ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನಲೆ ಜಾಹಿರಾತು ಕಡ್ಡಾಯ: ಆಯೋಗ

By Web DeskFirst Published Oct 11, 2018, 11:50 AM IST
Highlights

ಯಾವುದೇ ಚುನಾವಣೆಗಳಲ್ಲಿ ಅಭ್ಯರ್ಥಿಗಳು ತಮ್ಮ ಮೇಲಿನ ಕ್ರಿಮಿನಲ್ ಆರೋಪಗಳ ಕುರಿತು ಮುದ್ರಣ ಮಾಧ್ಯಮ ಮತ್ತು ಟೀವಿ ವಾಹಿನಿಗಳಲ್ಲಿ ಕನಿಷ್ಠ 3 ಬಾರಿ ಜಾಹೀರಾತು ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ. ರಾಜಕೀಯವನ್ನು ಅಪರಾಧ ಮುಕ್ತವಾಗಿಸಲು ಈ ನೀತಿ ಜಾರಿಗೆ ತರಲಾಗಿದೆ. 

ನವದೆಹಲಿ (ಅ. 11): ರಾಜಕೀಯವನ್ನು ಅಪರಾಧಮುಕ್ತಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಚುನಾವಣಾ ಆಯೋಗ ಹೊಸ ಕಾನೂನು ಜಾರಿಗೊಳಿಸಿದೆ.

ಇದರನ್ವಯ, ಇನ್ನು ಮುಂದಿನ ಯಾವುದೇ ಚುನಾವಣೆಗಳಲ್ಲಿ ಅಭ್ಯರ್ಥಿಗಳು ತಮ್ಮ ಮೇಲಿನ ಕ್ರಿಮಿನಲ್ ಆರೋಪಗಳ ಕುರಿತು ಮುದ್ರಣ ಮಾಧ್ಯಮ ಮತ್ತು ಟೀವಿ ವಾಹಿನಿಗಳಲ್ಲಿ ಕನಿಷ್ಠ 3 ಬಾರಿ ಜಾಹೀರಾತು
ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ.

Latest Videos

ನವೆಂಬರ್- ಡಿಸೆಂಬರ್‌ನಲ್ಲಿ ನಡೆಯಲಿರುವ 5 ರಾಜ್ಯಗಳ ವಿಧಾನಸಭಾ ಚುನಾವಣೆ ವೇಳೆಯಿಂದಲೇ ಈ ಹೊಸ ನಿಯಮ ಜಾರಿಗೆ ಬಂದಿದೆ. ಕ್ರಿಮಿನಲ್ ಹಿನ್ನೆಲೆ ಬಗ್ಗೆ ಅಭ್ಯರ್ಥಿಗಳು ಹಾಗೂ ಅವರು ಪ್ರತಿನಿಧಿಸುವ ರಾಜಕೀಯ ಪಕ್ಷಗಳು, ಈ ಬಗ್ಗೆ ಜಾಹೀರಾತು ನೀಡುವ ಮೂಲಕ ಜನರಿಗೆ ಮಾಹಿತಿ ನೀಡುವುದನ್ನು ಕಡ್ಡಾಯ ಮಾಡುವ ನಿಯಮ ಜಾರಿಗೆ ಕೇಂದ್ರ ಸರ್ಕಾರಕ್ಕೆ ಚುನಾವಣಾ ಆಯೋಗ ಸಲಹೆ ನೀಡಿತ್ತು.

ಆ ಸಲಹೆಯನ್ನು ಕೇಂದ್ರ ಕಾನೂನು ಸಚಿವಾಲಯ ಮಾನ್ಯ ಮಾಡಿ ಬುಧವಾರ ಅಧಿಸೂಚನೆ ಹೊರಡಿಸಿದೆ. ಅದರ ಬೆನ್ನಲ್ಲೇ, ಹೊಸ ನಿಯಮ ಜಾರಿಗೊಳಿಸಿ ಕೇಂದ್ರ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.

ಇದರನ್ವಯ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ ಬಳಿಕ, ಪ್ರಮುಖ ದಿನಪತ್ರಿಕೆ ಮತ್ತು ಟೀವಿಗಳಲ್ಲಿ ಕ್ರಿಮಿನಲ್ ಕೇಸಲ್ಲಿ ತಾವು ಈಗಾಗಲೇ ಶಿಕ್ಷೆ ಅನುಭವಿಸಿದ್ದರೆ ಅಥವಾ ಕ್ರಿಮಿನಲ್ ಆರೋಪ ಎದುರಿಸುತ್ತಿದ್ದರೆ ಅದರ ಬಗ್ಗೆ ಕನಿಷ್ಠ 3 ಬಾರಿ ಜಾಹೀರಾತು ನೀಡಬೇಕು.  

click me!