ಭಾರತದ ಅತ್ಯಂತ ರಹಸ್ಯ ಮಾಹಿತಿ ಪಾಕ್‌ ಪಾಲು?

By Web DeskFirst Published Oct 9, 2018, 8:36 AM IST
Highlights

ಭಾರತದ ಅತ್ಯಂತ ರಹಸ್ಯವಾದ ಮಾಹಿತಿಯೊಂದು ಪಾಕಿಸ್ತಾನದ ಪಾಲಾಗಿದೆ ಎನ್ನುವ ಶಂಕೆಯ ಮೇರೆ ಬ್ರಹ್ಮೋಸ್ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಉದ್ಯೋಗಿಯೊಬ್ಬನನ್ನು ಮಹಾರಾಷ್ಟ್ರದ ನಾಗಪುರದಲ್ಲಿ ಸೋಮವಾರ ಬಂಧಿಸಲಾಗಿದೆ.

ನಾಗಪುರ :  ‘ಉಂಡ ಮನೆಗೆ ದ್ರೋಹ’ ಬಗೆಯುವ ಪ್ರಕರಣವೊಂದರಲ್ಲಿ, ಬ್ರಹ್ಮೋಸ್‌ ಕ್ಷಿಪಣಿಯ ರಹಸ್ಯ ಮಾಹಿತಿಗಳನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐಗೆ ಹಾಗೂ ಇತರ ಕೆಲವು ದೇಶಗಳಿಗೆ ಸೋರಿಕೆ ಮಾಡುತ್ತಿದ್ದ ಎನ್ನಲಾದ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಉದ್ಯೋಗಿಯೊಬ್ಬನನ್ನು ಮಹಾರಾಷ್ಟ್ರದ ನಾಗಪುರದಲ್ಲಿ ಸೋಮವಾರ ಬಂಧಿಸಲಾಗಿದೆ.

ಉತ್ತರಪ್ರದೇಶದ ಭಯೋತ್ಪಾದಕ ನಿಗ್ರಹ ದಳವು (ಎಟಿಎಸ್‌), ಸೇನಾ ಗುಪ್ತಚರ ವಿಭಾಗದ ಜತೆ ಜಂಟಿ ಕಾರ್ಯಾಚರಣೆ ನಡೆಸಿ ನಿಶಾಂತ್‌ ಅಗರ್‌ವಾಲ್‌ ಎಂಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಈತ ನಾಗಪುರದಲ್ಲಿರುವ ಬ್ರಹ್ಮೋಸ್‌ ಕ್ಷಿಪಣಿ ಸಂಶೋಧನಾ ಕೇಂದ್ರದ (ಬಿಎಂಆರ್‌ಸಿ) ತಾಂತ್ರಿಕ ಸಂಶೋಧನಾ ವಿಭಾಗದಲ್ಲಿ ಸೀನಿಯರ್‌ ಸಿಸ್ಟಂ ಎಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದ.

‘ನಿಶಾಂತ್‌ನನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಈತ ಪಾಕಿಸ್ತಾನದೊಂದಿಗೆ ಯಾವ್ಯಾವ ಮಾಹಿತಿಗಳನ್ನು ಹಂಚಿಕೊಂಡಿದ್ದ ಎಂಬ ಸಂಗತಿಗಳನ್ನು ಕಲೆ ಹಾಕಲಾಗುತ್ತಿದೆ. ಈತನ ಬಳಿ ಕ್ಷಿಪಣಿಗೆ ಸಂಬಂಧಿಸಿದ ಇನ್ನೂ ಹಲವಾರು ರಹಸ್ಯ ಮಾಹಿತಿಗಳು ಇರಬಹುದಾಗಿದ್ದು, ಅವನ್ನು ಈತ ವೈರಿ ದೇಶಗಳ ಜತೆ ಹಂಚಿಕೊಂಡಿರುವ ಶಂಕೆ ಇದೆ’ ಎಂದು ಎಟಿಎಸ್‌ ಮೂಲಗಳು ಹೇಳಿವೆ.

‘ಲಭ್ಯ ಮಾಹಿತಿಯ ಪ್ರಕಾರ, ಈತನ ಖಾಸಗಿ ಕಂಪ್ಯೂಟರನ್ನು ಶೋಧಿಸಿದಾಗ ತನ್ನ ಫೇಸ್‌ಬುಕ್‌ ಖಾತೆಯ ಮೂಲಕ ಪಾಕಿಸ್ತಾನದ ಫೇಸ್‌ಬುಕ್‌ ಖಾತೆಗಳ ಜತೆ ಚಾಟ್‌ ಮಾಡಿದ ಪುರಾವೆಗಳು ಲಭಿಸಿವೆ’ ಎಂದು ಉತ್ತರ ಪ್ರದೇಶ ಎಟಿಎಸ್‌ ಮಹಾನಿರೀಕ್ಷಕ ಅಸೀಂ ಅರುಣ್‌ ಹೇಳಿದ್ದಾರೆ. ಈತ ಪಾಕಿಸ್ತಾನಿ ಹುಡುಗಿಯರ ಬಲೆಗೆ ಬಿದ್ದು, ‘ಹನಿ ಟ್ರ್ಯಾಪ್‌’ಗೆ ಒಳಗಾಗಿದ್ದನೇ ಎಂಬ ದಿಶೆಯಲ್ಲಿ ಕೂಡ ತನಿಖೆ ನಡೆಸಲಾಗುತ್ತಿದೆ. ಬಂಧಿತನ ವಿರುದ್ಧ ‘ಕಚೇರಿ ರಹಸ್ಯ ಕಾಯ್ದೆ’ಯಡಿ ಪ್ರಕರಣ ದಾಖಲಾಗಿದೆ.

ಚಿನ್ನದ ಪದಕ ವಿಜೇತ:

ನಿಶಾಂತ್‌ ಕುರುಕ್ಷೇತ್ರದ ನ್ಯಾಷನಲ್‌ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (ಎನ್‌ಐಟಿ) ಪದವೀಧರನಾಗಿದ್ದು, ಚಿನ್ನದ ಪದಕ ವಿಜೇತನಾಗಿದ್ದ. ಅತ್ಯಂತ ಬುದ್ಧಿವಂತ ಎಂಜಿನಿಯರ್‌ ಆಗಿದ್ದ. ಕಳೆದ ವಾರವಷ್ಟೇ ಈತ ವಿವಾಹವಾಗಿದ್ದ.

ಬ್ರಹ್ಮೋಸ್‌ ಬಗ್ಗೆ:  ‘ಬ್ರಹ್ಮೋಸ್‌’ ಎಂಬುದು ಸೂಪರ್‌ಸಾನಿಕ್‌ ಕ್ರೂಸ್‌ ಕ್ಷಿಪಣಿಯಾಗಿದ್ದು, ಹಡಗು ಮತ್ತು ಭೂ ಗುರಿಗಳನ್ನು ಇಟ್ಟುಕೊಂಡು ಬಳಸಲಾಗುತ್ತದೆ. ಇದು 300 ಕಿ.ಮೀ. ಸುತ್ತಳತೆಯಲ್ಲಿ ಸಾಗಬಹುದಾದ ಕ್ಷಮತೆ ಹೊಂದಿದೆ. ಹಡಗು, ಜಲಾಂತರ್ಗಾಮಿ, ವಿಮಾನ ಹಾಗೂ ಭೂ ವಾಹನಗಳಿಗೆ ಇದನ್ನು ಅಳವಡಿಸಬಹುದಾಗಿದೆ. 2001ರ ಜೂನ್‌ ಹಾಗೂ 2002ರ ಏಪ್ರಿಲ್‌ನಲ್ಲಿ ಇದನ್ನು ಪರೀಕ್ಷೆಗೆ ಗುರಿಪಡಿಸಲಾಗಿದ್ದು, ಎರಡೂ ಯತ್ನಗಳು ಯಶಸ್ವಿಯಾಗಿವೆ.

ರಕ್ಷಣಾ ಇಲಾಖೆ ಅಧೀನದಲ್ಲಿ ಬರುವ ಡಿಆರ್‌ಡಿಒ ಹಾಗೂ ರಷ್ಯಾದ ಎನ್‌ಪಿಒಎಂ ಸಂಸ್ಥೆಗಳ ಜಂಟಿ ಸಹಭಾಗಿತ್ವದಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಭಾರತೀಯ ಸೇನೆ, ವಾಯುಪಡೆ ಹಾಗೂ ನೌಕಾಪಡೆಯ ಪ್ರಮುಖ ಅಸ್ತ್ರಗಳಲ್ಲಿ ಬ್ರಹ್ಮೋಸ್‌ ಕೂಡ ಒಂದಾಗಿದೆ.

click me!