
ಸಾಂದರ್ಭಿಕ ಚಿತ್ರ
ನವದೆಹಲಿ(ನ.28): ರಾತ್ರಿ ಮನೆಗೆ ಬರುವಾಗ ಕಾರು, ಬೈಕ್ ಗಳನ್ನು ನಿಲ್ಲಿಸುವ ಪೊಲೀಸರು, ಮಶೀನ್‌ವೊಂದನ್ನು ಬಾಯಿಗಿಟ್ಟು ಉಸಿರು ಬಿಡ್ರಿ ಅಂತಾ ಜೋರು ಧ್ವನಿಯಲ್ಲಿ ಹೇಳ್ತಾರಲ್ಲಾ ಅದಕ್ಕೆ ಆಲ್ಕೋಮೀಟರ್ ಅಂತಾ ಕರೀತಾರೆ.
ಈ ಆಲ್ಕೋಮೀಟರ್ ಕಂಡೊಡನೆ ಕುಡುಕರ ಎದೆಯಲ್ಲಿ ಸಣ್ಣದೊಂದು ನಡುಕ ಉಂಟಾಗುತ್ತದೆ. ಎಣ್ಣೆ ಹೊಡೆದು ಸಿಕ್ಕಿ ಬಿದ್ದರೆ ರಸ್ತೆಯಲ್ಲಿ ಪೊಲೀಸರಿಂದ ಮತ್ತು ಮನೆಯಲ್ಲಿ ಹೆಂಡ್ತಿಯಿಂದ ಬೈಯಿಸಿಕೊಳ್ಳಬೇಕಲ್ಲ ಎಂಬುದೇ ಕುಡುಕರ ಚಿಂತೆ.
ಇದೇ ಕಾರಣಕ್ಕೆ ಮದ್ಯಪಾನ ಮಾಡಿ ವಾಹನ ಚಲಾಯಿಸುವವರು ಪೊಲೀಸರಿಗೆ ಬಿಟ್ಟು ಬಿಡುವಂತೆ ಮನವಿ ಮಾಡುತ್ತಿರುತ್ತಾರೆ. ಕೆಲವರು ಮಾಡಿದ್ದುಣ್ಣೋ ಮಾರಾಯಾ ಅಂದಂಗೆ ದಂಡ ಕಟ್ಟಿ ಸುಮ್ಮನಾಗುತ್ತಾರೆ.
ಆದರೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪಣ್ಯಾತ್ಮನೋರ್ವ ಪೊಲೀಸರ ಕೈಯಿಂದ ಈ ಆಲ್ಕೋಮೀಟರ್ ಅನ್ನೇ ಕಿತ್ತುಕೊಂಡು ಪರಾರಿಯಾದ ಘಟನೆ ನಡೆದಿದೆ. ಆಲ್ಕೋಮೀಟರ್ ಬಾಯಿಗಿಟ್ಟು ಉಸಿರು ಬಿಡಿ ಅಂತಿದ್ದಂಗೇ ಕಾರಿನಲ್ಲಿದ್ದ ವ್ಯಕ್ತಿ ಆಲ್ಕೋಮೀಟರ್ ಸಮೇತ ಪರಾರಿಗಿದ್ದಾನೆ.
ಇಲ್ಲಿನ ಕನಾಟ್ ಪ್ಲೇಸ್ ಪ್ರದೇಶದಲ್ಲಿ ರಾತ್ರಿ ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆ ನಡೆಸುತ್ತಿದ್ದ ಪೊಲೀಸರು , ರಿಷಬ್ ದಿಂಗ್ರಾ ಎಂಬ ವ್ಯಕ್ತಿಯನ್ನು ತಡೆದು ಆಲ್ಕೋಮೀಟರ್ ಬಾಯಿಗಿಟ್ಟಿದ್ದಾರೆ. ಇದರಿಂದ ಸಿಡಿಮಿಡಿಗೊಂಡ ರಿಷಬ್, ಆಲ್ಕೋಮೀಟರ್ ಸಮೇತ ಕಾರನ್ನು ಚಲಾಯಿಸಿಕೊಂಡು ಪರಾರಿಯಾಗಿದ್ದಾನೆ.
ಕಾರಿನ ನಂಬರ್ ನೋಟ್ ಮಾಡಿಕೊಂಡ ಪೊಲೀಸರು, ಆತನ ಮನೆ ಪತ್ತೆ ಹಚ್ಚಿ ಬಗಿಲು ಬಡಿದರೆ ಸಾಹೇಬರು ಅದಾಗಲೇ ಲಂಡನ್‌ಗೆ ಹಾರಿದ್ದಾರೆ ಎಂಬ ಉತ್ತರ ನೌಕರಿನಿಂದ ಬಂದಿದೆ. ಸದ್ಯ ರಿಷಬ್ ದಿಂಗ್ರಾ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತಮ್ಮ ಆಲ್ಕೋಮೀಟರ್‌ಗಾಗಿ ಆತ ಲಂಡನ್‌ನಿಂದ ಮರಳಿ ಬರುವುದನ್ನೇ ಕಾಯುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.