ಅಮೆರಿಕದಲ್ಲಿ ಜನಿಸಿದ ಭಾರತೀಯರಿಗೆ ಸಂಕಷ್ಟ; ಜನ್ಮದತ್ತ ಅಮೆರಿಕ ಪೌರತ್ವ ರದ್ದು?

By Web DeskFirst Published Aug 23, 2019, 7:52 AM IST
Highlights

ಅಮೆರಿಕದಲ್ಲಿ ಜನಿಸಿದ ಮಗುವಿಗೆ ಜನ್ಮದತ್ತ ನಾಗರಿಕತ್ವ ನೀಡುವ ನೀತಿಯನ್ನು ರದ್ದುಗೊಳಿಸುವುದಾಗಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬುಧವಾರ ಬೆದರಿಕೆಯೊಡ್ಡಿದ್ದಾರೆ. ಒಂದು ವೇಳೆ ಈ ನೀತಿ ರದ್ದಾದರೆ ಅಮೆರಿಕದಲ್ಲಿ ಜನಿಸಿದ ಭಾರತೀಯರ ಮೇಲೂ ಭಾರೀ ಪರಿಣಾಮ ಬೀರಲಿದೆ. 

ವಾಷಿಂಗ್ಟನ್‌ (ಆ. 23): ಅಮೆರಿಕದಲ್ಲಿ ಜನಿಸಿದ ಮಗುವಿಗೆ ಜನ್ಮದತ್ತ ನಾಗರಿಕತ್ವ ನೀಡುವ ನೀತಿಯನ್ನು ರದ್ದುಗೊಳಿಸುವುದಾಗಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬುಧವಾರ ಬೆದರಿಕೆಯೊಡ್ಡಿದ್ದಾರೆ. ಒಂದು ವೇಳೆ ಈ ನೀತಿ ರದ್ದಾದರೆ ಅಮೆರಿಕದಲ್ಲಿ ಜನಿಸಿದ ಭಾರತೀಯರ ಮೇಲೂ ಭಾರೀ ಪರಿಣಾಮ ಬೀರಲಿದೆ.

ಶ್ವೇತಭವನದ ಹೊರಗೆ ಸುದ್ದಿಗಾರರ ಜೊತೆ ಮಾತನಾಡಿದ ಟ್ರಂಪ್‌, ‘ಜನ್ಮದತ್ತ ನಾಗರಿಕತ್ವವನ್ನು ನಾವು ಅಂತ್ಯಂತ ಗಂಭೀರವಾಗಿ ಪರಿಗಣಿಸಿದ್ದೇವೆ. ನಮ್ಮ ದೇಶದ ನೆಲದಲ್ಲಿ ನೀವು ಮಗು ಪಡೆದು ಬಳಿಕ ನಿಮ್ಮ ದೇಶಕ್ಕೆ ಹೋಗುತ್ತೀರಿ. ಆದರೆ, ನಿಮ್ಮ ಮಗು ಅಮೆರಿಕದ ನಾಗರಿಕ ಎನಿಸಿಕೊಳ್ಳುತ್ತದೆ. ಈ ನೀತಿಯೇ ಹಾಸ್ಯಾಸ್ಪದ’ ಎಂದು ಹೇಳಿದರು.

ಇದೇ ವೇಳೆ ಭಾರತೀಯ ಮೂಲದ ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ ಆಕಾಂಕ್ಷಿ ಕಮಲಾ ಹ್ಯಾರಿಸ್‌, ಜನ್ಮಜಾತ ನಾಗರಿಕತ್ವ ರದ್ದುಗೊಳಿಸುವ ಟ್ರಂಪ್‌ ಹೇಳಿಕೆಯನ್ನು ಖಂಡಿಸಿದ್ದಾರೆ. ಟ್ರಂಪ್‌ ಅವರು ಸಂವಿಧಾನವನ್ನು ಓದುವುದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಟ್ವೀಟ್‌ ಮಾಡಿದ್ದಾರೆ.

2016ರ ಅಧ್ಯಕ್ಷೀಯ ಚುನಾವಣೆಯ ಪ್ರಚಾರದ ವೇಳೆ ಟ್ರಂಪ್‌, ತಾವು ಅಧಿಕಾರಕ್ಕೆ ಬಂದರೆ ಜನ್ಮಜಾತ ಅಮೆರಿಕ ನಾಗರಿಕತ್ವ ನೀತಿಯನ್ನು ರದ್ದು ಮಾಡುವುದಾಗಿ ಘೋಷಿಸಿದ್ದರು.

ಏನಿದು ಜನ್ಮದತ್ತ ನಾಗರಿಕತ್ವ?

ಅಮೆರಿಕದ ಸಂವಿಧಾನದ 14ನೇ ತಿದ್ದುಪಡಿ ಜನ್ಮದತ್ತ ನಾಗರಿಕತ್ವವನ್ನು ದಯಪಾಲಿಸಿದೆ. ಅಮೆರಿಕದಲ್ಲಿ ಜನಿಸಿದ ಅಥವಾ ಅಮೆರಿಕದಲ್ಲಿ ಪೋಷಿಸಲ್ಪಟ್ಟಎಲ್ಲಾ ವ್ಯಕ್ತಿಗಳು ಅಮೆರಿಕದ ನಾಗರಿಕರೆನಿಸಕೊಳ್ಳುತ್ತಾರೆ ಮತ್ತು ಅವರು ಅಮೆರಿಕದಲ್ಲಿ ನೆಲೆಸಬಹುದಾಗಿದೆ ಎಂದು ತಿಳಿಸಿದೆ.

ಹೀಗಾಗಿ ಅಮೆರಿಕದಲ್ಲಿ ಉದ್ಯೋಗಕ್ಕೆಂದು ತೆರಳಿದ ವ್ಯಕ್ತಿಗಳು ಮಗುವನ್ನು ಪಡೆದರೆ ಅವರ ಮಕ್ಕಳು ನೈಸರ್ಗಿಕವಾಗಿ ಅಮೆರಿಕದ ನಾಗರಿಕರಾಗುತ್ತಾರೆ. ಬಳಿಕ ಆ ಮಕ್ಕಳು ದೊಡ್ಡವರಾದ ಬಳಿಕ ಅಮೆರಿಕದಲ್ಲಿ ನೆಲೆಸುವುದಕ್ಕೆ ಅವಕಾಶವಿದೆ. ಈ ನೀತಿಯನ್ನು ರದ್ದು ಮಾಡುವುದರಿಂದ ಅಮೆರಿಕದಲ್ಲಿ ಜನಿಸಿದ ಹೊರತಾಗಿಯೂ ಹಲವಾರು ಭಾರತೀಯರು ಅಮೆರಿಕದಲ್ಲಿ ನೆಲೆಸುವ ಅವಕಾಶದಿಂದ ವಂಚಿತರಾಗಲಿದ್ದಾರೆ. 

click me!