ತಪಡಿಸುತ್ತಿವೆ. ಸುಪ್ರಿಂ ಕೋರ್ಟ್’ನಲ್ಲೂ ಈ ಕುರಿತು ಅರ್ಜಿ ಸಲ್ಲಿಸಲಾಗಿದ್ದು, ಚುನಾವಣಾ ಆಯೋಗವು ಇವಿಎಂಗಳ ಬಳಕೆಯನ್ನು ಸಮರ್ಥಿಸುತ್ತಾ ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.