ಡಿ.ಕೆ ಶಿವಕುಮಾರ್‌ಗೆ ಈ ಬಾರಿಯೂ ಇಂಧನ ಖಾತೆ ?

First Published May 28, 2018, 9:11 AM IST
Highlights

 ಕಾಂಗ್ರೆಸ್‌ನ ಪ್ರಭಾವಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಇಂಧನ ಖಾತೆ ದೊರೆಯುವುದು ಬಹುತೇಕ ಖಚಿತ ಎನ್ನಲಾಗಿದೆ. ಶಿವ ಕುಮಾರ್ ಅವರಿಗೆ ಇಂಧನ ಖಾತೆ ನೀಡುವುದಕ್ಕೆ ಯಾವುದೇ ಸಮಸ್ಯೆ ಇಲ್ಲ. ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷ ಹುದ್ದೆಯನ್ನು ವಹಿಸಿಕೊಳ್ಳಲಿ ಎಂಬುದು ಹೈಕಮಾಂಡ್ ಬಯಕೆ. 
 

ಬೆಂಗಳೂರು  : ಕಾಂಗ್ರೆಸ್‌ನ ಪ್ರಭಾವಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಇಂಧನ ಖಾತೆ ದೊರೆಯುವುದು ಬಹುತೇಕ ಖಚಿತ ಎನ್ನಲಾಗಿದೆ. ಶಿವ ಕುಮಾರ್ ಅವರಿಗೆ ಇಂಧನ ಖಾತೆ ನೀಡುವುದಕ್ಕೆ ಯಾವುದೇ ಸಮಸ್ಯೆ ಇಲ್ಲ. ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷ ಹುದ್ದೆಯನ್ನು ವಹಿಸಿಕೊಳ್ಳಲಿ ಎಂಬುದು ಹೈಕಮಾಂಡ್ ಬಯಕೆ. 

ಆದರೆ, ಅಧ್ಯಕ್ಷ ಹುದ್ದೆಯ ಜತೆಗೆ ಇಂಧನ ಖಾತೆಯೂ ಬೇಕು ಎಂಬುದು ಶಿವಕುಮಾರ್ ಬೇಡಿಕೆ. ಹೀಗಾಗಿ, ಅಧ್ಯಕ್ಷ ಗಾದಿಯ ಹುದ್ದೆಯ ಬಗ್ಗೆ ತೀರ್ಮಾನ ಕೈಗೊಳ್ಳದ ಹೈಕಮಾಂಡ್, ಇಂಧನ ಖಾತೆ ನೀಡುವುದಕ್ಕೆ ಯಾವುದೇ ಅಭ್ಯಂತರ ಹೊಂದಿಲ್ಲ ಎನ್ನಲಾಗಿದೆ.

 ಆದರೆ, ಜೆಡಿಎಸ್ ಕೂಡ ಇಂಧನ ಖಾತೆಗಾಗಿ ಪಟ್ಟು ಹಿಡಿದಿದೆ. ಈ ಹಿಂದೆ ಕುಮಾರಸ್ವಾಮಿ ಅವರ ಸಂಪುಟದಲ್ಲಿ ಇಂಧನ ಖಾತೆ ನಿರ್ವಹಿಸಿದ್ದ ಎಚ್.ಡಿ. ರೇವಣ್ಣ ಅವರೂ ಇಂಧನ ಖಾತೆಯ ಮೇಲೆ ಒಲವು ಹೊಂದಿದ್ದರು. ಆದರೆ, ಶಿವಕುಮಾರ್ ಅವರು ಈ ಬಗ್ಗೆ ಜೆಡಿಎಸ್ ನಾಯಕತ್ವದೊಂದಿಗೆ ಮಾತುಕತೆ ನಡೆಸಿದ್ದು, ಇಂದನ ಖಾತೆಯನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲು ಜೆಡಿಎಸ್ ನಾಯಕತ್ವದ ಮನವೊಲಿಸಿದ್ದಾರೆ ಎನ್ನಲಾಗಿದೆ. 

ಇದೇ ರೀತಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಜಲಸಂಪನ್ಮೂಲ ಖಾತೆ ಹೊಂದಿದ್ದ ಎಂ.ಬಿ. ಪಾಟೀಲ್ ಈ ಬಾರಿಯೂ ಅದೇ ಖಾತೆಗೆ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಆದರೆ, ಜೆಡಿಎಸ್ ಈ ಖಾತೆಯನ್ನು ಬಿಟ್ಟುಕೊಡಲು ಒಪ್ಪುತ್ತಿಲ್ಲ. ಒಂದು ವೇಳೆ ಜೆಡಿಎಸ್ ಈ  ಖಾತೆಯನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟರೆ ಆಗ ಎಂ.ಬಿ. ಪಾಟೀಲರಿಗೆ ಈ ಖಾತೆ ದೊರೆಯಬಹುದು. ಇದೇ ವೇಳೆ ಕಾಂಗ್ರೆಸ್ ಹೈಕಮಾಂಡ್ ಎಂ.ಬಿ. ಪಾಟೀಲರ ಹೆಸರನ್ನು ಕೆಪಿಸಿಸಿ ಅಧ್ಯಕ್ಷ ಗಾದಿಗೂ ಪರಿಗಣಿಸಿದೆ. 

ರೂಪಾ, ಲಕ್ಷ್ಮೀ, ರಘು ಆಚಾರ್‌ಗೆ ಅದೃಷ್ಟ?: ಇನ್ನು ಪ್ರಥಮ ಬಾರಿಗೆ ಶಾಸಕರಾದವರ ಪೈಕಿ ರೂಪಾ ಶಶಿಧರ್, ಲಕ್ಷ್ಮೀ ಹೆಬ್ಬಾಳಕರ್ ಗೂ ರಘು ಆಚಾರ್ ಅವರಿಗೆ ಸಂಪುಟ ಸೇರ್ಪಡೆಯ ಅದೃಷ್ಟ ಖುಲಾಯಿ ಸಬಹುದು. ಪರಿಶಿಷ್ಟ ಎಡಗೈ ಪಂಗಡದಿಂದ ಗೆದ್ದಿರುವ ಏಕೈಕ ಶಾಸಕಿಯಾದ ರೂಪಾ ಶಶಿಧರ್ ಅವರಿಗೆ ಸಚಿವ ಸ್ಥಾನ ದೊರಕಿಸಿಕೊಡಲು ಅವರ ತಂದೆಯಾದ ಸಂಸದ ಕೆ.ಎಚ್.ಮುನಿಯಪ್ಪ ತೀವ್ರ  ಪ್ರಯತ್ನ ನಡೆಸಿದ್ದಾರೆ. 

ದೆಹಲಿಯಲ್ಲಿ ಬೀಡುಬಿಟ್ಟು ಅವರು ಹೈಕಮಾಂಡ್‌ನ ತಮ್ಮ ಸಂಪರ್ಕಗಳ ಮೂಲಕ ರೂಪಾ ಶಶಿಧರ್ ಅವರನ್ನು ಸಂಪಟಕ್ಕೆ  ಸೇರ್ಪಡೆಗೊಳಿಸಲು ಪ್ರಯತ್ನ ನಡೆಸಿದ್ದಾರೆ. ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಲಕ್ಷ್ಮೀ ಹೆಬ್ಬಾಳಕರ್ ಪರವೂ ತೀವ್ರ ಲಾಬಿ ನಡೆದಿದೆ. ಪ್ರಭಾವಿ ನಾಯಕ ಡಿ.ಕೆ. ಶಿವಕುಮಾರ್ ಅವರು ಲಕ್ಷ್ಮೀ ಹೆಬ್ಬಾಳಕರ್ ಪರ ಪ್ರಬಲ ಲಾಬಿ ನಡೆಸಿದ್ದು, ಬಹುತೇಕ ಈ ಬಾರಿ ಇಬ್ಬರು ಮಹಿಳೆಯರು ಸಂಪುಟದಲ್ಲಿ ಅವಕಾಶ ಗಿಟ್ಟಿಸುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ. 

ಇನ್ನು ಹಿಂದುಳಿದ ವರ್ಗಗಳ ಕೋಟಾದಲ್ಲಿ ಚಿತ್ರದುರ್ಗದ ರಘು ಆಚಾರ್ ಅವರ ಹೆಸರು ಪ್ರಬಲವಾಗಿ ಪರಿಗಣನೆಯಾಗುತ್ತಿದೆ. ಚಿತ್ರ ದುರ್ಗದಿಂದ ಆಯ್ಕೆಯಾದ ಏಕೈಕ ಕಾಂಗ್ರೆಸ್ ಶಾಸಕರಾದವರು ರಘು ಆಚಾರ್. ಈ ಜಿಲ್ಲೆಯಲ್ಲಿ ಜೆಡಿಎಸ್‌ನಿಂದ ಯಾರೂ ಆಯ್ಕೆ ಯಾಗಿಲ್ಲ. ಚಿತ್ರದುರ್ಗ ಜಿಲ್ಲೆಗೆ ಕಾಲಿಟ್ಟಿರುವ ಬಿಜೆಪಿಯ ಶ್ರೀರಾಮುಲು ಅವರ ಪ್ರಭಾವವನ್ನು ಜಿಲ್ಲೆಯಲ್ಲಿ ಕಡಿಮೆ ಮಾಡಬೇಕು ಎಂದರೆ ಚಿತ್ರದುರ್ಗ ಜಿಲ್ಲೆಯಲ್ಲಿ ಒಬ್ಬರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಚಿಂತನೆ ಹೈಕಮಾಂಡ್‌ನಲ್ಲಿರುವುದು ರಘು ಆಚಾರ್‌ಗೆ ವರದಾನ ವಾಗಿದೆ ಎಂದು ಮೂಲಗಳು ತಿಳಿಸಿವೆ.

click me!