ನೋಟ್'ಬ್ಯಾನ್ ಬಗ್ಗೆ ಮಾಜಿ ಆರ್'ಬಿಐ ಡೆಪ್ಯೂಟಿ ಗವರ್ನರ್ ಬಿಚ್ಚಿಟ್ಟ ಮಾರ್ಮಿಕ ಸತ್ಯಗಳು

Published : Nov 19, 2016, 03:36 AM ISTUpdated : Apr 11, 2018, 12:38 PM IST
ನೋಟ್'ಬ್ಯಾನ್ ಬಗ್ಗೆ ಮಾಜಿ ಆರ್'ಬಿಐ ಡೆಪ್ಯೂಟಿ ಗವರ್ನರ್ ಬಿಚ್ಚಿಟ್ಟ ಮಾರ್ಮಿಕ ಸತ್ಯಗಳು

ಸಾರಾಂಶ

ನೋಟ್'ಗಳು ಕಪ್ಪುಹಣವಲ್ಲ ಎಂಬುದು ಗೊತ್ತಿರಲಿ. ತೆರಿಗೆ ಕಟ್ಟದ ವ್ಯಕ್ತಿಗೆ ಆ ನೋಟು ಸೇರಿದರೆ ಅದು ಕಪ್ಪುಹಣವಾಗುತ್ತದೆ. ಕಾಳಧನಿಕನಿಂದ ಮತ್ತೆ ಆ ಹಣವು ತೆರಿಗೆ ಪಾವತಿಸುವ ವ್ಯಕ್ತಿಯ ಕೈಸೇರಿದರೆ ವೈಟ್ ಮನಿಯಾಗುತ್ತದೆ. ಇಲ್ಲಿ ಕಪ್ಪುಹಣದ ವಿಚಾರದಲ್ಲಿ ತೆರಿಗೆ ಪಾವತಿಸದಿರುವ ವ್ಯಕ್ತಿ ಹಾಗೂ ವ್ಯವಸ್ಥೆಯದ್ದೇ ಲೋಪ. ಈ ಲೋಪವನ್ನು ಮುಚ್ಚದೇ ಬರೀ ನೋಟ್ ಹಿಂಪಡೆಯುವುದರಿಂದ ಏನು ಪ್ರಯೋಜನ? ಮತ್ತೆ ಕಪ್ಪುಹಣದ ಸೃಷ್ಟಿಕ್ರಿಯೆ ಮುಂದುವರಿಯುತ್ತಲೇ ಇರುತ್ತದೆ.

ನವದೆಹಲಿ: ದೇಶದಲ್ಲಿ ಈಗ 500 ಮತ್ತು 1000 ರೂ ಮುಖಬೆಲೆಯ ನೋಟುಗಳ ನಿಷೇಧದ ಬಗ್ಗೆಯೇ ಮಾತು. ಸರಕಾರದ ನಿರ್ಧಾರದ ಬಗ್ಗೆ ಜನಸಾಮಾನ್ಯರಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ. ಆದರೆ, ತಜ್ಞರ ಅಭಿಪ್ರಾಯವೇನು? 2009ರಿಂದ 2014ರವರೆಗೆ ಭಾರತೀಯ ರಿಸರ್ವ್ ಬ್ಯಾಂಕ್'ನ ಡೆಪ್ಯುಟಿ ಗವರ್ನರ್ ಆಗಿದ್ದ ಡಾ. ಕೆ.ಸಿ.ಚಕ್ರಬರ್ತಿ ಅವರು ಇದರ ಬಗ್ಗೆ ಏನು ಹೇಳ್ತಾರೆ? ಸಿಎನ್'ಎನ್ ನ್ಯೂಸ್18 ವಾಹಿನಿ ಜೊತೆಗಿನ ಸಂದರ್ಶನದಲ್ಲಿ ಅವರು ವ್ಯಕ್ತಪಡಿಸಿದ ವಿಚಾರಗಳ ಸಾರಾಂಶ ಇಲ್ಲಿದೆ.

* ನೋಟ್ ನಿಷೇಧ ಕ್ರಮದ ಬಗ್ಗೆ:
ಬಹಳ ಗಂಭೀರ ಸಂದರ್ಭದಲ್ಲಿ ಬಹಳ ಹುಷಾರಾಗಿ ಬಳಸುವ ಅಸ್ತ್ರವಿದು. ಸರಿಯಾದ ಪೂರ್ವತಯಾರಿ ಇರಬೇಕು. ಸಾಮಾನ್ಯ ಸಂದರ್ಭಗಳಲ್ಲಿ ಇದರಿಂದ ಯಾವುದೇ ಪ್ರಯೋಜನವಿರುವುದಿಲ್ಲ. ಈ ಕ್ರಮದಿಂದ ಆರ್ಥಿಕ ಲಾಭಕ್ಕಿಂತ ವೆಚ್ಚವೇ ಅಧಿಕ. ಪ್ರಸಕ್ತ ಸರಕಾರದಲ್ಲಿ ಯಾರು ಈ ನಿರ್ಧಾರ ಕೈಗೊಂಡಿದ್ದಾರೋ ಅವರು ಪ್ರಧಾನಿ ಮೋದಿಗೆ ಸರಿಯಾಗಿ ವಿವರಿಸಿಲ್ಲವೆಂದನಿಸುತ್ತದೆ.

* ನೀವಿದ್ದಿದ್ದರೆ ಈ ನೋಟ್ ಬ್ಯಾನ್ ಹೇಗೆ ಜಾರಿಗೆ ತರುತ್ತಿದ್ದಿರಿ?
ಮೊದಲು ಈ ಕ್ರಮ ಅಗತ್ಯವೇ ಎಂಬುದನ್ನು ಕೇಳಿಕೊಳ್ಳುತ್ತಿದ್ದೆ. ಕಪ್ಪು ಹಣವು ಬಹುತೇಕ ಕ್ಯಾಷ್ ರೂಪದಲ್ಲಿದ್ದರೆ, ಸಿರಿವಂತರ ಬಳಿಯೇ ಹೆಚ್ಚಾಗಿದ್ದರೆ, ವ್ಯವಸ್ಥೆಯನ್ನು ಸರಿಪಡಿಸುವಂತಿದ್ದರೆ ಮಾತ್ರ ಇಂಥ ನಿರ್ಧಾರ ಕೈಗೊಳ್ಳುತ್ತಿದ್ದೆ. ಆದರೆ, ಸಾಮಾನ್ಯ ಸ್ಥಿತಿಯಲ್ಲಿ ಕಪ್ಪುಹಣ ಹತ್ತಿಕ್ಕುತ್ತೇನೆಂದು ಹೊರಡುವುದು ಅರ್ಥಹೀನವೆನಿಸುತ್ತದೆ.

* ಭ್ರಷ್ಟಾಚಾರ ಮತ್ತು ಕಪ್ಪುಹಣದ ವಿರುದ್ಧ ಹೋರಾಡುವುದು ಸರಕಾರದ ಉದ್ದೇಶವಿದೆಯಲ್ಲಾ?
ನೋಟ್'ಗಳು ಕಪ್ಪುಹಣವಲ್ಲ ಎಂಬುದು ಗೊತ್ತಿರಲಿ. ತೆರಿಗೆ ಕಟ್ಟದ ವ್ಯಕ್ತಿಗೆ ಆ ನೋಟು ಸೇರಿದರೆ ಅದು ಕಪ್ಪುಹಣವಾಗುತ್ತದೆ. ಕಾಳಧನಿಕನಿಂದ ಮತ್ತೆ ಆ ಹಣವು ತೆರಿಗೆ ಪಾವತಿಸುವ ವ್ಯಕ್ತಿಯ ಕೈಸೇರಿದರೆ ವೈಟ್ ಮನಿಯಾಗುತ್ತದೆ. ಇಲ್ಲಿ ಕಪ್ಪುಹಣದ ವಿಚಾರದಲ್ಲಿ ತೆರಿಗೆ ಪಾವತಿಸದಿರುವ ವ್ಯಕ್ತಿ ಹಾಗೂ ವ್ಯವಸ್ಥೆಯದ್ದೇ ಲೋಪ. ಈ ಲೋಪವನ್ನು ಮುಚ್ಚದೇ ಬರೀ ನೋಟ್ ಹಿಂಪಡೆಯುವುದರಿಂದ ಏನು ಪ್ರಯೋಜನ? ಮತ್ತೆ ಕಪ್ಪುಹಣದ ಸೃಷ್ಟಿಕ್ರಿಯೆ ಮುಂದುವರಿಯುತ್ತಲೇ ಇರುತ್ತದೆ.

* ನೋಟ್ ನಿಷೇಧದಿಂದ ಬಡವರ ಮೇಲೆಯೇ ಹೆಚ್ಚು ಪರಿಣಾಮ ಬೀರುತ್ತಾ?
ದೇಶದ ಬಹುತೇಕ ಕ್ಯಾಷ್ ಇರುವುದು ಬಡವರ ಬಳಿಯಲ್ಲೇ. ಶ್ರೀಮಂತರು ಬೇರೆ ಬೇರೆ ರೂಪದಲ್ಲಿ ಆಸ್ತಿ ಮಾಡಿರುತ್ತಾರೆ. ಬಹುತೇಕ ಬಡವರ ಚಲಾವಣೆ ಇರುವುದು ನಗದಿನಲ್ಲೇ. ತಮ್ಮ ಹಣವನ್ನು ಪಡೆಯಲು ಬಡ ವ್ಯಕ್ತಿ ಕ್ಯೂನಲ್ಲಿ ನಿಂತುಕೊಳ್ಳಬೇಕು. ಈ ಕ್ಯಾಷೇ ಇಲ್ಲದಿದ್ದರೆ ವ್ಯಾಪಾರ-ಉದ್ದಿಮೆಗೆ ಹಾನಿಯಾಗುತ್ತದೆ. ಇದರಿಂದ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.

* ಆರ್ಥಿಕತೆಗೆ ಹೇಗೆ ಧಕ್ಕೆಯಾಗುತ್ತದೆ?
ಹಣದ ಬದಲಾವಣೆಗೆ ಏನಿಲ್ಲವೆಂದರೂ 10-15 ಸಾವಿರ ಕೋಟಿ ರೂ ವೆಚ್ಚವಾಗುತ್ತದೆ. ಅದು ನೇರ ನಷ್ಟ. ಜೊತೆಗೆ, ಬ್ಯಾಂಕುಗಳು ಮುಂದಿನ 2 ತಿಂಗಳು ತಮ್ಮೆಲ್ಲಾ ಕೆಲಸ ಬಿಟ್ಟು ಈ ನೋಟು ಬದಲಾವಣೆ ಪ್ರಕ್ರಿಯೆಯಲ್ಲೇ ತೊಡಗಿಸಿಕೊಳ್ಳುತ್ತವೆ. ಇದು ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರುತ್ತದೆ.

* ಕ್ಯಾಷ್ ವಹಿವಾಟಿನ ಮೇಲೆ ಅವಲಂಬಿತವಾಗಿರುವ ಸ್ಥಳಗಳಲ್ಲಿ ನೋಟ್ ಬ್ಯಾನ್ ಕಥೆ?
ಹಣದ ವಹಿವಾಟು ತೀರಾ ಕಡಿಮೆಯಾಗಿಬಿಡುವ ಅಪಾಯವಿದೆ. ನೇರವಾಗಿ ಹೇಳಬೇಕೆಂದರೆ ಹಳೆಯ ನೋಟುಗಳು ಈಗಲೂ ಇಂಥ ಸ್ಥಳಗಳಲ್ಲಿ ಚಲಾವಣೆಯಲ್ಲಿದೆ. "ನನ್ನ ಬಳಿ ಬೇರೆ ನೋಟಿಲ್ಲ, ಇದೇ ಇರುವುದು" ಎಂದು ಗ್ರಾಹಕ ಹೇಳಿದರೆ ನೀವು ಅದನ್ನು ಸ್ವೀಕರಿಸದೇ ಬೇರೆ ದಾರಿ ಇರುವುದಿಲ್ಲ. ಸಂಪೂರ್ಣವಾಗಿ ನೋಟ್ ಬ್ಯಾನ್ ಮಾಡಬಹುದಲ್ಲ? ಆಸ್ಪತ್ರೆಯಲ್ಲಿ, ಏರ್'ಪೋರ್ಟ್'ನಲ್ಲಿ, ಬಿಲ್'ಪಾವತಿಯಲ್ಲಿ ಹಳೆ ನೋಟಿನ ಚಲಾವಣೆಗೆ ಯಾಕೆ ಅವಕಾಶ ನೀಡುತ್ತಿದ್ದೀರಿ? ಈ ರೀತಿಯಾಗಿ ಸೋರಿಕೆಗೆ ಅವಕಾಶ ಕೊಟ್ಟು ನೋಟು ಬ್ಯಾನ್ ಮಾಡಿದರೆ ಏನು ಪ್ರಯೋಜನ? ಇದು ನನಗೆ ಅರ್ಥವಾಗುತ್ತಿಲ್ಲ.

* ಜಿಡಿಪಿ ಮತ್ತು ವಿತ್ತೀಯ ಕೊರತೆ ಮೇಲೆ ಹೇಗೆ ಪರಿಣಾಮ?
ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂಬುದು ಸ್ಪಷ್ಟ. ಆದರೆ, ಜಿಡಿಪಿ ಎಷ್ಟು ಪ್ರಮಾಣದಲ್ಲಿ ಇಳಿಯುತ್ತದೆ ಎಂದು ಅಂದಾಜಿಸಲು ಸಾಧ್ಯವಿಲ್ಲ. ಆರ್ಥಿಕ ಪ್ರಗತಿ ಕುಸಿದರೆ ಸರಕಾರದ ತೆರಿಗೆ ಸಂಗ್ರಹದ ಪ್ರಮಾಣವೂ ಕಡಿಮೆಯಾಗುತ್ತದೆ. ಕಪ್ಪುಹಣದಿಂದ ಸರಕಾರಕ್ಕೆ ಅಂಥ ಯಾವುದೇ ಪ್ರಯೋಜನವಾಗುವುದಿಲ್ಲ. ಆದರೆ, ಕಪ್ಪುಹಣ ಹೊಂದಿರುವ ವ್ಯಕ್ತಿಯು ಮಾಲ್'ಗಳಲ್ಲಿ, ರೆಸ್ಟೋರೆಂಟ್'ಗಳಲ್ಲಿ ಅಥವಾ ಸರಕಾರಕ್ಕೆ ತೆರಿಗೆ ಪಾವತಿಸುವ ಸ್ಥಳಗಳಲ್ಲಿ ಏನಾದರೂ ಖರೀದಿ ಮಾಡಿದರೆ ಸರಕಾರಕ್ಕೆ ಲಾಭವಾಗುತ್ತದೆ. ಆದರೆ, ನೋಟ್ ಬ್ಯಾನ್'ನಿಂದ ದೇಶದ ಅರ್ಥಿಕತೆಗೆ ಆಗುವ ನಷ್ಟ ಹಾಗೂ ಜನಸಾಮಾನ್ಯರಿಗೆ ಆಗುವ ತೊಂದರೆಯನ್ನು ಪರಿಗಣಿಸಿದರೆ ಇದು ದೊಡ್ಡದೆನಿಸುವುದಿಲ್ಲ.

(ಕೃಪೆ: ತುಷಾರ್ ಧಾರಾ, ನ್ಯೂಸ್18)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮದುವೆ ಮಾತುಕತೆಗೆಂದು ಕರೆಸಿ ಎಂಜಿನಿಯರಿಂಗ್ ವಿದ್ಯಾರ್ಥಿಯ ಮಸಣಕ್ಕೆ ಅಟ್ಟಿದ ಗರ್ಲ್‌ಫ್ರೆಂಡ್ ಮನೆಯವರು
ಕೆನಡಾದ ಮಹಿಳಾ ವೈದ್ಯರಿಗೆ ತೋರಿಸಬಾರದನ್ನು ತೋರಿಸಿದ ಭಾರತೀಯ ಯುವಕನ ಬಂಧನ