ಗುಜರಾತ್ ಶಾಸಕರನ್ನು ಡಿಕೆಶಿ ಯಾಕೆ ರಕ್ಷಣೆ ಮಾಡ್ಬೇಕಿತ್ತು?| ಗುಜರಾತ್ನಲ್ಲಿ ಅವರಿಗೆ ವಾರಸುದಾರರು, ಬಂಧು ಬಳಗ ಇರಲಿಲ್ವಾ?| ಉಪ್ಪು ತಿಂದವರು ನೀರು ಕುಡಿಯಬೇಕು ಎಂದ ಡಿಸಿಎಂ ಗೋವಿಂದ ಕಾರಜೋಳ
ಬಾಗಲಕೋಟೆ[ಆ.31]: ಒಂದೆಡೆ ಮನಿ ಲಾಂಡರಿಂಗ್ ಸುಳಿಗೆ ಸಿಲುಕಿರುವ ಡಿಕೆ ಶಿವಕುಮಾರ್ ED ಅಧಿಕಾರಿಗಳ ವಿಚಾರಣೆಯನ್ನೆದುರಿಸುತ್ತಿದ್ದಾರೆ. ಹೀಗಿರುವಾಗ ಡಿಕೆಶಿ ವಿರುದ್ಧ ಕೇಂದ್ರ ಸರ್ಕಾರ ಸೇಡಿನ ರಾಜಕಾರಣ ನಡೆಸುತ್ತಿದೆ ಎಂಬ ಮಾತುಗಳು ಜೋರಾಗಿವೆ. ಇವೆಲ್ಲದರ ಬೆನ್ನಲ್ಲೇ ಡಿಸಿಎಂ ಗೋವಿಂದ ಕಾರಜೋಳ 'ಗುಜರಾತ್ ಶಾಸಕರನ್ನು ಯಾಕೆ ರಕ್ಷಿಸ್ಬೇಕಿತ್ತು? ಉಪ್ಪು ತಿಂದವರು ನೀರು ಕುಡಿಯಲೇ ಬೇಕು' ಎಂದ್ದಾರೆ. ಈ ಮಾತುಗಳು ಮತ್ತಷ್ಟು ವಿವಾದ ಹುಟ್ಟುಹಾಕಿದೆ.
ಗುಜರಾತ್ ನಲ್ಲಿ ಕಾಂಗ್ರೆಸ್ ಶಾಸಕರನ್ನು ರಕ್ಷಣೆ ಮಾಡಿದ್ದಕ್ಕೆ ರಕ್ತ ಹೀರುತ್ತಿದ್ದಾರೆ ಎಂಬ ಡಿಕೆಶಿ ಹೇಳಿಕೆಗೆ ಬಾಗಲಕೋಟೆಯಲ್ಲಿ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ 'ಗುಜರಾತ್ ಶಾಸಕರನ್ನು ಡಿಕೆಶಿ ಯಾಕೆ ರಕ್ಷಣೆ ಮಾಡ್ಬೇಕಿತ್ತು? ಗುಜರಾತ್ನಲ್ಲಿ ಅವರಿಗೆ ವಾರಸುದಾರರು, ಬಂಧು ಬಳಗ ಇರಲಿಲ್ವಾ? ಉಪ್ಪು ತಿಂದವರು ನೀರು ಕುಡಿಯಬೇಕು' ಎಂದಿದ್ದಾರೆ.
ED ಸುಳಿಯಲ್ಲಿ ಡಿಕೆ ಶಿವಕುಮಾರ್: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿರುವ ಕಾರಜೋಳ 'ಇನ್ನಾದರೂ ಕಾಂಗ್ರೆಸ್ ನವರಿಗೆ ಬುದ್ದಿ ಬಂದಿಲ್ಲ, ತಿಳಿದು ಮಾತನಾಡಲಿ. ಮುಂದಿನ 10 ವರ್ಷ ಕಾಂಗ್ರೆಸ್ ನವರಿಗೆ ಪ್ರತಿಭಟನೆ ಮಾಡೋದೆ ಕೆಲಸ' ಎಂದು ಲೇವಡಿ ಮಾಡಿದ್ದಾರೆ.
ಇಷ್ಟೇ ಅಲ್ಲದೇ ಸಿದ್ದರಾಮಯ್ಯ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಡಿಸಿಎಂ 'ಸಿದ್ದರಾಮಯ್ಯ ಆರೋಪ ಸತ್ಯಕ್ಕೆ ದೂರವಾದುದು. 70 ವರ್ಷ ಯಾರ್ಯಾರ ಮೇಲೆ ತನಿಖೆ, ಕೇಸ್ ನಡೆದಿವೆ ಅದನ್ನು ಕಾಂಗ್ರೆಸ್ ನವರು ಮಾಡಿದ್ದಾರೆ ಎನ್ನುವುದಕ್ಕೆ ಉತ್ತರವಿದೆಯಾ? ಕಾಂಗ್ರೆಸ್ ನವರು ಹತಾಶೆ ಭಾವನೆಯಿಂದ ಆರೋಪ ಮಾಡುತ್ತಿದ್ದಾರೆ. ಇಡೀ ದೇಶ, ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಿದ್ದಾರೆ' ಎಂದಿದ್ದಾರೆ.